ADVERTISEMENT

ಭದ್ರಾವತಿ: ಸರ್‌ಎಂವಿ ಪುತ್ಥಳಿ ದಿಕ್ಕು ಬದಲು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 9:50 IST
Last Updated 11 ಅಕ್ಟೋಬರ್ 2011, 9:50 IST

ಭದ್ರಾವತಿ: ನಗರದ ಎರಡು ಪ್ರತಿಷ್ಠಿತ ಕಾರ್ಖಾನೆಗಳ ಸ್ಥಾಪನೆಗೆ ಕಾರಣರಾದ ಸರ್ ಎಂ. ವಿಶ್ವೇಶ್ವರಯ್ಯ ಅವರ ಹಲವು ದಶಕದ ಪುತ್ಥಳಿಯ ದಿಕ್ಕು ಬದಲಿಸುವ ಧಾರ್ಮಿಕ ಕಾರ್ಯವನ್ನು ನಗರಸಭೆ ಸೋಮವಾರ ನೆರವೇರಿಸಿತು.

ಐದು ದಶಕದ ಇತಿಹಾಸ ಹೊಂದಿರುವ ಈ ಸರ್‌ಎಂವಿ ಪುತ್ಥಳಿಗೆ ಸುಂದರ ಮಂಟಪದ ಸೌಭಾಗ್ಯ ಸಹ ದೊರೆತಿತ್ತು. ಆದರೆ, ವಿಗ್ರಹ ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪಿತ ಆಗಿದ್ದು, ಕೆಲವರ ಚರ್ಚೆಗೆ ಕಾರಣವಾಗಿತ್ತು.

ರೈಲುನಿಲ್ದಾಣ ಮುಂಭಾಗದಲ್ಲಿ ಇರುವ ಈ ವಿಗ್ರಹ ಪೂರ್ವಾಭಿಮುಖವಾಗಿ ಇದ್ದರೆ ನಗರದ ಅಭಿವೃದ್ಧಿ ಮತ್ತಷ್ಟು ಹೆಚ್ಚಲಿದೆ ಎಂದು ಹಿರಿಯರು ಹೇಳಿದ್ದರ ಫಲವಾಗಿ ಬದಲಾವಣೆ ನಡೆದಿದೆ ಎಂದು ಮಾಜಿ ನಗರಸಭಾ ಸದಸ್ಯ  ಎನ್. ಕೃಷ್ಣಮೂರ್ತಿ ಸಭೆಯಲ್ಲಿ ಹೇಳುವ ಮೂಲಕ ಧಾರ್ಮಿಕ ಮಹತ್ವದ ವಿಚಾರವನ್ನು ತಿಳಿಸಿದರು.

ಬೆಳಿಗ್ಗೆ ಆರಂಭವಾದ ವಿವಿಧ ಧಾರ್ಮಿಕ ವಿಧಿ-ವಿಧಾನ ನಂತರ ಹೋಮದ ಪೂರ್ಣಾಹುತಿ ಸಂದರ್ಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ ಹಾಜರಿದ್ದು, ಪೂಜೆ ನೆರವೇರಿಸಿದರು.

ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, `ಬದುಕಿದ್ದಾಗ ನಾವು ಮಾಡುವ ಪ್ರತಿಯೊಂದು ಕೆಲಸವು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನೀಯ, ಈ ನಿಟ್ಟಿನಲ್ಲಿ ಶ್ರಮಿಸಿದವರು ಸರ್‌ಎಂವಿ~ ಎಂದು ಬಣ್ಣಿಸಿದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಬಿ.ಕೆ. ಮೋಹನ್, ಸದಸ್ಯರಾದ ಆರ್. ವೇಣುಗೋಪಾಲ್,ಶಾರದ ಭೀಮಾಬೋವಿ, ಮೆಹಬೂಬ್‌ಸಾಬ್, ದೇವಿಕಾ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.