ADVERTISEMENT

ಮಾಂಟೋ ಅಸಾಧಾರಣ ಲೇಖಕ: ರಾಜಶೇಖರ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 4:55 IST
Last Updated 8 ಅಕ್ಟೋಬರ್ 2012, 4:55 IST

ಸಾಗರ: ಚಾರಿತ್ರಿಕವಾದ ಅತ್ಯಂತ ಭಯಾನಕವಾದ ಸಂಗತಿಗಳನ್ನು  ತಣ್ಣನೆಯ ಧ್ವನಿಯಲ್ಲಿ ಹೇಳಿರುವುದು ಮಾಂಟೋನ ಕತೆಗಳ ವೈಶಿಷ್ಟ್ಯತೆಯಾಗಿದೆ ಎಂದು ಲೇಖಕ ಜಿ. ರಾಜಶೇಖರ್ ಹೇಳಿದರು.

ಇಲ್ಲಿಗೆ ಸಮೀಪದ ಹೆಗ್ಗೋಡಿನಲ್ಲಿ ಭಾನುವಾರ ಆರಂಭಗೊಂಡ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಲೇಖಕ ಸಾದತ್ ಹಸನ್ ಮಾಂಟೋನ ಬರಹಗಳ ಕುರಿತು ಅವರು ಮಾತನಾಡಿದರು.

ಕೋಮು ಹಿಂಸೆಯ ಅರ್ಥಹೀನತೆ, ಸರ್ವೇ ಸಾಮಾನ್ಯತೆಯನ್ನು ಮಾಂಟೋ ತನ್ನ ಕತೆಗಳಲ್ಲಿ ವಿವರಿಸಿರುವ ರೀತಿ ಅನನ್ಯವಾದುದು. ಹಿಂಸೆಗೆ ಯಾವ ಸಕಾರಣವೂ ಇಲ್ಲ ಎಂಬ ನಿಲುವು ಹೊಂದಿದ್ದ ಮಾಂಟೋಗೆ ಹಿಂಸೆಯ ಯಾವ ಕಥಾನಕವೂ ಸ್ವಗತವಾಗದೆ ಇದ್ದರೆ ಅದೊಂದು ಡೋಂಗಿ ಬರಹ ಆಗುತ್ತದೆ ಎಂಬ ಎಚ್ಚರ ಇತ್ತು ಎಂದರು.

ಮಾಂಟೋಗೆ ಕತೆಯ ಸಂಕ್ಷಿಪ್ತತೆ ಎಂಬುದು ಕೇವಲ ಚಿಲ್ಲರೆ ತಂತ್ರವಾಗಿರಲಿಲ್ಲ. ಕತೆಗೆ ವಿವರಗಳ ಮಾತಿನ ಅಗತ್ಯವೇ ಬೇಕಿಲ್ಲ. ಮಾತುಗಳು ಇಂಗಿತ ಮತ್ತು ಘಟನೆಯ ಸಂಕೇತಗಳು ಎಂದು ಭಾವಿಸಿ ಬರೆದ ಮಾಂಟೋ ಒಂದು ಸಾಲಿನಲ್ಲಿ ಇಡೀ ಕಾಲವನ್ನು, ಚರಿತ್ರೆಯನ್ನು ಹಿಡಿದಿಡಬಲ್ಲ ಸಾಮರ್ಥ್ಯ ಹೊಂದಿದ್ದ ಅಪರೂಪದ ಲೇಖಕ ಎಂದು ವಿಶ್ಲೇಷಿಸಿದರು.

