ADVERTISEMENT

ಭದ್ರಾವತಿ ತಾಲ್ಲೂಕು ಗಾಣಿಗರ ಸಂಘದ ಸಮಾಜೋತ್ಸವ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 5:10 IST
Last Updated 18 ಜೂನ್ 2012, 5:10 IST

ಭದ್ರಾವತಿ:`ಎಲ್ಲಾ ಜಾತಿಯ ಒಳ ಪಂಗಡದಲ್ಲಿ ಇರುವ ಗಾಣಿಗ ಸಮುದಾಯ ಒಂದೇ ವೇದಿಕೆಯಡಿ ಸಂಘಟಿತರಾಗಬೇಕು~ ಎಂದು ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಎಚ್. ಸುಬ್ಬಯ್ಯ ಹೇಳಿದರು.
ಇಲ್ಲಿನ ವೀರಶೈವ ಸಭಾ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಗಾಣಿಗರ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ 10 ವರ್ಷದ ಪ್ರಯತ್ನದ ಫಲವಾಗಿ ಐದು ಜಾತಿಗಳಲ್ಲಿ ಸೇರಿರುವ ಗಾಣಿಗ ಸಮುದಾಯವನ್ನು ಒಂದೇ ವೇದಿಕೆ ಅಡಿ ತರುವ ಪ್ರಯತ್ನ ನಡೆದಿದೆ. ಅದಕ್ಕೆ ತಕ್ಕಂತೆ ತಾಲ್ಲೂಕು ಸಂಘ ಮುಂಚೂಣಿ ವಹಿಸಿರುವುದು ಮೆಚ್ಚುವ ಸಂಗತಿ ಎಂದು ಶ್ಲಾಘಿಸಿದರು.

ರಾಜಕೀಯ ಶಕ್ತಿಯಲ್ಲಿ ಜಿಲ್ಲೆಯಲ್ಲಿ  ಈ ಸಮುದಾಯ ನೆಲೆ ನಿಲ್ಲಲು  ಇನ್ನೂ ಬಹಳ ದಿನಗಳು ಹಿಡಿಯುತ್ತವೆ. ಅದಕ್ಕೆ ಸಂಘಟಿತರಾಗುವ ಭಾಗವಾಗಿ ನಡೆದಿರುವ ಈ ಸಮಾಜೋತ್ಸವ ಸಮುದಾಯ ಬಂಧುಗಳಲ್ಲಿ ಆತ್ಮವಿಶ್ವಾಸ ಹೆಚ್ಚು ಮಾಡಲಿ ಎಂದು ಹಾರೈಸಿದರು.

ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ, `ಹಿಂದುಳಿದ ಈ ಸಮುದಾಯ ವಿದ್ಯಾಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಅಗತ್ಯವಿದೆ. ಅದಕ್ಕಾಗಿ ನಮ್ಮ ಕುಲದ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ನಿಧಿ ಸಂಗ್ರಹಿಸಿ, ಪ್ರತಿಭಾನ್ವಿತರನ್ನು ಗುರುತಿಸೋಣ~ ಎಂದರು. ತಾಲ್ಲೂಕು ಗಾಣಿಗರ ಸಂಘದ ಅಧ್ಯಕ್ಷ ಎಂ. ರಾಮಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.

ಬಿ.ಕೆ. ಮೋಹನ್, ಬಿ.ಎನ್. ರಮೇಶ್, ಎಸ್. ಶಿವಕುಮಾರ್, ಬಿ.ಕೆ. ಜಗನ್ನಾಥ, ರಾಜಣ್ಣ, ಕೋಟಯ್ಯ, ಶಂಕರಯ್ಯ, ಬಿ. ರಾಜಣ್ಣ, ಮಲ್ಲಿಕಾರ್ಜುನ ಕೋಠಿ, ಬಿ.ಎಚ್. ರುದ್ರಪ್ಪ, ಪವಿತ್ರಾ ಮಂಜುನಾಥ್, ಕೃಷ್ಣಮೂರ್ತಿ, ನಾಗರಾಜ್, ಟಿ.ಸಿ. ಚನ್ನಕೇಶವಯ್ಯ, ಕೃಷ್ಣಪ್ಪ, ಡಾ.ಟಿ. ಪ್ರಸನ್ನ ಉಪಸ್ಥಿತರಿದ್ದರು.

ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು, ಎಲ್. ವರದರಾಜ್ ಪ್ರಸ್ತಾವಿಕ ಮಾತನಾಡಿದರು. ಟಿ.ಸಿ. ಚನ್ನಕೇಶವಯ್ಯ ವಂದಿಸಿದರು.

ನರೇಂದ್ರ ಮೋದಿ ಪಿಎಂ
ರಾಷ್ಟ್ರದಲ್ಲೇ ಏಕೆ, ಇಡೀ ವಿಶ್ವದಲ್ಲೇ ಹೆಸರು ಮಾಡಿರುವ ಗುಜರಾಜ್ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿ, ಅದು ನಮ್ಮೆಲ್ಲರ ಬಯಕೆ ಸಹ ಆಗಿದೆ ಎಂಬ ಧ್ವನಿ ಇಲ್ಲಿನ ಗಾಣಿಗರ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿತು.

