ADVERTISEMENT

ಬೇಸಾಯಕ್ಕಾಗಿ ಬಿಸಿಲಲ್ಲೂ ಅನ್ನದಾತನ ಒಗ್ಗಟ್ಟು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 5:05 IST
Last Updated 8 ಅಕ್ಟೋಬರ್ 2012, 5:05 IST

ರಿಪ್ಪನ್‌ಪೇಟೆ: ಅಕಾಲಿಕ ಮಳೆ- ಬೇಸಾಯಕ್ಕೆ ಜನವಿಲ್ಲ- ಅತ್ತ ಬರವೂ ಅಲ್ಲ- ಇತ್ತ ನೆರೆಯೂ ಇಲ್ಲ.
ಇಂತಹ ಅಡ ಕತ್ತರಿಗೆ ಸಿಲುಕಿದ ಅನುಭವದಲ್ಲಿ ಕೆರೆಹಳ್ಳಿ ಹೋಬಳಿಯ ರೈತರು ನಲುಗಿದ್ದಾರೆ.

ಈ ಪರಿಸ್ಥಿತಿಯಿಂದ ಬೈರಾಪುರ ಗ್ರಾಮದ ದೇವರಾಜಪ್ಪಗೌಡ ಮತ್ತು ಪಾಪಣ್ಣ ಎಂಬುವವರು ಸುಮಾರು 5 ಎಕರೆ ಗದ್ದೆಯನ್ನು ಹಾಳು ಗೆಡವಿದ್ದರು.

ಈ ವರ್ಷದ ಮಳೆ ಪರಿಸ್ಥಿತಿ ಜನರಿಗೆ ಸಂಕಷ್ಟ ತಂದಿದ್ದರೂ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನಾಣ್ನುಡಿಯಂತೆ ಊರಿನ ಹಿರಿಯರ ತಲೆಯಲ್ಲಿ ಹೊಸ ಯೋಜನೆ ಹುಟ್ಟಿಕೊಂಡಿತು. ತತ್ಪರಿಣಾಮವಾಗಿ ಗ್ರಾಮ ದೇವರ ಅಭಿವೃದ್ಧಿಗೆ ಹಾಳು ಗೆಡವಿದ ಭೂಮಿಯನ್ನ ಮಾಲೀಕರ ಒಪ್ಪಿಗೆ ಪಡೆದು ಬೇಸಾಯ ಮಾಡಿ ಬರುವ ಹಣವನ್ನು ಉಪಯೋಗಿಸುವ ವಿಷಯಕ್ಕೆ ಗ್ರಾಮಸ್ಥರು ಒಪ್ಪಿದರು.

 ತಕ್ಷಣವೇ ಕಾರ್ಯ ನಿರತರಾಗಿ ಸುತ್ತ ಮುತ್ತಲಿನ ಕೆರೆ ಕಟ್ಟೆ ಬಾವಿಗಳಿಂದ ಗ್ರಾಮದ ಪಂಪ್‌ಸೆಟ್ ಮೂಲಕ ಗದ್ದೆಗೆ ನೀರು ಹಾಯಿಸಿ ಸಸಿ ಮಡಿ ಕಾರ್ಯಕ್ಕೆ ಅನುವು ಮಾಡಿ ಗದ್ದೆ ನಾಟಿ ಮಾಡಲು ದಿನ ನಿಗದಿ ಮಾಡಿಕೊಂಡರು.

ಪೂರ್ವನಿಗದಿತ ಭಾನುವಾರದ ದಿನ ಎಲ್ಲಾ ಗ್ರಾಮಸ್ಥರು ಸೇರಿ ಮಟಮಟ ಬಿಸಿಲಿನ ಧಗೆಯಲ್ಲೂ ಬೇಸಾಯಕ್ಕೆ ಅಣಿಯಾದರು. ಗ್ರಾಮದ 75 ಮಹಿಳೆಯರು. 100ಕ್ಕೂ ಅಧಿಕ ಗಂಡಾಳುಗಳು, 4 ಟಿಲ್ಲರ್, 13 ಬೇಸಾಯದ ನಳ್ಳಿ ಕಟ್ಟಿದ ಎತ್ತಿನ ಜತೆಗಳ ಮೂಲಕ  ಕೆಲಸ ಶುರು ಮಾಡಿಯೇ ಬಿಟ್ಟರು.

ಬೆಳಿಗ್ಗೆ 10ರಿಂದ ಪ್ರಾರಂಭವಾದ ನಾಟಿ ಕಾರ್ಯ ತುಂಬು ಉತ್ಸಾಹದಿಂದ ಮಧ್ಯಾಹ್ನ 3ಕ್ಕೆ ಕೆಲಸ ಮುಗಿದೇ ಹೋಯಿತು.ದೇವರ ವರವೋ ಎಂಬಂತೆ ಕಾರ್ಯಕ್ರಮಗಳು ನಿವಿರ್ಘ್ನವಾಗಿ ನಡೆದು ಗ್ರಾಮಸ್ಥರೇ ಸಿದ್ಧಪಡಿಸಿದ ಫಲಹಾರ ಸೇವಿಸಿ ಮನೆಗೆ ತೆರಳುತಿದ್ದಂತೆ ಒಂದು ತಿಂಗಳಿನಿಂದ ಹನಿ ನೀರು ಕಾಣದೇ ಬರಡಾಗಿದ್ದ ಭೂತಾಯಿಗೆ ವರುಣ ಕೃಪೆಯಿಂದ ಧೋ... ಎಂದು ಮಳೆ ಸುರಿಯ ತೊಡಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.