ಭಾರತದಲ್ಲಿ ಗಾಂಧೀಜಿ ಕೊಲೆಯನ್ನೂ ಸಂಭ್ರಮಪಟ್ಟು ಸಿಹಿ ಹಂಚಿದವರು ಇದ್ದಾರೆ ಎಂಬುದನ್ನು ತನ್ನ ಕತೆಗಳಲ್ಲಿ ಹೇಳಿದ ದಿಟ್ಟ ಲೇಖಕ ಮಾಂಟೋ. ಸ್ತ್ರೀವಾದ ಮುನ್ನೆಲೆಗೆ ಮುಂಚಿತವಾಗಿಯೇ ಗಂಡು ಹೆಣ್ಣನ್ನು ಹೇಗೆ ಆಳುತ್ತಿದ್ದಾನೆ ಮತ್ತು ಹೆಣ್ಣು ತನಗೇ ಗೊತ್ತಿಲ್ಲದಂತೆ ಹೇಗೆ ಆಳ್ವಿಕೆಗೆ ಒಳಗಾಗುತ್ತಿದ್ದಾಳೆ ಎಂಬುದರ ಸಮರ್ಥ ಚಿತ್ರಣವನ್ನು ತನ್ನ ಕತೆಯಲ್ಲಿ ಕೊಟ್ಟಿದ್ದಾನೆ ಎಂದು ಹೇಳಿದರು.

ಕತೆಗಾರ ವಿವೇಕ್ ಶಾನುಭಾಗ ಮಾತನಾಡಿ, ಮಾಂಟೋ ಕೇವಲ ಭಾರತ ಮತ್ತು ಪಾಕಿಸ್ತಾನ ನಡುವೆ ಆಗಿರುವ ವಿಭಜನೆಯ ವಸ್ತುವಿಗೆ ಸಂಬಂಧಪಟ್ಟ ಲೇಖಕ ಎಂದು ಹೇಳಿದರೆ ಆತನಿಗೆ ಅನ್ಯಾಯ ಮಾಡಿದಂತೆ. ಮನುಷ್ಯನೊಳಗೆ ಇರುವ ಮತ್ತೊಬ್ಬ ಮನುಷ್ಯನ ಕುರಿತು ಕುತೂಹಲದಿಂದ ಬರೆದ ಲೇಖಕ ಮಾಂಟೋ ಎಂದರು.

ಭಾರತ, ಪಾಕಿಸ್ತಾನ ವಿಭಜನೆಯಾದಾಗ ಅವ್ಯಕ್ತವಾದ ಗಡಿ ಹೀಗೆ ಭೌತಿಕ ಗಡಿಯಾಗಿ ಪರಿವರ್ತನೆಯಾದ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಮಾಂಟೋಗೆ ಸಾಧ್ಯವಾಗಲೇ ಇಲ್ಲ. ಈ ಕಾರಣಕ್ಕಾಗಿಯೇ ಆತ್ಮವೃತ್ತಾಂತದ ರೀತಿಯಲ್ಲಿ ವಿಭಜನೆಯ ಕುರಿತು ಆತ ತನ್ನ ಬರಹಗಳ ಮೂಲಕ ಅನುಸಂಧಾನ ನಡೆಸಿದ್ದಾನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ `ಮ್ಯೂಸಿಯಂ ಥಿಯೇಟರ್~ ತಂಡದವರು ಲೇಖಕ ಸಾದತ್ ಹಸನ್ ಮಾಂಟೋನ ಕತೆಗಳನ್ನು ಆಧರಿಸಿದ ಕಿರು ನಾಟಕ ಪ್ರದರ್ಶಿಸಿದರು. ಅನನ್ಯ ಕಾಸರವಳ್ಳಿ ನಿರ್ದೇಶನದ ಮಾಂಟೋ ಕತೆ ಆಧರಿಸಿದ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು. ಸಂಜೆ ಶಿವರಾಮ ಕಾರಂತ ರಂಗಮಂದಿರದಲ್ಲಿ `ವಿಗಡ ವಿಕ್ರಮರಾಯ~ (ರಚನೆ: ಸಂಸ, ನಿರ್ದೇಶನ: ಮಂಜು ಕೊಡಗು)ನೀನಾಸಂ ತಿರುಗಾಟ ನಾಟಕ  ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.