ADVERTISEMENT

ಬಾಂಬ್ ಸ್ಫೋಟ ಖಂಡಿಸಿ ವಿವಿಧೆಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 10:40 IST
Last Updated 9 ಸೆಪ್ಟೆಂಬರ್ 2011, 10:40 IST

ಸಾಗರ: ಇಲ್ಲಿನ ವಕೀಲರ ಸಂಘದ ಸದಸ್ಯರು ದೆಹಲಿ ಹೈಕೋರ್ಟ್ ಆವರಣದಲ್ಲಿ ನಡೆದ ಬಾಂಬ್ ಸ್ಪೋಟವನ್ನು ಖಂಡಿಸಿ ಭಯೋತ್ಪಾದಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗುರುವಾರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಭಯೋತ್ಪಾದಕರು ನಡೆಸಿರುವ ಸಂಚಿನ ಭಾಗವಾಗಿದೆ. ಇಂತಹ ದೇಶವಿರೋಧಿ ಚಟುವಟಿಕೆಯನ್ನು ತಡೆಗಟ್ಟಲು ಬೇಹುಗಾರಿಕೆ ವಿಭಾಗವನ್ನು ಬಲಗೊಳಿಸಬೇಕು ಎಂದು ವಕೀಲರು ಒತ್ತಾಯಿಸಿದರು.

ಭಯೋತ್ಪಾದನೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿರುವ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಲ್ಲಿ ಯಾವುದೇ ರೀತಿಯ ವಿಳಂಬ ಆಗಬಾರದು. ದೇಶದ ಎಲ್ಲಾ ನ್ಯಾಯಾಲಯಗಳಲ್ಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ವಕೀಲರು ಆಗ್ರಹಿಸಿದರು.

ನ್ಯಾಯಾಧೀಶರು ಹಾಗೂ ವಕೀಲರಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಿದರೆ ಸಾಲದು; ನ್ಯಾಯ ಕೇಳಿ ಬರುವ ಸಾರ್ವಜನಿಕರಿಗೂ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ವಕೀಲರು ಪ್ರತಿಪಾದಿಸಿದರು.

ವಕೀಲರ ಸಂಘದ ಕಾರ್ಯದರ್ಶಿ ಕೆ.ಎಲ್. ಭೋಜರಾಜ್, ಬಿ.ತ್ಯಾಗಮೂರ್ತಿ, ಮಹಮ್ಮದ್ ಹಾಶಂ, ಮುಕ್ತಿಯಾರ್, ರಮೇಶ್ ಎಚ್.ಬಿ. ,ಅಣ್ಣಪ್ಪ, ವಿಶ್ವನಾಥ, ಕನ್ನಪ್ಪ, ಕೆ.ಟಿ. ರಾಧಾಕೃಷ್ಣ, ವಿನಯ್, ಉಲ್ಲಾಸ್ ಇನ್ನಿತರರು ಹಾಜರಿದ್ದರು.

ಸೊರಬ ವರದಿ
ದೆಹಲಿ ಹೈಕೋರ್ಟ್ ಆವರಣದಲ್ಲಿ ದುಷ್ಕರ್ಮಿಗಳು ನಡೆಸಿದ ಬಾಂಬ್ ದಾಳಿಯನ್ನು  ತಾಲ್ಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ.

ಗುರುವಾರ ನ್ಯಾಯಾಲಯ ಕಲಾಪಗಳಿಂದ ಹೊರಗುಳಿದು ಖಂಡನೆ ಸೂಚಿಸಿದ ವಕೀಲರು, ಸ್ಫೋಟದಿಂದ ಸಾವನ್ನಪ್ಪಿದ ವ್ಯಕ್ತಿಗಳಿಗೆ ಸಂತಾಪ ಸೂಚಿಸಿದರು.

ದುಷ್ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.

ಸಂಘದ ಅಧ್ಯಕ್ಷ ರುದ್ರಪ್ಪ, ಮಾಜಿ ಅಧ್ಯಕ್ಷರಾದ ಎಂ. ನಾಗಪ್ಪ, ಸೈಯದ್ ಅಬ್ದುಲ್ ರಹಮಾನ್, ವೈ.ಜಿ. ಪುಟ್ಟಸ್ವಾಮಿ, ಮಂಚಪ್ಪ, ವೀರಭದ್ರಪ್ಪ, ರೇಖಾ, ಪಾರ್ವತಿ, ಸುಧಾಕರ ನಾಯ್ಕ ಮೊದಲಾದ ವಕೀಲರು ಹಾಜರಿದ್ದರು.

ಭದ್ರಾವತಿ ವರದಿ
ದೆಹಲಿ ಬಾಂಬ್ ಸ್ಫೋಟ ಪ್ರಕರಣವನ್ನು ಖಂಡಿಸಿ ಸ್ಥಳೀಯ ವಕೀಲರು ಗುರುವಾರ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ನ್ಯಾಯಾಲಯದ ಮೇಲೆ ಒತ್ತಡ ಹೇರುವ ಸಲುವಾಗಿ ಭಯೋತ್ಪಾದಕ ಸಂಘಟನೆಗಳು ಈ ರೀತಿಯ ಹೀನ ಕೃತ್ಯಕ್ಕೆ ಮುಂದಾಗಿರುವುದು ಖಂಡನೀಯ ಎಂದು ಸದಸ್ಯರು ಘೋಷಣೆ ಕೂಗಿದರು.

ನ್ಯಾಯಾಲಯ ಆವರಣದಲ್ಲಿ ಖಂಡನಾ ಸಭೆ ನಡೆಸಿ ನಂತರ ತಹಶೀಲ್ದಾರ್ ಕಚೇರಿ ತನಕ ಮೆರವಣಿಗೆ ತೆರಳಿದ ವಕೀಲರು ರಾಷ್ಟ್ರದ ಆಂತರಿಕ ಭದ್ರತಾ ವ್ಯವಸ್ಥೆ ಬಿಗಿ ಮಾಡುವಲ್ಲಿ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುವ ಮನವಿ ಅರ್ಪಿಸಿದರು.

ವಕೀಲರ ಸಂಘದ ಅಧ್ಯಕ್ಷ ಎ.ಬಿ. ನಂಜಪ್ಪ, ಉಪಾಧ್ಯಕ್ಷ ವಿ. ವೆಂಕಟೇಶ್, ಕಾರ್ಯದರ್ಶಿ ಎಚ್.ಎಲ್. ವಿಶ್ವನಾಥ್, ಸಹ ಕಾರ್ಯದರ್ಶಿ ನಾಗಪ್ಪ, ಖಜಾಂಚಿ ಅನಿಲ್‌ಕುಮಾರ್ ನೇತೃತ್ವ ವಹಿಸಿದ್ದರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.