ADVERTISEMENT

ಮನಸ್ಥಿತಿ ಬದಲಾಗದೆ ಉತ್ತಮ ಸಮಾಜ ಅಸಾಧ್ಯ

ಶಿವಮೊಗ್ಗ ತಾಲ್ಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅಭಿಮತ; ಪೋಷಕರ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 10:32 IST
Last Updated 22 ಡಿಸೆಂಬರ್ 2012, 10:32 IST

ಶಿವಮೊಗ್ಗ: `ಪೋಷಕರ ಮನಸ್ಥಿತಿ ಬದಲಾಗದ ಹೊರತು ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಿಲ್ಲ' - ಇದು ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟಕರು, ಅಧ್ಯಕ್ಷರ ಸ್ಪಷ್ಟ ನುಡಿ.

ನಗರದ ಬಸವನಗುಡಿಯ ಸತ್ಯಸಾಯಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶಿವಮೊಗ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆನಂದ ಸಾಯಿ ಶಿಕ್ಷಣ ಸಂಸ್ಥೆ ಸಂಯುಕ್ತವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ತಾಲ್ಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಹಿಂದಿನ ಜಿಲ್ಲಾ ಮತ್ತು ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಪ್ರಗತಿ ನಿಲುವಾಸೆ ಮತ್ತು ಪ್ರಸ್ತುತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಸ್. ಹೇಮಂತ ಕುಮಾರ್ ಅವರ ಅಭಿಮತ.

ಮಕ್ಕಳ ಮೇಲೆ ಒತ್ತಡ ಹೇರುವುದಷ್ಟೇ ತಮ್ಮ ಜವಾಬ್ದಾರಿ ಎಂದು ಭಾವಿಸಿರುವ ಪೋಷಕರು, ಮಾನವೀಯ ಸಂಬಂಧಗಳಿಂದ ಮಕ್ಕಳನ್ನು ದೂರ ಇಟ್ಟಿದ್ದಾರೆ. ಸದಾ ಓದು, ಟ್ಯೂಷನ್ ಎಂದು ಹೇಳಿ ಮಕ್ಕಳಿಗೆ ಹೊಸತನ್ನು ಕಲಿಯಲು ಬಿಡುತ್ತಿಲ್ಲ ಎಂದು ದೂರಿದರು.

ಮಕ್ಕಳು, ಹಿರಿಯರಿಗೆ ಗೌರವ ಕೊಡುತ್ತಿಲ್ಲ ಎಂದು ದೂರುವ ಪೋಷಕರು, ತಾವು ಹಿರಿಯರನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎಂಬ ಅರಿವಿಲ್ಲ. ಎಷ್ಟು ಜನ ಪೋಷಕರು ಮಕ್ಕಳನ್ನು  ಸಂಬಂಧಿಕರ ಮನೆಗಳಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರಶ್ನಿಸಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪ್ರಗತಿ ನಿಲುವಾಸೆ, ಶಾಲೆ, ಟ್ಯೂಷನ್, ಮನೆ ಈ ಮೂರೇ ಮಕ್ಕಳ ಜಗತ್ತಾಗಿದೆ. ಮಕ್ಕಳು ಪುಸ್ತಕದ ಬದನೆಕಾಯಿ ಆಗುತ್ತಿದ್ದಾರೆ. ಅನ್ಯ ಅನುಭವಗಳಿಗೆ ಮಕ್ಕಳು ಒಡ್ಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನೇರವಾಗಿ ಪೋಷಕರೇ ಕಾರಣ ಎಂದು ವಿಷಾದಿಸಿದರು.

ಅಧ್ಯಕ್ಷ ಭಾಷಣ ಮಾಡಿದ ಗಾಜನೂರು ಜವಾಹರ್‌ಲಾಲ್ ನವೋದಯ ವಿದ್ಯಾಲಯದ ಎಸ್. ಹೇಮಂತಕುಮಾರ್, ಪೋಷಕರು, ಶಾಲೆ ಹಾಗೂ ಮನೆಗಳು ಹೂವುಗಳಾದರೆ, ಮಕ್ಕಳು ಮಕರಂದಗಳಾಗುತ್ತಾರೆ. ಹೂವುಗಳು ಹಾವುಗಳಾದರೆ, ಮಕರಂದಗಳು ವಿಷವಾಗುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

ಹಿಂದೆ ಹಿರಿಯರೇ ಮಕ್ಕಳಿಗಾಗಿ ಸಾಹಿತ್ಯ ರಚಿಸುತ್ತಿದ್ದರು. ಈಗ ಮಕ್ಕಳೇ ತಮ್ಮ ಭಾವನೆಗಳಿಗೆ ಸಾಹಿತ್ಯ ರೂಪ ಕೊಡುವ ಕಾಲ ಬಂದಿದೆ. ಈ ಕ್ಷೇತ್ರಕ್ಕೆ ಬರಲು ಬಹಳ ಬುದ್ಧಿವಂತಿಕೆ ಬೇಡ. ಇಲ್ಲಿಗೆ ಬಂದ ಮೇಲೆ ಬುದ್ಧಿವಂತಿಕೆ ತಾನಾಗಿಯೇ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಕಮಲಾಕರ್ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳಿಗೆ ಬಹಳಷ್ಟು  ಸೌಲಭ್ಯ ನೀಡುತ್ತಿದೆ; ಕೊಡುವ ಪ್ರಯತ್ನ ಮಾಡುತ್ತಿದೆ. ಆದರೆ, ಅವರಲ್ಲಿ ಮಮಕಾರ, ಅಂತಕರಣ, ಪ್ರೀತಿ, ವಿಶ್ವಾಸ ಕಲಿಸುವಲ್ಲಿ ಎಡವುತ್ತಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮನೆಯಲ್ಲಿ ಪೋಷಕರು ಓದಿನ ಹೊರತಾದ ಕ್ರಿಯೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು. ಹೀಗಾದರೆ ಮಕ್ಕಳಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ, ಆನಂದ ಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್. ರತ್ನಯ್ಯ, ಕಾರ್ಯದರ್ಶಿ ಕೆ. ಗೋಪಾಲ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ರಿಯಾಜ್ ಬಾಷ, ನಿವೃತ್ತ ಶಿಕ್ಷಕಿ ಗೌರಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.