ADVERTISEMENT

ಮತ್ತೆ ಜೀವ ತಳೆದ ಬೃಂದಾವನದ ಕನಸು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 10:45 IST
Last Updated 15 ಅಕ್ಟೋಬರ್ 2012, 10:45 IST
ಮತ್ತೆ ಜೀವ ತಳೆದ ಬೃಂದಾವನದ ಕನಸು
ಮತ್ತೆ ಜೀವ ತಳೆದ ಬೃಂದಾವನದ ಕನಸು   

ಕಾರ್ಗಲ್: ಶರಾವತಿ ಕಣಿವೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮತ್ತೆ ಜೀವ ತಳೆದಿರುವ ಬೃಂದಾವನ ಮಾದರಿಯ ಉದ್ಯಾನ ಕನಸು ಸ್ಥಳೀಯರಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತಿರುವುದು ಕಂಡುಬರುತ್ತಿದೆ.

2002ನೇ ಇಸವಿಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ, ಪ್ರವಾಸೋದ್ಯಮ ಸಚಿವರಾಗಿದ್ದ ಪಿ.ಸಿ. ಅಲೆಗ್ಸಾಂಡರ್, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಸಮ್ಮುಖದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆದೇಶದ ಮೇರೆಗೆ ಅಸ್ತಿತ್ವಕ್ಕೆ ಬಂದ ಜೋಗ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ  ರೂಪುಗೊಂಡ ಉದ್ಯಾನ ಕಾರ್ಯ ಯೋಜನೆ ನಂತರದ ದಿನಗಳಲ್ಲಿ ನನೆಗುದಿಗೆ ಬಿದ್ದಿತ್ತು.

10 ವರ್ಷಗಳ ನಂತರ ಮತ್ತೆ ಜೋಗ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಬೃಂದಾವನ ಮಾದರಿಯ ಉದ್ಯಾನ ನಿರ್ಮಾಣಕ್ಕೆ  10 ಕೋಟಿ ಹಣವನ್ನು ಮೀಸಲಿಟ್ಟು ಯೋಜನೆ ಇನ್ನು 2 ತಿಂಗಳಿನಲ್ಲಿ ಕಾರ್ಯಾರಂಭ ಆಗಬೇಕು ಎಂದು ಸಭೆ ನಿರ್ಣಯ ಅಂಗೀಕರಿಸಿರುವುದು ಸ್ಥಳೀಯರಲ್ಲಿ ಅಭಿವೃದ್ಧಿ ಶಕೆಯ ಹೊಸ ಆಶಾಭಾವನೆಯನ್ನು ಮೂಡಿಸಿದೆ.

ಈಚೆಗೆ ಜೋಗದಲ್ಲಿ ನಡೆದ ನಿರ್ವಹಣಾ ಪ್ರಾಧಿಕಾರದ ಪೂರ್ಣ ಪ್ರಮಾಣದ ಸಭೆ ಹೊಸ ಮೈಲುಗಲ್ಲಾಗಿ ಈ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಆನಂದ್‌ಸಿಂಗ್ ಜೋಗ ನಿರ್ವಹಣಾ ಪ್ರಾಧಿಕಾರಾದ ಅಧ್ಯಕ್ಷರಾಗಿದ್ದು, ಉಪ ಮುಖ್ಯಮಂತ್ರಿಗಳು ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎಸ್. ಈಶ್ವರಪ್ಪ ಸಹ ಅಧ್ಯಕ್ಷರಾಗಿರುತ್ತಾರೆ.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದು, ಶಾಸಕ ಗೋಪಾಲಕೃಷ್ಣ ಬೇಳೂರು ಸದಸ್ಯರಾಗಿರುವ ಸಮಿತಿ ಒಟ್ಟಿಗೆ ಸೇರಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಜೋಗದಲ್ಲಿ ಸಭೆ ನಡೆಸಿರುವುದು ಮಹತ್ವ ಪೂರ್ಣ ತೀರ್ಮಾನಗಳನ್ನು ಕೈಗೊಳ್ಳಲು ಕಾರಣವಾಗಿದೆ.

ಕೆಪಿಸಿ ನಿರ್ವಹಣೆ ವ್ಯಾಪ್ತಿಗೆ ಒಳಪಟ್ಟಿರುವ ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿ ಇರುವ ಸುಮಾರು 60 ಎಕರೆ ಖಾಲಿ ಜಮೀನು ಭದ್ರತೆ ದೃಷ್ಟಿಯಿಂದ ಮತ್ತು ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಕೆಪಿಸಿ ಆರಂಭದಲ್ಲಿ ಹಿಂದೇಟು ಹಾಕಿತ್ತು. ನಂತರ, ಅಗತ್ಯ ಭದ್ರತೆಗಳ ನಿಯೋಜನೆ ಭರವಸೆಯೊಂದಿಗೆ ಜಮೀನು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT