ADVERTISEMENT

ಭದ್ರಾವತಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡನೆ.ನಾಗರಿಕರಿಗೆ ಭರವಸೆಗಳ ಸುರಿಮಳೆ...

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2011, 6:20 IST
Last Updated 30 ಮಾರ್ಚ್ 2011, 6:20 IST
ಭದ್ರಾವತಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡನೆ.ನಾಗರಿಕರಿಗೆ ಭರವಸೆಗಳ ಸುರಿಮಳೆ...
ಭದ್ರಾವತಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡನೆ.ನಾಗರಿಕರಿಗೆ ಭರವಸೆಗಳ ಸುರಿಮಳೆ...   

ಭದ್ರಾವತಿ: ಸೊಳ್ಳೆ ನಿಯಂತ್ರಣಕ್ಕೆ ಯಂತ್ರ, ಹುಚ್ಚುನಾಯಿ ಕಡಿತಕ್ಕೆ ಔಷಧ, ಭದ್ರಾನದಿ ಸಂಗಮೇಶ್ವರ ಸನ್ನಿಧಿ ಅಭಿವೃದ್ಧಿ, ಪಾರ್ಕ್ ನಿರ್ಮಾಣಕ್ಕೆ ಹಣ... ಹೀಗೆ ಹತ್ತು ಹಲವು ಭರವಸೆಯ ಸುರಿಮಳೆ ನಡುವೆ ನಗರಸಭೆ ಅಧ್ಯಕ್ಷ ಬಿ.ಕೆ. ಮೋಹನ್ ಮಂಗಳವಾರ ಬಜೆಟ್ ಸಭೆ ನಡೆಸಿದರು.ಒಟ್ಟು 50 ಪುಟಗಳ ಬಜೆಟ್ ಪ್ರತಿಯಲ್ಲಿನ ಸಂಪೂರ್ಣ ವಿಷಯವನ್ನು ಓದಿ ಒಪ್ಪುವ ಮುನ್ನವೇ ಸದಸ್ಯರು ಒಪ್ಪಿಗೆಯ ಕರತಾಡನ ಮಾಡುವ ಮೂಲಕ ‘ಕಲ್ಲತ್ತಿಗಿರಿ’ ಭೋಜನಕ್ಕೆ ಸಜ್ಜಾಗಿದ್ದು ಇಂದಿನ ಸಭೆಯ ಹೈಲೈಟ್ಸ್.
 

ವಿವಿಧ ಮೂಲದಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟು ` 3,470.23ಲಕ್ಷ ಆದಾಯ ನಿರೀಕ್ಷೆ ಮಾಡಿರುವ ಸ್ಥಳೀಯ ಆಡಳಿತ ` 3,427.23ಲಕ್ಷ ಖರ್ಚಿನ ಅಂದಾಜು ಮಾಡಿದೆ. ಇದರಿಂದಾಗಿ ಸುಮಾರು ` 43 ಲಕ್ಷ ಉಳಿತಾಯ ಬಜೆಟ್ ಘೋಷಿಸಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಅನುದಾನಗಳ ಜೊತೆಯಲ್ಲಿ ಉದ್ದಿಮೆ ಪರವಾನಿಗೆ, ಕಂದಾಯ, ಕಟ್ಟಡ ಪರವಾನಿಗೆ ಹಾಗೂ ಜಾಹೀರಾತು ಫಲಕದ ಶುಲ್ಕ ಹೆಚ್ಚಳದಿಂದ ಹೆಚ್ಚು ಆದಾಯವನ್ನು ನಿರೀಕ್ಷೆ ಮಾಡಲಾಗಿದೆ.
 

ಖರ್ಚಿನ ಬಾಬ್ತಿನಲ್ಲಿ ಸೊಳ್ಳೆ ನಿಯಂತ್ರಣ ಯಂತ್ರಕ್ಕೆ ` 15ಲಕ್ಷ, ಪಾರ್ಕ್‌ಗಳ ಅಭಿವೃದ್ಧಿಗೆ ` 50ಲಕ್ಷ, ಭದ್ರಾನದಿ ಸಂಗಮೇಶ್ವರ ದೇವಾಲಯ ಅಭಿವೃದ್ಧಿಗೆ ` 60ಲಕ್ಷ, ಸ್ವಾಗತ ಕಮಾನಿಗೆ ` 60ಲಕ್ಷ, ಸಮುದಾಯ ಅಭಿವೃದ್ಧಿ ಯೋಜನೆ, ಹುಚ್ಚುನಾಯಿ ಕಡಿತದ ಔಷಧಿಗೆ ತಲಾ ` 10ಲಕ್ಷ ನಿಗದಿ ಮಾಡಿರುವುದು ಈ ಬಾರಿ ಬಜೆಟ್ ವಿಶೇಷ.ಇದಕ್ಕೆ ಹೊರತಾಗಿ ನಗರ ಸ್ವಚ್ಛತೆ ಕುರಿತು ಯಾವುದೇ ಹೊಸ ಯೋಜನೆ, ಕ್ರಮಗಳ ಕುರಿತು ಸ್ಪಷ್ಟ ಉತ್ತರ ಬಜೆಟ್ ಸಭೆ ನೀಡದಿರುವುದು ನಾಗರಿಕರ ಆತಂಕ ಹೆಚ್ಚಿಸಿದೆ.
 

