ADVERTISEMENT

ಬೂಟ್‌ ಪಾಲಿಷ್ ಮಾಡಿ ವಿದ್ಯಾರ್ಥಿಗಳ ಪ್ರತಿಭಟನೆ

13 ದಿನಕ್ಕೆ ಕಾಲಿಟ್ಟ ಅನಿರ್ದಿಷಾ್ಟವಧಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 9:10 IST
Last Updated 17 ಸೆಪ್ಟೆಂಬರ್ 2013, 9:10 IST

ಶಿವಮೊಗ್ಗ:  ತರಕಾರಿ, ನ್ಯೂಸ್ ಪೇಪರ್, ಟೀ–ಕಾಫಿ ಮಾರಾಟ, ಗಾರೆ ಕೆಲಸ, ಬಟ್ಟೆಗಳಿಗೆ ಇಸ್ತ್ರಿ ಮಾಡುವುದು, ಬೂಟ್ ಪಾಲಿಷ್  ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಹೀಗೆ ಪ್ರತಿಭಟನೆ ನಡೆಸಿದವರು   ಸೋಮಿನಕೊಪ್ಪ ಬಡಾವಣೆಯಲ್ಲಿರುವ ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು.

ದೆಹಲಿಯ ಪಶುವೈದ್ಯಕೀಯ ಇಲಾಖೆಯಿಂದ ಶಾಶ್ವತ ಮಾನ್ಯತೆ ಕೊಡಿಸುವಂತೆ ಆಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಸೋಮವಾರ 13ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಇಲ್ಲಿಯವರೆಗೂ ಕೇಂದ್ರ, ರಾಜ್ಯ ಸರ್ಕಾರದಿಂದ ಕಾಲೇಜಿಗೆ ಶಾಶ್ವತ ಮಾನ್ಯತೆ ಸಿಗುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಸರ್ಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೂಟ್ ಪಾಲಿಷ್‌, ತರಕಾರಿ,- ನ್ಯೂಸ್ ಪೇಪರ್ ಮಾರಾಟದ ಅಣಕು ಪ್ರತಿಭಟನೆ ನಡೆಸಿದರು.

   ತದನಂತರ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮೂಲಕ ಕೇಂದ್ರ - ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ವಿಪುಲ್‌ ಬನ್ಸಲ್‌ ಮಾತನಾಡಿ, ಈಗಾಗಲೇ ಕಾಲೇಜಿಗೆ ಶಾಶ್ವತ ಮಾನ್ಯತೆ ನೀಡುವ ಕುರಿತಂತೆ ಜಿಲ್ಲಾಡಳಿತವೂ ರಾಜ್ಯ ಸರ್ಕಾರದ ಗಮನ ಸೆಳೆದಿದೆ. ಜಿಲ್ಲಾಡಳಿತದ ಮಟ್ಟದಲ್ಲಿ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.