ADVERTISEMENT

`ಭ್ರಷ್ಟರೇ ಜನಪ್ರಿಯ; ಅಪಾಯಕಾರಿ ಬೆಳವಣಿಗೆ'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 8:48 IST
Last Updated 1 ಏಪ್ರಿಲ್ 2013, 8:48 IST

ಶಿವಮೊಗ್ಗ: ಭ್ರಷ್ಟರನ್ನೇ ಜನ ಮೆಚ್ಚಿಕೊಂಡಿರುವುದು ಅಪಾಯಕಾರಿ ಬೆಳವಣಿಗೆ ಎಂದು ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಜೆ.ಎಸ್. ಸದಾನಂದ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 91ನೇ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೇವಂಗಿ ಡಿ.ಆರ್. ಮಾನಪ್ಪ ಸ್ಮಾರಕ ದತ್ತಿ ಅಂಗವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಆಶಯ ಸಮಕಾಲೀನ ಸವಾಲುಗಳು ವಿಚಾರವಾಗಿ ಅವರು ಮಾತನಾಡಿದರು.

ನಮ್ಮವರು ಆಡಳಿತ ನಡೆಸಬೇಕು. ಜಾತಿ, ಭ್ರಷ್ಟಾಚಾರ ಮೊದಲು ಇರಲಿಲ್ಲವೇ; ಮುಂಚೆ ಇದ್ದವರು ತಿಂದಿಲ್ಲವೇ ಎಂದು ಕೇಳುವ ಅಪಾಯವನ್ನು ಗಾಂಧೀಜಿ ಅಂದೇ ಎಚ್ಚರಿಸಿದ್ದರು. ಹಿಂದೆ ನಡೆಯುತ್ತಿದ್ದ ಚಳವಳಿಗಳು ಸತ್ತು ಹೋಗಿ ಆ ಜಾಗದಲ್ಲಿ ಸಮರ್ಥಿಸುವವರು ಬಂದು ನಿಂತಿದ್ದಾರೆ ಎಂದರು.

ಒಬ್ಬ ಕೊಲೆಗಾರನಿಗೆ ಕಾನೂನು, ಸಮಾಜ ನೋಡುವ ದೃಷ್ಟಿಕೋನ ಒಂದಾದರೆ, ಭ್ರಷ್ಟನನ್ನು ನೋಡುವ ಜನರ ದೃಷ್ಟಿ ಬದಲಾಗಬೇಕು. ಚುನಾವಣೆ ಕೇವಲ ಪದ್ಧತಿಯಾಗಿದೆ. ಚುನಾವಣೆಯ ಆಧಾರದ ಮೇಲೆ ಸರ್ಕಾರ ರಚನೆಯಾಗುತ್ತೆ. ಆದರೆ, ಚುನಾವಣೆ ಹೇಗೆ ನಡೆಯಬೇಕು ಎಂದು ತೀರ್ಮಾನಿಸುವವರ ಸಂಖ್ಯೆ ಕಡಿಮೆ ಆಗಿದೆ. ಚುನಾವಣೆ, ಅಧಿಕಾರ ಒಂದಕ್ಕೊಂದು ಸಂಬಂಧವಿಲ್ಲವಾಗಿದೆ. ಭ್ರಷ್ಟಾಚಾರ ವಿಕೇಂದ್ರಿಕರಣ ಆಗಿದೆ. ಚಳವಳಿಗಳೇ ಪರಿಹಾರ ಆಗುವುದಾದರೆ, ಆ ಚಳವಳಿಗೆ ಅಧಿಕಾರದ ಆಸೆ ಇರಬಾರದು ಎಂದರು.

ದತ್ತಿದಾನಿಗಳಾದ ದೇವಂಗಿ ಡಿ. ಎಂ. ಮನುದೇವ್, ವಿದ್ಯಾರ್ಥಿಗಳಿಗೆ ಸಾಹಿತ್ಯದ ಪುಸ್ತಕಗಳನ್ನು ಓದಲು ವಿತರಿಸುವ ಮೂಲಕ ಉದ್ಘಾಟಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಶರಶ್ಚಂದ್ರ ರಾನಡೆ ಸಾಹಿತ್ಯದಲ್ಲಿನ ಹಾಸ್ಯ ಪ್ರಸಂಗವನ್ನು ವಿವರಿಸಿದರು.

ವಾಸವಿ ಭಜನಾ ಮಂಡಳಿ ಅಧ್ಯಕ್ಷೆ ಗೀತಾ ನಾಗೇಶ್, ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘದ ಅಧ್ಯಕ್ಷ ಬಿ.ಎಸ್. ನರಸಿಂಹಮೂರ್ತಿ ಉಪಸ್ಥಿತರಿದ್ದರು. ಗಾಯಕಿ ಮಮತಾ ಹಾಡಿದರು. ಕವಿಗಳಾದ ಪ್ರಕಾಶ್ ಕಮ್ಮೋರ್, ಡಿ. ಗಣೇಶ್, ದತ್ತಾತ್ರಿ ಜೊಯಿಸ್, ಗಾಯಿತ್ರಿ ರಾಮಸ್ವಾಮಿ, ಲತಾ ನಾಗರಾಜ್ ಕವನ ವಾಚಿಸಿದರು. ಜಿ. ಎಸ್. ಅನಂತು, ಜಯಶ್ರೀ ಗಣೇಶ್ ಚುಟುಕು ವಾಚಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ. ನವೀನ್‌ಕುಮಾರ್ ಸ್ವಾಗತಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕು ಕಾರ್ಯದರ್ಶಿ ಇ. ಜಯಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.