ADVERTISEMENT

ನಗರಸಭಾ ಕಚೇರಿಯಲ್ಲಿನ ಭ್ರಷ್ಟಾಚಾರ ಒಪ್ಪಿಕೊಂಡಿದ್ದೇವೆ ಎನ್ನುವ ರೀತಿಯಲ್ಲಿ ಅಧ್ಯಕ್ಷರು ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿರುವುದು ಸದಸ್ಯರ ಪಾಲಿಗೆ ಚರ್ಚೆಯವಿಷಯವಾಗಿದ್ದು, ಬಜೆಟ್‌ನ ಪ್ರಮುಖ ಅಂಶ.

ಯುಜಿಡಿ ಕುರಿತು ಅಪಸ್ವರ: ಬಜೆಟ್ ಮಂಡನೆಗೂ ಮುನ್ನ ಒಳಚರಂಡಿ ಗುತ್ತಿಗೆ ಕಾಮಗಾರಿಯನ್ನು ಹಿಂದಿದ್ದ ಗುತ್ತಿಗೆದಾರನಿಗೆ ಮುಂದುವರಿಸಿದ್ದನ್ನು ಪ್ರಶ್ನಿಸಿ ಸದಸ್ಯರು ತಕರಾರು ಎತ್ತಿದರು.
 

ಸದಸ್ಯರಾದ ಜಿ. ಆನಂದಕುಮಾರ್, ರವಿಕುಮಾರ್, ಅಜಿತ್ ಮಾತನಾಡಿ, ಹಿಂದಿನ ಸಭೆಯಲ್ಲಿ ಇದರ ಕುರಿತು ಒಮ್ಮತದ ನಿರ್ಧಾರವಾಗಿದೆ. ಆ ಪ್ರಕಾರ ಕೆಲಸದ ಗುಣಮಟ್ಟ ಸರಿಯಿಲ್ಲದ ಕಾರಣ ಗುತ್ತಿಗೆದಾರರನ್ನು ಬದಲಿಸುವಂತೆ ತೀರ್ಮಾನಿಸಲಾಗಿದೆ. ಆದರೂ ತೆರೆಮರೆಯಲ್ಲಿ ಅವರಿಗೆ ಟೆಂಡರ್ ನೀಡುವ ಯತ್ನ ನಡೆದಿರುವುದು ಖಂಡನೀಯ ಎಂದರು.ಇದಕ್ಕೆ ಅಧ್ಯಕ್ಷರು ಯುಜಿಡಿ ಕಾಮಗಾರಿ ಕುರಿತಂತೆ ಪ್ರತ್ಯೇಕ ಸಭೆ ನಡೆಸುವ ಭರವಸೆ ನೀಡಿದರು. ಇದರಿಂದ ತೃಪ್ತರಾದ ಸದಸ್ಯರು ಸದ್ಯಕ್ಕೆ ಆ ವಿಷಯವನ್ನು ಕೈ ಬಿಡುವ ಭರವಸೆ ನೀಡಿದರು.

ವಿವಿಧ ಬಡಾವಣೆಯಲ್ಲಿ ರಸ್ತೆ, ಚರಂಡಿ ಸ್ವಚ್ಛತೆ ಇಲ್ಲದೆ ನಾಗರಿಕರು ಪರದಾಟ ನಡೆಸಿದ್ದಾರೆ. ಇದಕ್ಕೆ ಸೂಕ್ತಕ್ರಮ ಜರುಗಿಸಿ ಎಂದು ಸದಸ್ಯರು ಒತ್ತಾಯಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಶಾರದಾ ಭೀಮಾಭೋವಿ, ಆಯುಕ್ತ ರೇಣುಕಾ ಉಪಸ್ಥಿತರಿದ್ದರು. ಇದೇ ಮೊದಲ ಬಾರಿಗೆ ಬಜೆಟ್‌ನ ಪ್ರಮುಖ ಅಂಶಗಳನ್ನು ಕಂಪ್ಯೂಟರ್‌ನ ಸ್ಲೈಡ್ ಷೋ ಮೂಲಕ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.