ADVERTISEMENT

ಫ್ಯೂಶನ್ ಕಾವ್ಯದ ಧ್ವನಿ ವಿಸ್ತರಿಸುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 7:20 IST
Last Updated 14 ಅಕ್ಟೋಬರ್ 2012, 7:20 IST

ಸಾಗರ: ಕನ್ನಡದ ಕಾವ್ಯ ಮತ್ತು ಕೀರ್ತನೆಗಳನ್ನು ಪಾಶ್ಚಾತ್ಯ ಸಂಗೀತದ ಮಾದರಿಗಳಿಗೆ ಅಳವಡಿಸುವ ನಮ್ಮ ತಂಡದ ಹೊಸ ಪ್ರಯೋಗ ಕಾವ್ಯದ ಧ್ವನಿಗಳನ್ನು ವಿಸ್ತರಿಸುವ ಪ್ರಯತ್ನದ ಭಾಗವೇ ಹೊರತು ಯುವ ಪೀಳಿಗೆಯನ್ನು ಮೆಚ್ಚಿಸಲೆಂದು ಮಾಡಿದ ಪ್ರಯೋಗವಲ್ಲ ಎಂದು ಗಾಯಕಿ ಎಂ.ಡಿ. ಪಲ್ಲವಿ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆದ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಶನಿವಾರ ಕನ್ನಡದ ಕಾವ್ಯ ಹಾಗೂ ಕೀರ್ತನೆಗಳನ್ನು ಪಾಶ್ಚಾತ್ಯ ಸಂಗೀತದ ಮಾದರಿಗಳಿಗೆ ಅಳವಡಿಸಿರುವ ಪ್ರಯೋಗದ ಕುರಿತು ಅವರು ಮಾತನಾಡಿದರು.

ಕನ್ನಡದ ಕಾವ್ಯ ಮತ್ತು ಕೀರ್ತನೆಗಳನ್ನು ಪಾಶ್ಚಾತ್ಯ ಸಂಗೀತದ ಮಾದರಿಗಳ ಮೂಲಕ ಪ್ರಸ್ತುತಪಡಿಸಿದರೂ ಅದರ ಭಾವ ಮತ್ತು ಚೌಕಟ್ಟು ಸಂಪೂರ್ಣವಾಗಿ ಭಾರತೀಯವಾದದ್ದೆ ಆಗಿದೆ ಎಂದು ಸ್ಪಷ್ಟಪಡಿಸಿದರು.
ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ನಾವು ಕಂಡುಕೊಂಡಿರುವ ಹೊಸ ಮಾರ್ಗ ಇದಾಗಿದ್ದು ಯಾವುದನ್ನೂ ತಿರಸ್ಕರಿಸುವ ಉದ್ದೇಶ ನಮ್ಮ ತಂಡಕ್ಕೆ ಇಲ್ಲ. ಈ ಪ್ರಯೋಗ ಇನ್ನೂ ಆರಂಭಿಕ ಹಂತದಲ್ಲಿದ್ದು ಇದನ್ನು ಒಂದು `ಉತ್ಪನ್ನ~ ಎಂದು ಪರಿಗಣಿಸದೆ  ಪ್ರಯೋಗದ ಪ್ರಾರಂಭದ ಹಂತ ಎಂದೇ ಪರಿಗಣಿಸುವಂತೆ ಕೋರಿದರು.

