ADVERTISEMENT

`ಪ್ರಜಾಪ್ರಭುತ್ವ ಕುಂಭಕರ್ಣ ನಿದ್ದೆಯಲ್ಲಿದೆ'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 8:18 IST
Last Updated 23 ಏಪ್ರಿಲ್ 2013, 8:18 IST

ಶಿವಮೊಗ್ಗ: ಇಂದು ಮತದಾರರು ಕುಂಭಕರ್ಣರಾಗಿದ್ದಾರೆ. ಹೆಂಡಕ್ಕೊ, ಹಣಕ್ಕೋ ಮಾರಿಕೊಳ್ಳುತ್ತಿದ್ದಾರೆ. 5 ವರ್ಷ ಮಲಗಿರುತ್ತಾರೆ, ಮತ್ತೆ ರಾಜಕಾರಣಿಗಳೇ ಬಂದು ಹಣ, ಆಮಿಷಗಳನ್ನು ಒಡ್ಡಿ ಎಬ್ಬಿಸಬೇಕಾಗಿದೆ. ಇದರಿಂದ ಪ್ರಜಾಪ್ರಭುತ್ವ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ಹಿರಿಯ ಸ್ವತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಸೋಮವಾರ ರಾಷ್ಟ್ರೀಯ ಶಿಕ್ಷಣ ಸಮಿತಿ ಹಮ್ಮಿಕೊಂಡಿದ್ದ ಎಸ್.ಆರ್. ನಾಗಪ್ಪಶೆಟ್ಟಿ ಜನ್ಮ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇದು ಪ್ರಜಾಪ್ರಭುತ್ವ, ನಮಗೆ ಪರಮಾಧಿಕಾರ ಇದೆ. ಆದರೆ, ಕೆಲವರು ಮತ ಹಾಕಲು ತಯಾರಿಲ್ಲ. ನಮ್ಮ ಅಧಿಕಾರ ನಮಗೆ ಗೊತ್ತಿಲ್ಲ. ನಮಗೆ ಜವಾಬ್ದಾರಿ, ಹೊಣೆಗಾರಿಕೆ ಬರುವವರೆಗೂ ದೇಶ ಉದ್ಧಾರವಾಗುವುದಿಲ್ಲ ಎಂದು ಎಚ್ಚರಿಸಿದರು.

ಪ್ರಜಾಪ್ರಭುತ್ವವನ್ನು ಭದ್ರ ಮಾಡುವ ಕೆಲಸ ಆಗಬೇಕು. ಇದಕ್ಕೆ ಮತದಾರರು ಎಚ್ಚರಗೊಳ್ಳಬೇಕು ಎಂದು ಆಶಿಸಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಪ್ರಾಸ್ತಾವಿಕ ಮಾತನಾಡಿದರು. ಎನ್‌ಇಎಸ್ ಅಧ್ಯಕ್ಷ ಜಿ. ನಂಜುಂಡಪ್ಪ ಅಧ್ಯಕ್ಷತೆ ವಹಿಸಿದ್ದರು. ಆರ್.ವಿ. ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಕೆ. ಪಾಂಡುರಂಗ ಶೆಟ್ಟಿ, ಟ್ರಸ್ಟಿಗಳಾದ ಸುಶೀಲಮ್ಮ ನಾಗಪ್ಪ ಶೆಟ್ಟಿ, ಎನ್‌ಇಎಸ್ ಜಿ.ಎಸ್. ನಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.