ಯುವಗಾಣಿಗರ ವೇದಿಕೆ ಗೌರವಾಧ್ಯಕ್ಷ ಹಾಗೂ ನಗರಸಭಾ ಸದಸ್ಯರಾದ ಬಿ.ಎನ್. ರಮೇಶ್  ಮಾತನಾಡಿ, ನರೇಂದ್ರ ಮೋದಿ ನಮ್ಮ ಸಮುದಾಯಕ್ಕೆ ಸೇರಿದ ಒಬ್ಬ ಮಹಾನ್ ನಾಯಕ. ಅವರು ಆಮಟ್ಟಕ್ಕೆ ಏರುವ ವ್ಯಕ್ತಿತ್ವ ಹೊಂದಿದ್ದಾರೆ. ಅವರನ್ನು ಬೆಂಬಲಿಸುವ ಅಗತ್ಯವಿದೆ ಎಂದರು.

ಅವರ ಭಾಷಣದಲ್ಲಿ ವ್ಯಕ್ತವಾದ ಅಭಿಪ್ರಾಯಕ್ಕೆ ವೇದಿಕೆಯಲ್ಲಿದ್ದ ಶಾಸಕ ಬಿ.ಕೆ. ಸಂಗಮೇಶ್ವರ, ನಗರಸಭಾಧ್ಯಕ್ಷ ಬಿ.ಕೆ. ಮೋಹನ್ ಕೆಲ ಕ್ಷಣದಲ್ಲಿ ವಿಚಲಿತರಾದರು. ಆದರೆ, ಇಷ್ಟು ಹೇಳಿದ ರಮೇಶ್ ಏಕಾಏಕಿ ಭಾಷಣ ಮೊಟಕು ಮಾಡಿ ಆಸನದತ್ತ ತೆರಳಿದ್ದು, ಮಾತ್ರ ಚರ್ಚೆಗೆ ಗ್ರಾಸವಾಯಿತು.

`ಭೇದ- ಭಾವ ತೊಲಗಲಿ~
ದಾವಣಗೆರೆ:
ಮಠಾಧೀಶರಲ್ಲಿ ಅಡಗಿರುವ ಭೇದ- ಭಾವ ತೊಲಗಿದಾಗ ಮಾತ್ರ ವೀರಶೈವ ಧರ್ಮ ವಿಶ್ವಮಾನವ ಧರ್ಮವಾಗಿ ರೂಪುಗೊಳ್ಳಲು ಸಾಧ್ಯ ಎಂದು ಸಿರಿಗೆರೆಯ ಎಂಬಿಆರ್ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ನಾ. ಲೋಕೇಶ್ ಒಡೆಯರ್ ಅಭಿಪ್ರಾಯಪಟ್ಟರು.

ರೋಟರಿ ಸಂಸ್ಥೆ, ಇನ್ನರ್‌ವ್ಹೀಲ್ ಕ್ಲಬ್, ವಿದ್ಯಾನಗರ ಶಿವಗೋಷ್ಠಿ  ಸಮಿತಿ,ಮೈಸೂರಿನ ಜೆಎಸ್‌ಎಸ್ ಫಿಸಿಯೋಥೆರಫಿ ಕಾಲೇಜು ಆಶ್ರಯದಲ್ಲಿ ಈಚೆಗೆ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ನ ಶಾಲಾ ಸಮುಚ್ಛಯ ಸಭಾಂಗಣದಲ್ಲಿ ಏರ್ಪಡಿಸಿದ್ದ 199ನೇ ಶಿವಗೋಷ್ಠಿ ಕಾರ್ಯಕ್ರಮದಲ್ಲಿ `ವೀರಶೈವ ಧರ್ಮದಲ್ಲಿ ಪಂಚಾಚಾರಗಳು~ ವಿಷಯದ ಬಗ್ಗೆ ಅವರು ಮಾತನಾಡಿದರು.

ಮೈಸೂರಿನ ಜೆಎಸ್‌ಎಸ್ ಫಿಸಿಯೋಥೆರಫಿ ಕಾಲೇಜಿನ ಡಾ.ಪ್ರದೀಪ್ ಶಂಕರ್ ಅವರು `ಬೆನ್ನು ನೋವಿಗೆ ಫಿಜಿಯೋಥೆರಫಿ ಚಿಕಿತ್ಸೆಯ ಅಗತ್ಯತೆ ಮತ್ತು ಚಿಕಿತ್ಸಾ ಕ್ರಮಗಳು~ ವಿಷಯ ಕುರಿತು ಮಾತನಾಡಿದರು.

ವಿದ್ಯಾನಗರ ರೋಟರಿ ಸಂಸ್ಥೆ ಅಧ್ಯಕ್ಷ ಇ.ಟಿ. ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.ಕೆ. ಕೆಂಚನಗೌಡ, ಎಂ.ಬಿ. ಗಿರಿಜಮ್ಮ ಸೋಮಶೇಖರ ಗೌಡ, ಎಸ್.ಟಿ. ಶಾಂತಗಂಗಾಧರ ಹಾಜರಿದ್ದರು.

ಕದಳಿ ಮಹಿಳಾ ವೇದಿಕೆಯ ಸದಸ್ಯರಿಂದ ವಚನಗಾಯನ ನಡೆಯಿತು. ಬಿ.ಎ. ವಿಜಯಕುಮಾರ್ ಸ್ವಾಗತಿಸಿದರು. ಡಿ. ಯೋಗೇಶ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.