ಗೋಷ್ಠಿ ನಿರ್ವಹಿಸಿದ ಚಲನಚಿತ್ರ ನಿರ್ದೇಶಕ ಪ್ರಕಾಶ್ ಬೆಳವಾಡಿ ಮಾತನಾಡಿ, ಯಾವುದೇ ಕಲಾ ಪ್ರಕಾರದಲ್ಲಿ ಪ್ರೇಕ್ಷಕರು ಕಲಾವಿದರಿಗೆ ತಮ್ಮದೇ ಆದ ಒಂದು ಚೌಕಟ್ಟಿನೊಳಗೆ ಕಲ್ಪಿಸಿಕೊಂಡಿರುತ್ತಾರೆ. ಈ ಚೌಕಟ್ಟನ್ನು ಮೀರಿದಾಗ ಅವರನ್ನು ಸುಲಭವಾಗಿ ಒಪ್ಪಿಕೊಳ್ಳುವ ಮನೋಸ್ಥಿತಿ ಪ್ರೇಕ್ಷಕರಿಗೆ ಇರುವುದಿಲ್ಲ. ಆದರೆ, ಕಲಾವಿದರಿಗೆ ಪ್ರೇಕ್ಷಕರ ನಿರೀಕ್ಷೆ ಮೀರಿದ ಆಸೆಗಳಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರೆ ಎಂ.ಡಿ.ಪಲ್ಲವಿ ಅವರ ತಂಡದ ಹೊಸ ಪ್ರಯೋಗದ ಹೊಳಹು ತಿಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಂಗೀತದ ಒಂದು ಪ್ರಕಾರವನ್ನು ಇನ್ನೊಂದು ಪ್ರಕಾರಕ್ಕೆ ಅಳವಡಿಸುವಾಗ ಗಾಯಕರ ಗಾಯನದ ಜತೆಗೆ ಗಿಟಾರ್, ಡ್ರಮ್ ಇನ್ನಿತರ ವಾದ್ಯಗಳೂ ಭಾವದ ಕೇಂದ್ರವನ್ನು ಹುಡುಕುತ್ತವೆ. ಹೀಗೆ ಪ್ರೇಕ್ಷಕರೂ ಇಂತಹ ಭಾವಕೇಂದ್ರವನ್ನು ಹುಡುಕುವ ಪ್ರಯತ್ನ ಮಾಡಿದರೆ ಪ್ರಯೋಗದ ಸಾರ್ಥಕತೆ ಮನಗಾಣಬಹುದು ಎಂದರು.

ರಂಗಕರ್ಮಿ ಕೆ.ವಿ. ಅಕ್ಷರ ಮಾತನಾಡಿ, ಸಂಗೀತದಂತೆ ಸಾಹಿತ್ಯವೂ ಸಂಪ್ರದಾಯಸ್ಥವೇ ಆಗಿದೆ. ಹಾಗೆ ನೋಡಿದರೆ ಸಾಹಿತ್ಯಕ್ಕಿಂತ ಸಂಗೀತವೇ ಹೆಚ್ಚು ಸಂಪ್ರದಾಯಸ್ಥವಾದುದು. ನಮ್ಮ ಸಂಸ್ಕೃತಿಯಲ್ಲೆ ಮುಳುಗಿದ್ದರೆ ಭೋಗಾಪೇಕ್ಷೆ ಮೂಡುತ್ತದೆ, ಸಂಪೂರ್ಣವಾಗಿ ಬೇರೆ ಸಂಸ್ಕೃತಿಗೆ ಹೋದರೆ ಅನ್ಯಪ್ರಾಪ್ತಿ ಲಭ್ಯವಾಗುತ್ತದೆ. ಇವೆರಡೂ ಪ್ರಾಪ್ತಿಗಳ ಸಂಸ್ಕರಣೆಯಾದರೆ ಪ್ರಗತಿಯಾಗುತ್ತದೆ ಎಂಬ ಪುತಿನ ಅವರ ಮಾತುಗಳನ್ನು ನೆನಪಿಸಿದರು.

ಎಲ್ಲಾ ಹೊಸ ಪ್ರಯೋಗಗಳಲ್ಲೂ ಸಮಸ್ಯೆ ಇದ್ದೇ ಇರುತ್ತದೆ. `ಫ್ಯೂಶನ್~ನಂತಹ ಹೊಸ ಪ್ರಯೋಗಗಳಿಂದ ಸಂಗೀತ ಹೊಸ ದಿಕ್ಕಿಗೆ ಸಾಗಬಲ್ಲದು. ಸುಗಮ ಸಂಗೀತ ಪ್ರಕಾರದ ಮೂಲಕವೇ ಗುರುತಿಸಿಕೊಂಡಿರುವ ಎಂ.ಡಿ. ಪಲ್ಲವಿ ಹೊಸ ಪ್ರಯೋಗದ ಮೂಲಕ ತಾವು ನೆಚ್ಚಿಕೊಂಡಿರುವ ಪ್ರಕಾರಕ್ಕೆ `ಬಂಡಾಯ~ ಸಾರಿದ್ದಾರೆ ಎಂದು ಹೇಳಿದರು.

ನಂತರ ಶುಕ್ರವಾರ ಪ್ರದರ್ಶನಗೊಂಡ ಬೆಂಗಳೂರಿನ ಸಂಚಾರಿ ಥಿಯೇಟರ್ ತಂಡದ `ವ್ಯಾನಿಟಿ ಬ್ಯಾಗ್~ ರಂಗ ಪ್ರಸ್ತುತಿ ಕುರಿತು ಚರ್ಚೆ ಸಂವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.