ADVERTISEMENT

ಬಡವರೊಂದಿಗೆ ಸ್ಪಂದಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 10:25 IST
Last Updated 7 ಫೆಬ್ರುವರಿ 2012, 10:25 IST

ಸೊರಬ: `ಪಕ್ಷದ ಕಾರ್ಯಕರ್ತರು ಬಡವರೊಂದಿಗೆ ಸ್ಪಂದಿಸಬೇಕು. ಕಾರ್ಯಾಲಯ ಸಾರ್ವಜನಿಕರಿಗಾಗಿ ಸದಾ ಕಾಲ ತೆರೆದಿರಬೇಕು~ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ನುಡಿದರು.

ಸೋಮವಾರ ಪಟ್ಟಣದ ಎನ್.ಎಸ್. ರಾವ್ ಕಟ್ಟಡದಲ್ಲಿ ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ, ತಂದೆ ಬಂಗಾರಪ್ಪ ಮೇಲೆ ಅಭಿಮಾನ ಇಟ್ಟು ಜೆಡಿಎಸ್, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ತಮಗೆ ನೀಡಿರುವ ಸ್ಥಾನದಿಂದ ಜವಾಬ್ದಾರಿ ಹೆಚ್ಚಾಗಿದೆ. ಪಕ್ಷ ಬಲಪಡಿಸಲು ತಾವು 24 ತಾಸು ಕೆಲಸ ಮಾಡಲು ಸಿದ್ಧರಿರುವುದಾಗಿ ತಿಳಿಸಿದ ಅವರು, ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ತೆರಳಲು ಕಾರ್ಯಕರ್ತರು ಅಪ್ಪಣೆ ನೀಡಬೇಕು ಎಂದು ಮನವಿ ಮಾಡಿದರು.

ಚುನಾವಣೆ ಯಾವುದೇ ಸಂದರ್ಭದಲ್ಲಿ ಎದುರಾಗಲಿದ್ದು, `ಗೆದ್ದೇ ಸಚಿವ ಆಗಬೇಕು ಎಂಬ ಗುರಿ ಹೊಂದಿದ್ದೇನೆ. ಕಾರ್ಯಕರ್ತರ ಶಕ್ತಿಯ ಮೇಲೆ ಸಂಪೂರ್ಣ ಭರವಸೆ ಇಟ್ಟಿದ್ದೇನೆ. ಮಧು ಬಂಗಾರಪ್ಪ ಗೆಲ್ಲಬೇಕು. ವಿರೋಧಿಗಳು ಸೋಲಬೇಕು ಎಂಬ ಉದ್ದೇಶ ಎಲ್ಲರದ್ದಾಗಲಿ~ ಎಂದು ಕರೆ ನೀಡಿದರು.

ಎಚ್.ಡಿ. ಕುಮಾರಸ್ವಾಮಿ ಬಂಗಾರಪ್ಪ ಅವರ ಚಿಂತನೆಯ ತದ್ರೂಪು ಆಗಿದ್ದಾರೆ. ಬೈಸಿಕಲ್ ವಿತರಣೆ, ಭಾಗ್ಯಲಕ್ಷ್ಮೀ ಮುಂತಾದ ಯೊಜನೆಗಳು ವಾಸ್ತವವಾಗಿ ಅವರು ನೀಡಿದ ಕೊಡುಗೆ ಆಗಿವೆ ಎಂದರು.

`ದಂಡಾವತಿ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಬಡಾಯಿ ಕೊಚ್ಚಿದವರು ಎದುರಿಗೆ ಬರಲಿ~ ಎಂದು ಸವಾಲೆಸೆದ ಅವರು, ಕಳೆದ ಚುನಾವಣೆಯಲ್ಲಿ ಬಂಗಾರಪ್ಪ ಸೋಲಲು ಬಿಜೆಪಿಯ ಹಣ ಹಾಗೂ ಕುಮಾರ್ ಬಂಗಾರಪ್ಪ ಕಾರಣ ಎಂದು ಆರೋಪಿಸಿದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ದಾನಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಕುಮಾರ್, ಪ.ಪಂ. ಉಪಾಧ್ಯಕ್ಷ ಪ್ರಶಾಂತ್‌ಮೇಸ್ತ್ರಿ, ಸದಸ್ಯ ಮಂಚಿ ಸೋಮಪ್ಪ, ಎಚ್. ಗಣಪತಿ. ಎಂ.ಡಿ. ಶೇಖರ್, ಶ್ರೀಪಾದರಾವ್, ಸುರೇಶ್ ಒಡೆಯರ್, ತಾ.ಪಂ. ಸದಸ್ಯರಾದ ಕೆ. ಅಜ್ಜಪ್ಪ, ವೀರಭಧ್ರಗೌಡ, ಬರಗಿ ನಿಂಗಪ್ಪ, ಆತಿಕ್, ಕುಮಾರಸ್ವಾಮಿ, ಫಯಾಜ್ ಇತರರು ಇದ್ದರು.

ಮಾಜಿ ಗ್ರಾ.ಪಂ. ಅಧ್ಯಕ್ಷೆ ಪಾರ್ವತಮ್ಮ ಹಾಗೂ ಅನೇಕ ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲ್ಲೂಕು ಘಟಕದ ವತಿಯಿಂದ ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.