ADVERTISEMENT

ಬಿಡುವು ನೀಡಿದ ಮಳೆ, ಗದ್ದೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 10:00 IST
Last Updated 4 ಸೆಪ್ಟೆಂಬರ್ 2011, 10:00 IST

ಸೊರಬ: ಸೋಮವಾರದಿಂದ ಶನಿವಾರದವರೆಗೆ ಸತತವಾಗಿ ಸುರಿದ ಮಳೆ ನಂತರ ಬಿಡುವು ನೀಡಿದೆ.
ಮತ್ತೊಮ್ಮೆ ದಂಡಾವತಿ, ವರದಾ ನದಿಗಳ ಪ್ರವಾಹ ಏರಿದೆ. ಸೊರಬ-ಆನವಟ್ಟಿ ಮುಖ್ಯರಸ್ತೆಯ ಹಶ್ವಿಯಿಂದ ಶಿಡ್ಡಿಹಳ್ಳಿಗೆ ಸಾಗುವ ಸಂಪರ್ಕ ಮಾರ್ಗ ಪುನಃ ಸ್ಥಗಿತಗೊಂಡಿದೆ. ದಂಡಾವತಿ ನದಿಯ ಸೇತುವೆಯ ಮೇಲ್ಭಾಗದಲ್ಲಿ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಬಳಸುದಾರಿ ಮೂಲಕ ಮುಖ್ಯರಸ್ತೆಗೆ ಸಾಗುವಂತಾಗಿದೆ.

ವರದಾ ನದಿ ಬಾಡದಬೈಲು ಹಾಗೂ ಚಂದ್ರಗುತ್ತಿ ಭಾಗದಲ್ಲಿ ತುಂಬಿ ಹರಿಯುತ್ತಿದ್ದು, ಕಡಸೂರು, ಗುಡವಿ, ಬಳ್ಳಿಬೈಲು, ಹೊಳೆ ಜೋಳದಗುಡ್ಡೆ, ಚಿಕ್ಕಮಾಕೊಪ್ಪ, ಗುಂಜನೂರು, ಅಂಕರವಳ್ಳಿ, ಯಡಗೊಪ್ಪ, ನ್ಯಾರ್ಶಿ, ಮೂಡ ದೀವಳಿಗೆ ಮೊದಲಾದ ಗ್ರಾಮಗಳಲ್ಲಿ ಬತ್ತದ ನಾಟಿ ಮಾಡಿದ ಜಮೀನು ಜಲಾವೃತಗೊಂಡಿವೆ.

`ಜೂನ್‌ಗೆ ಮುಂಚೆ ಬಿತ್ತನೆ ಮಾಡಿದ್ದ ಬತ್ತ ನಂತರ ಎಡೆಬಿಡದೇ ಸುರಿದ ಮಳೆಯಿಂದ ನಾಶವಾಗಿತ್ತು. ನಂತರ ನಾಟಿಗಾಗಿ ಸಿದ್ಧಪಡಿಸಿಕೊಂಡಿದ್ದ ಅಗೆ ಬತ್ತ ಹಾಳಾಗಿತ್ತು. ಈಗ ನಾಟಿ ಕಾರ್ಯ ಮುಗಿದಿರುವ ಜಮೀನು ಪುನಃ ನದಿ ಪ್ರವಾಹಕ್ಕೆ ಸಿಲುಕಿದ್ದು, ಬೆಳೆ ಕೈಗೆ ಸಿಗುವ ಭರವಸೆ ಇಲ್ಲ~ ಎಂದು ಸಮಸ್ಯೆ ತೋಡಿಕೊಂಡಿರುವ ಬಿಜೆಪಿ ಮುಖಂಡ ಮಾಕೊಪ್ಪದ ಸಣ್ಣಪ್ಪ, ಶೀಘ್ರ ಪರಿಶೀಲನೆ ನಡೆಸಿ ರೈತರ ನೆರವಿಗೆ ಬರುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಚಂದ್ರಗುತ್ತಿ ಸಮೀಪದ ತೋರಣಕೊಪ್ಪ ಗ್ರಾಮದಲ್ಲಿ ವಿಠ್ಠಲಶೆಟ್ಟಿ ಎಂಬುವರ ಕೊಟ್ಟಿಗೆ ಕುಸಿದು ಜಾನುವಾರುಗಳು ತೀವ್ರವಾಗಿ ಗಾಯಗೊಂಡಿವೆ. 

ಎಣ್ಣೆಕೊಪ್ಪ ಗ್ರಾಮದಲ್ಲಿ ಅಸಮರ್ಪಕ ಕಾಲುವೆ ಹಾಗೂ ಮುಚ್ಚಿಕೊಂಡ ಮೋರಿಯಿಂದಾಗಿ ಮಳೆಯಿಂದ ಹರಿದು ಬಂದ ನೀರು ನೇರವಾಗಿ ಗ್ರಾಮದೊಳಗೆ ನುಗ್ಗುವ ಹಂತದಲ್ಲಿದ್ದಾಗ, ಗ್ರಾಮಸ್ಥರು ಕೂಡಲೇ ಕಾರ್ಯ ಪ್ರವೃತ್ತರಾಗಿ ನೀರನ್ನು ಕೆರೆಯೆಡೆಗೆ ತಿರುಗಿಸಿದ್ದಾರೆ. ದುರಸ್ತಿ ಕಾರ್ಯಕ್ಕೆ ಕೂಡಲೇ ಮುಂದಾಗುವಂತೆ ಸಾಮಾಜಿಕ ಕಾರ್ಯಕರ್ತ ಹೊನ್ನಪ್ಪ ಒತ್ತಾಯಿಸಿದ್ದಾರೆ.

ಶನಿವಾರ 52 ಮಿ.ಮೀ. ಮಳೆ ದಾಖಲಾಗಿದ್ದು, ಜುಲೈ ತಿಂಗಳ ವಾಡಿಕೆ 646 ಮಿ.ಮೀ.ಗೆ ಎದುರಾಗಿ 446.10 ಮಿ.ಮೀ. ಮಳೆಯಾಗಿದೆ.  ಕೃಷಿ, ಕಂದಾಯ ಹಾಗೂ ಇನ್ನಿತರ ಇಲಾಖೆಯವರು ಪರಿಶೀಲನಾ ಕಾರ್ಯ ನಡೆಸಿದ್ದಾರೆ.

ತೀರ್ಥಹಳ್ಳಿ: ಶನಿವಾರ ತೀರ್ಥಹಳ್ಳಿಯಲ್ಲಿ 87.8 ಮಿ.ಮೀ ಹಾಗೂ ಆಗುಂಬೆಯಲ್ಲಿ 188.8 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.