ADVERTISEMENT

ಭಂಡಾರಿ ಕೋಟಿ ಸಂಪತ್ತಿನ ಒಡೆಯ; ಜತೆಗೆ ಸಾಲಗಾರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ಶಿವಮೊಗ್ಗ:  ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆದಾಯ ಪ್ರಮಾಣದ ವಿವರಗಳ ಪ್ರಕಾರ ಮಂಜುನಾಥ ಭಂಡಾರಿ ಮತ್ತು ದಂಪತಿ ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ.

ಭಂಡಾರಿ ಬಳಿ ಏಳು ವಾಹನಗಳಿವೆ. ಪತ್ನಿ ಬಳಿ ಮೂರು ವಾಹನಗಳಿವೆ. ಹೋಂಡಾ ಸಿ.ಆರ್.ವಿ. ಕಾರು, ಮಾಂಟಿರೋ ಕಾರು,  ಮಹೀಂದ್ರಾ ಬೊಲೆರೋ, ಹೀರೋ ಹೊಂಡಾ -ಬುಲೆಟ್ ಬೈಕ್, ಮೂರು ಆಟೋ ರಿಕ್ಷಾ, ಟಾಟಾ ಸರಕು ಸಾಗಾಣೆ ವಾಹನಗಳಿವೆ. ಈವಾಹನಗಳ ಪ್ರಸ್ತುತ ಮಾರುಕಟ್ಟೆಯ ಒಟ್ಟು ಮೌಲ್ಯ ₨21 ಲಕ್ಷ.  ಇವರ ಪತ್ನಿ ಬಳಿ ಹೊಂಡಾ ಸಿಟಿ, ಹೊಂಡಾ ಜಾಜ್, ಹುಂಡೈ ಕಾರುಗಳಿದ್ದು ಈ ಮೂರು ಕಾರುಗಳ ಮೌಲ್ಯ ₨9 ಲಕ್ಷ. ಭಂಡಾರಿ ಅವರ ಬಳಿ ₨6.48 ಕೋಟಿ ಮೌಲ್ಯದ ಚರಾಸ್ಥಿ ಹಾಗೂ ₨4.16 ಕೋಟಿ ಮೌಲ್ಯದ ಸ್ಥಿರಾಸ್ತಿಯಿದ್ದು ಒಟ್ಟು ₨10.65 ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನ ಒಡೆಯರು.

ಪತ್ನಿ ಪ್ರಸನ್ನ ಭಂಡಾರಿಯವರ ಚರಾಸ್ತಿ ₨2.44 ಕೋಟಿ ಹಾಗೂ ₨ 96.65 ಲಕ್ಷ ಮೌಲ್ಯದ ಸ್ಥಿರಾಸ್ತಿಯಿದ್ದು ಒಟ್ಟು ₨3.40 ಕೋಟಿ ಮೌಲ್ಯದ ಸಂಪತ್ತಿನ ಒಡತಿ.

ಮಂಜುನಾಥ್ ಭಂಡಾರಿ ದಂಪತಿಯ ಬಳಿ ಸುಮಾರು ₨ 1 ಕೋಟಿ ಮೌಲ್ಯದಷ್ಟು ಚಿನ್ನ ಹಾಗೂ ಬೆಳ್ಳಿಯ ಆಭರಣಗಳಿವೆ. ಭಂಡಾರಿಯ ಬಳಿ ₨23 ಲಕ್ಷ ರೂಪಾಯಿ ಮೌಲ್ಯದ 1ಕೆ.ಜಿ. ಬಂಗಾರ ಹಾಗೂ ₨2.35 ಲಕ್ಷ ಮೌಲ್ಯದ ಬೆಳ್ಳಿಯ ಆಭರಣವಿದೆ. ಪತ್ನಿಯ ಬಳಿ ₨63 ಲಕ್ಷ ಮೌಲ್ಯದ 2 ಕೆ.ಜಿ. 645 ಗ್ರಾಂ.ಬಂಗಾರದ ಆಭರಣಗಳಿವೆ.

ಭಂಡಾರಿ ಅವರಿಗೆ ದಾಸರಕಲ್ಲಳ್ಳಿ ಗ್ರಾಮದಲ್ಲಿ ₨13 ಲಕ್ಷ. ಮೌಲ್ಯದ 3.24 ಎಕರೆ ಕೃಷಿ ಜಮೀನು, ಅಗಸನಹಳ್ಳಿ ಗ್ರಾಮವೊಂದ ರಲ್ಲಿ ₨61ಲಕ್ಷ ಮೌಲ್ಯದ 5ಎಕರೆ ಜಮೀನುಗಳು ಪಿತ್ರಾರ್ಜಿತ ಆಸ್ತಿಗಳು. ಪತ್ನಿಯ ಹೆಸರಲ್ಲಿ ಬಂಟ್ವಾಳದಲ್ಲಿ ₨ 20 ಲಕ್ಷ ಮೌಲ್ಯದ 4.04 ಎಕರೆ ಕೃಷಿ ಭೂಮಿ ಇದೆ. ಇದು ಅವರ ಸ್ವಯಾರ್ಜಿತ ಆಸ್ತಿ.

ಖಾಲಿ ನಿವೇಶನಗಳು ಶಿವಮೊಗ್ಗ ನಗರ, ಮಂಗಳೂರಿನಲ್ಲಿ ಸಾಕಷ್ಟಿವೆ. ಪ್ರಸ್ತುತ ಭಂಡಾರಿಯವರ ಬಳಿ ₨72 ಲಕ್ಷ ಹಾಗೂ ಪತ್ನಿಯ ಬಳಿ ₨ 22.19 ಲಕ್ಷ ನಗದಿದೆ. ಭಂಡಾರಿ ಅವರು ಶಿವಮೊಗ್ಗ, ಮಂಗಳೂರು ಹಾಗೂ ಬೆಂಗಳೂರಿನ 15 ವಿವಿಧ ಬ್ಯಾಂಕ್ ಶಾಖೆಗಳಲ್ಲಿ 56 ಲಕ್ಷ ರೂ.ಠೇವಣಿ ಹೊಂದಿದ್ದಾರೆ. 

ಸಾಲವೂ ಸಾಕಷ್ಟು
ದಂಪತಿಯ ಬಳಿ ಕೋಟಿ ರೂಪಾಯಿ ಮೌಲ್ಯದ ಸಂಪತ್ತಿದ್ದರೂ, ಸಾಲವೂ ಸಾಕಷ್ಟಿದೆ. ಭಂಡಾರಿ ಅವರ ಹೆಸರಿನಲ್ಲಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ₨8.54 ಕೋಟಿ ಹಾಗೂ ಪತ್ನಿಯ ಹೆಸರಲ್ಲಿ ₨43 ಲಕ್ಷ ಸಾಲವಿದೆ.

2012-–13 ನೇ ಸಾಲಿನಲ್ಲಿ ದಂಪತಿ ಘೋಷಿಸಿಕೊಂಡಂತೆ ಭಂಡಾರಿ ಅವರ ವಾರ್ಷಿಕ ಆದಾಯ ₨52,57,880ಗಳಾದರೇ, ಅವರ ಪತ್ನಿಯ ವಾರ್ಷಿಕ ಆದಾಯ  ₨9,34,520ಗಳಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.