ADVERTISEMENT

ಮನಸ್ಸು ಕಟ್ಟುವ ಕೆಲಸ ಮಹತ್ವದ್ದು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 9:00 IST
Last Updated 22 ಸೆಪ್ಟೆಂಬರ್ 2011, 9:00 IST

ಸಿರಿಗೆರೆ: ಮಠಗಳೆಂದರೆ ಬರೀ ಕಟ್ಟಡಗಳನ್ನು ಕಟ್ಟುವುದು, ಐಷಾರಾಮಿ ವಸ್ತುಗಳು ಹಾಗೂ ಭೋಗದ ವಸ್ತುಗಳ ಲಾಲಸೆಗೆ ಒಳಗಾಗುವುದಲ್ಲ. ಮನಸ್ಸು-ಮನಸ್ಸುಗಳನ್ನು ಕಟ್ಟುವ ಕೆಲಸದಲ್ಲಿ ಮುಂದಾಗುವುದು ಎಂದು ಶಾಸಕ ಎಸ್.ಕೆ. ಬಸವರಾಜನ್ ಹೇಳಿದರು.

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 19ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಐಷಾರಾಮಿ ಬದುಕಿನಿಂದ ಹೊರತಾಗಿದ್ದ ಅವರು ಬರೀ ಕಟ್ಟಡಗಳನ್ನು ಕಟ್ಟುವುದಕ್ಕಿಂತ ಮನಸ್ಸುಗಳನ್ನು ಕಟ್ಟುವ ಕೆಲಸ ತುಂಬಾ ಮಹತ್ತರವಾದುದು ಎಂಬ ಸತ್ಯ ಮನಗಂಡಿದ್ದರು. ಅದೇ ರೀತಿ ಸಂಘಟನೆ, ಸಂಸ್ಕಾರ ಹೊಂದಿದ್ದ ಶ್ರೀಗಳು ಗ್ರಾಮೀಣ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟರು. ಇದರಿಂದ ಮಠ ಮತ್ತು ಸಮಾಜ ಬೃಹತ್ತಾಗಿ ಬೆಳೆದಿದೆ. ಅವರು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯನ್ನೂ ಗುರುತಿಸಿ ಅವನ ನೋವಿಗೆ ಸ್ಪಂದಿಸುವ ದಿವ್ಯಶಕ್ತಿ ಹೊಂದಿದ್ದರು ಎಂದು ಅಭಿಪ್ರಾಯಪಟ್ಟರು.

ಐಜಿಪಿ (ಪೂರ್ವವಲಯ) ಸಂಜಯ್ ಸಹಾಯ್ ಮಾತನಾಡಿ, ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಗುವಂತಾದರೆ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಇಂತಹ ಕೆಲಸವನ್ನು ಹಿಂದಿನಿಂದಲೇ ಮಾಡಿಕೊಂಡು ಬಂದ ಶ್ರೀಗಳ ಸಾಧನೆ ಶ್ಲಾಘನೀಯ ಎಂದರು.

ಪ್ರೊ.ಬಿ.ಪಿ. ವೀರೇಂದ್ರಕುಮಾರ್ ಮಾತನಾಡಿ, ಅಲಕ್ಷಿತ ಸಮುದಾಯದವನ್ನು ಜಾಗೃತಗೊಳಿಸುವ ಸಂಕಲ್ಪ ತೊಟ್ಟಿದ್ದ ಶ್ರೀಗಳು ತಾತ್ವಿಕ ಹಿನ್ನೆಲೆ ಉಳ್ಳವರು, ಬಸವಾದಿ ಶರಣರ ತಾತ್ವಿಕತೆ ಬಗ್ಗೆ ಅಪಾರ ನಂಬಿಕೆ ಇದ್ದು, ಅವುಗಳನ್ನು ಕಾರ್ಯರೂಪಕ್ಕೆ ತರುವ ಹಂಬಲ ಹೊಂದಿದ್ದರು. ಜಾತಿ ಪದ್ಧತಿ ವಿರುದ್ಧ ಸಿಡಿದು ನಿಂತು ಹೋರಾಟದ ಜೀವನ ನಡೆಸಿದ ಅವರು ಮಾತೃಹೃದಯಿಯಾಗಿದ್ದರು ಎಂದು ಬಣ್ಣಿಸಿದರು.

ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ. ಶಾಸಕ ಎಂ. ಬಸವರಾಜ ನಾಯ್ಕ, ವಿಶ್ವೇಶ್ವರಿ ಹಿರೇಮಠ, ತರಳಬಾಳು ವಿದ್ಯಾಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಕೆಂಚಪ್ಪ, ಆಡಳಿತಾಧಿಕಾರಿ ಪ್ರೊ.ಎಸ್.ಬಿ. ರಂಗನಾಥ್ ಉಪಸ್ಥಿತರಿದ್ದರು.

ಬಸವಲಿಂಗಯ್ಯ ಹಿರೇಮಠ ಹಾಗೂ ಜನ್ನಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವೈ.ಡಿ. ಹರ್ಷಿತಾ ಸ್ವಾಗತಿಸಿದರು, ಪಿ. ಸುಷ್ಮಾ ವಂದಿಸಿದರು. ಎಚ್.ಎನ್. ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.