ADVERTISEMENT

ಮಳೆ ಆರ್ಭಟ - ಜನ ಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 6:07 IST
Last Updated 4 ಜುಲೈ 2013, 6:07 IST

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಆರ್ಭಟ  ತೀವ್ರಗೊಂಡಿದ್ದು  ಜಿಲ್ಲಾದ್ಯಂತ ನದಿ, ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ತುಂಬಿ ಹರಿದಿವೆ. ಕಳೆದ 24 ಗಂಟೆಗಳಲ್ಲಿ ನಿರಂತರ ಸುರಿದ ಮಳೆಗೆ ಹಲವು ಕಡೆ ರಸ್ತೆ ಸಂಪರ್ಕ ಕಡಿದು ಹೋಗಿದೆ. ನಾಲೆಗಳು ಒಡೆದು ಹೋಗಿವೆ.  ಶಾಲಾ- ಕಾಲೇಜುಗಳಳಿಗೆ ರಜೆ ಘೋಷಿಸಲಾಗಿದೆ.

ಶಿವಮೊಗ್ಗ ನಗರ: ತುಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ನಗರದ ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಅಲ್ಲದೇ, ದುರ್ಗಿಗುಡಿ ಬಡಾವಣೆಯ ದುರ್ಗಿಗುಡಿ ಶಾಲಾ ಆವರಣಕ್ಕೆ ನೀರು ನುಗ್ಗಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

ತಕ್ಷಣ  ಶಾಸಕ ಕೆ.ಬಿ.ಪ್ರಸನ್ನಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನೀರು ನಿಲ್ಲದಂತೆ ಕಾಮಗಾರಿ ಕೈಗೊಳ್ಳುವಂತೆ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.

ಈ ನಡುವೆ ಶಿವಮೊಗ್ಗ ತಹಶೀಲ್ದಾರ್ ಕೋಟ್ರೇಶ್ ಪ್ರಕಟಣೆ ಹೊರಡಿಸಿದ್ದು, ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ತಗ್ಗುಪ್ರದೇಶಗಳಿಗೆ ನೀರು  ನುಗ್ಗಲಿದ್ದು, ಈ ಕೆಳಕಂಡ ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸೂಚಿಸಿದ್ದಾರೆ.

ನಗರದ ಇಮಾಮ್‌ಬಾಡಾ, ಕುಂಬಾರಗುಂಡಿ, ಅಮೀರ್ ಅಹಮದ್ ಕಾಲೋನಿ, ಗುಂಡಪ್ಪಶೆಡ್, ವೆಂಕಟೇಶ್ ನಗರ, ಹೊಸಮನೆ ಹಾಗೂ ಇಲಿಯಾಸ್ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ನಾಗರಿಕರು ಮುಂಜಾಗ್ರತೆ ವಹಿಸಿ ಸುರಕ್ಷಿತ ಸ್ಥಗಳಿಗೆ ತೆರಳಬೇಕು ಎಂದು ತಿಳಿಸಿದ್ದಾರೆ.

ಧಾರಾಕಾರ ಮಳೆ
ರಿಪ್ಪನ್‌ಪೇಟೆ: ಪಟ್ಟಣದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು  ಕೆರೆಕಟ್ಟೆಗಳು ತುಂಬಿ  ಭತ್ತದಗದ್ದೆ, ಶುಂಠಿ , ಅಡಿಕೆ ತೋಟಗಳಿಗೆ ನೀರು ನುಗ್ಗಿ ಹಾನಿಗೀಡಾಗಿವೆ. ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ  ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ಆಗಿದೆ. ಕಳಸೆ, ಬೆಳ್ಳೂರು, ಹಾರೋಹಿತ್ಲು ಅರಸಾಳು, ಕೆಂಚನಾಲ ಹೆದ್ದಾರಿಪುರ, ಬಾಳೂರು, ಚಿಕ್ಕಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಯೂ  ಹೆಚ್ಚಿನ ಮಳೆಯಾಗಿದೆ. ರೈತರು ಕೃಷಿ ಕಾರ್ಯದಲ್ಲಿ  ತೊಡಗಿಕೊಂಡಿದ್ದಾರೆ.

ಸಂಚಾರ ಬಂದ್: ಕಳಸೆ -ನೆರ‌್ಲಿಗೆ ಗ್ರಾಮದಲ್ಲಿ ಎರಡು ಮರ ಉರುಳಿಬಿದ್ದ ಪರಿಣಾಮ ವಿದ್ಯುತ್‌ಕಂಬಗಳು ಧರೆಗೆ ಉರುಳಿವೆ. ಈ ಭಾಗದಲ್ಲಿ ಜನತೆ ಕಗ್ಗತ್ತಲೆಯಲ್ಲಿ ಕಾಲಕಳೆಯುವಂತಾಗಿದೆ. ಅಲ್ಲದೆ ಗ್ರಾಮಾಂತರ ಸಾರಿಗೆ ಸಂಪರ್ಕ ಸಹ ಸಂಪೂರ್ಣ ಸ್ಥಗಿತಗೊಂಡಿದೆ. 

ಹಾನಿ: ಮಳೆಯಿಂದ ಹಾರೋಹಿತ್ಲು ಬುಕ್ಕಿವರೆ, ತಳಲೆ ಬೆಳ್ಳೂರು ವಿವಿಧೆಡೆ 40ಕ್ಕೂ ಅಧಿಕ  ವಿದ್ಯುತ್ ಕಂಬಗಳು  ಉರುಳಿವೆ.  ಮುಗುಡ್ತಿ ಗ್ರಾಮದ ಹೆಗ್ಗೆರೆಯಲ್ಲಿ ಕೆರೆಕೋಡಿ ಬಿದ್ದು ಸುಮಾರು 30ಕ್ಕೂ ಅಧಿಕ ಎಕರೆ ಪ್ರದೇಶ ಶುಂಠಿ, ಅಡಿಕೆ ಸಸಿ ತೋಟ, ಅಗೆ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. ಗವಟೂರು ಗ್ರಾಮದ ಲೀಲಾ ರಾಜಶೇಖರ್ ಎಂಬುವವರ ಮನೆಯ ಹಿಂಭಾಗದ ಗೋಡೆ ಕುಸಿತು 10 ಸಾವಿರ ನಷ್ಟವಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.