ADVERTISEMENT

ಭದ್ರಾವತಿ: ಇಂದಿನಿಂದ ಶರನ್ನವರಾತ್ರಿ ಉತ್ಸವ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 9:45 IST
Last Updated 16 ಅಕ್ಟೋಬರ್ 2012, 9:45 IST

ಭದ್ರಾವತಿ: ಇಲ್ಲಿನ ವಿವಿಧ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ನಿಮಿತ್ತ ಧಾರ್ಮಿಕ ವಿಧಿ-ವಿಧಾನಗಳು, ಅಲಂಕಾರಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅ. 16ರಿಂದ 24ರತನಕ ನಿರಂತರವಾಗಿ ನಡೆಯಲಿದೆ.

ಶೃಂಗೇರಿ ಶಂಕರಮಠದಲ್ಲಿ ಪ್ರತಿದಿನ ಬೆಳಿಗ್ಗೆ 8.30ರಿಂದ ಹೋಮ, ಹವನಾದಿಗಳು, 10.30ಕ್ಕೆ ವಿವಿಧ ಮಹಿಳಾ ಮಂಡಳಿಗಳಿಂದ ಲಲಿತಾ ಸಹಸ್ರನಾಮ ಪೂಜೆ, ಸಂಜೆ 6.30ಕ್ಕೆ ದೇವಿಗೆ ಅಲಂಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ನಡೆಯಲಿದೆ.

ಲೋಯರ್‌ಹುತ್ತಾ ಚಂಡಿಕಾ ದುರ್ಗಾ ದೇವಾಲಯದಲ್ಲಿ ಅ. 16ರಿಂದ 23ರತನಕ ಪ್ರತಿದಿನ ಬೆಳಿಗ್ಗೆ ಲಲಿತ ಸಹಸ್ರನಾಮ, ಕುಂಕುಮಾರ್ಚನೆ ನಡೆಯಲಿದ್ದು, ಸಂಜೆ ದೇವಿಗೆ ವಿಶೇಷ ಅಲಂಕಾರ ಹಾಗೂ ವಿವಿಧ ಪ್ರಕಾರದ ಕಲಾ ವೈಭವ ಅನಾವರಣಗೊಳ್ಳಲಿದೆ.

ವಿಶೇಷವಾಗಿ ಅ. 23ರಂದು 25ನೇ ವರ್ಷದ ಶ್ರೀಚಂಡಿಕಾ ಯಾಗ ನಡೆಯಲಿದ್ದು, ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.
ಹೊಸ ಸೇತುವೆ ರಸ್ತೆ ಬನಶಂಕರಿ ದೇವಾಲಯ, ನ್ಯೂಟೌನ್ ಮಾರಿಯಮ್ಮ ದೇವಸ್ಥಾನ, ಹಳೇನಗರ ಕನ್ಯಕಾಪರಮೇಶ್ವರಿ ದೇವಾಲಯ ಸಮಿತಿಗಳಿಂದ ಸಹ ಪ್ರತಿದಿನ ವಿಶೇಷಪೂಜೆ ಹಾಗೂ ಸಂಜೆಯ ದೇವಿಯ ಅಲಂಕಾರ ನಡೆಯಲಿದೆ.

ಮಿಲ್ಟ್ರಿಕ್ಯಾಂಪ್ ಶ್ರೀನಿವಾಸ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ನಿಮಿತ್ತ 9 ದಿನಗಳ ಕಾಲ ದೇವರಮೂರ್ತಿಗೆ ವಿವಿಧ ಅಲಂಕಾರ ನಡೆಯಲಿದೆ. ಇದರೊಂದಿಗೆ ಅ. 24ರಂದು ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದರೊಂದಿಗೆ ಸ್ಥಳೀಯ ನಗರಸಭೆ ನೇತೃತ್ವದಲ್ಲಿ ಸಹ ಮೂರು ದಿನಗಳ ಕಾಲದ ದಸರಾ ವೈಭವ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಡೆ ದಿನ ಕನಕಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಜತೆಗೆ ರಾವಣಸಂಹಾರದ ಬಾಣ, ಬಿರುಸುಗಳ ಪ್ರದರ್ಶನ ನಡೆಯಲಿದೆ.

9 ದಿನಗಳ ನವರಾತ್ರಿ ಉತ್ಸವಕ್ಕೆ ನಗರದ ಎಲ್ಲಾ ದೇವಾಲಯಗಳು, ಸಾಂಸ್ಕೃತಿಕ ಕಲಾ ತಂಡಗಳು ಸಜ್ಜಾಗಿದ್ದು, ಇದರ ಸವಿಯನ್ನು ಉಣಲು ಆಸಕ್ತರು ಆಗಮಿಸುವಂತೆ ದೇವಾಲಯ ಸಮಿತಿಗಳು ಮನವಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.