ಸೊರಬ: ಪ್ರತಿಯೊಂದು ಮಗುವಿಗೆ ಬಾಲ್ಯವನ್ನು ಕಳೆಯುವುದು ಮೂಲ ಹಕ್ಕಾಗಿದ್ದು, ಆ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಯಾರಿಂದಲೂ ಆಗಬಾರದು ಎಂದು ಕಿರಿಯ ವಿಭಾಗದ ನ್ಯಾಯಾಧೀಶರಾದ ಜಿ. ಅನಿತಾ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ ಒಂದು ಸವಿನೆನಪುಗಳ ಆಗರ. ಹಲವು ಪಾಲಕರು ಮಕ್ಕಳನ್ನು ಈ ವಯಸ್ಸಿನಲ್ಲಿ ಅವರ ಇಚ್ಛೆಗೆ ಕೆಲಸದಲ್ಲಿ ತೊಡಗಿಸುವುದು ಸರಿಯಲ್ಲ. ಸರ್ಕಾರ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಉಚಿತವಾಗಿ ಊಟ, ವಸತಿ, ಪುಸ್ತಕ, ಬಟ್ಟೆ ನೀಡುತ್ತಿರುವುದರಿಂದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಾರದು ಎಂದರು.
ಕಾರ್ಮಿಕ ನಿರೀಕ್ಷಕ ಎಸ್.ಎಸ್. ರಾಮಮೂರ್ತಿ ಮಾತನಾಡಿ, ದೇಶದಲ್ಲಿ ಬಾಲಕಾರ್ಮಿಕರ ವಿರೋಧಿಯನ್ವಯ ಆರು ಲಕ್ಷದ ಎಪ್ಪತ್ತು ಸಾವಿರ ಕೇಸು ದಾಖಲಾಗಿದ್ದು, ಅದರಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಜನರಿಗೆ ಶಿಕ್ಷೆಯಾಗಿದೆ. ಜಿಲ್ಲೆಯ ಸಾಗರ ಮತ್ತು ಶಿವಮೊಗ್ಗದಲ್ಲಿ ಬಾಲ ಕಾರ್ಮಿಕ ಶಾಲೆಗಳಿವೆ. ಬಾಲ ಕಾರ್ಮಿಕರು ತಾಲ್ಲೂಕಿನಲ್ಲಿ ಎಲ್ಲಿಯಾದರೂ ಕೆಲಸಕ್ಕೆ ತೊಡಗಿಸಿಕೊಂಡಿದ್ದರೆ ವಿವರವನ್ನು ತಮಗೆ ತಿಳಿಸುವಂತೆ ಮನವಿ ಮಾಡಿದರು.
ವಕೀಲ ವೈ.ಜಿ. ಪುಟ್ಟಸ್ವಾಮಿ, ಒಂದು ರಾಷ್ಟ್ರದ ಅಭಿವೃದ್ಧಿಗೆ ಸದೃಢ ಮಾನವ ಸಂಪನ್ಮೂಲ ಅತೀಮುಖ್ಯ. ಈ ಸಂಪನ್ಮೂಲ ಸದೃಢವಾಗಬೇಕೆಂದರೆ ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಜತೆಗೆ ಉತ್ತಮ ಕೌಶಲವಂತರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಒಂದು ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮಕ್ಕಳನ್ನು ಕೂಲಿಗೆ ಕಳುಹಿಸದೇ ಅವರಿಗೆ ಚಿಕ್ಕ ವಯಸ್ಸಿನಲ್ಲಿ ಉತ್ತಮ ಆಹಾರ, ಆಟ, ಪಾಠಗಳನ್ನು ಕಲ್ಪಿಸಿಕೊಡಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಡಿ. ಮಾಂಗ್ಲಿ, ಎಫ್.ಎನ್. ಲಿಂಗದಾಳ್, ಮಹಾಬಲೇಶ್ವರ ನಾಯ್ಕ, ವರ್ತಕರ ಸಂಘದ ಅಧ್ಯಕ್ಷ ಗುತ್ತಿ ಚನ್ನಬಪಸ್ಪ, ಯುವ ವರ್ತಕರ ಸಂಘದ ಅಧ್ಯಕ್ಷ ನಾಗರಾಜ ಜೈನ್ ಹಾಜರಿದ್ದರು. ಪ್ರಶಾಂತ ಸ್ವಾಗತಿಸಿದರು, ಪಿ. ಸುಧಾಕರನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕೆ.ಎಚ್. ತಮ್ಮಣ್ಣಪ್ಪ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.