ADVERTISEMENT

ಮಾಜಿ ಮುಖ್ಯಮಂತ್ರಿಯ `ಶಕ್ತಿ' ಕೇಂದ್ರ

ಎಚ್.ಎಸ್.ರಘು
Published 8 ಏಪ್ರಿಲ್ 2013, 6:03 IST
Last Updated 8 ಏಪ್ರಿಲ್ 2013, 6:03 IST

ಶಿಕಾರಿಪುರ: ರಾಜ್ಯದಲ್ಲಿಯೇ ಶಕ್ತಿ ಕೇಂದ್ರ ಎಂದು ಬಿಂಬಿತವಾಗಿರುವ ಶಿಕಾರಿಪುರ ತಾಲ್ಲೂಕಿನಲ್ಲಿ 12ನೇ ಚುನಾವಣೆಗೆ ತಯಾರಿ ನಡೆಯುತ್ತಿದೆ.

ರಾಜ್ಯಕ್ಕೆ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಹಾಗೂ ಬಂಧಿಖಾನೆ ಸಚಿವರನ್ನು ನೀಡಿದ ಈ ಕ್ಷೇತ್ರದ 11 ಚುನಾವಣೆಗಳಲ್ಲಿ 6 ಬಾರಿ ಬಿಜೆಪಿ, 4 ಬಾರಿ ಕಾಂಗ್ರೆಸ್ ಹಾಗೂ 1 ಬಾರಿ  ಸಂಯುಕ್ತ ಸೋಷಲಿಸ್ಟ್ ಪಾರ್ಟಿ ಗೆಲುವು ಸಾಧಿಸಿವೆ.

ಕ್ಷೇತ್ರದ ಇತಿಹಾಸದಲ್ಲಿ 1962ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೀರಪ್ಪ 17,313 ಮತ ಪಡೆಯುವ ಮೂಲಕ , ಪ್ರಜಾ ಸೋಷಲಿಸ್ಟ್ ಪಾರ್ಟಿಯ ಜಿ. ಬಸವಣ್ಯಪ್ಪ ವಿರುದ್ದ ಗೆಲುವು ಸಾಧಿಸಿದರು. ಎರಡೇ ಪಕ್ಷಗಳು ಇಲ್ಲಿ ಸ್ಪರ್ಧೆ ನಡೆಸಿದ್ದವು. ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿತ್ತು. ಅಂದು ಶಿಕಾರಿಪುರ ತಾಲ್ಲೂಕಿನ ಮತದಾರರ ಸಂಖ್ಯೆ 60,518. ಇದಕ್ಕೂ ಮೊದಲು 1952-1957ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರ, ಸೊರಬ ತಾಲ್ಲೂಕಿನೊಂದಿಗೆ ಜಂಟಿಯಾಗಿತ್ತು.

ತದ ನಂತರ 1967ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ಸೋಷಲಿಸ್ಟ್ ಪಾರ್ಟಿಯಿಂದ ಸ್ಪರ್ಧೆ ನಡೆಸಿದ ಜಿ. ಬಸವಣ್ಯಪ್ಪ 21,241 ಮತ ಪಡೆದು, ಕಾಂಗ್ರೆಸ್‌ನ ವೀರಪ್ಪ ವಿರುದ್ಧ ಗೆಲುವು ಸಾಧಿಸಿದರು.

1972  ಹಾಗೂ 1978 ರಲ್ಲಿ ನಡೆದ 2 ಚುನಾವಣೆಯಲ್ಲೂ ಕಾಂಗ್ರೆಸ್ ಕೆ. ವೆಂಕಟಪ್ಪ ಗೆಲುವು ಸಾಧಿಸುವ ಮೂಲಕ ಕೆಲವು ವರ್ಷಗಳ ಕಾಲ ಬಂಧೀಖಾನೆ ಹಾಗೂ ತೋಟಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿದರು.

1983ರ ಚುನಾವಣೆಯಲ್ಲಿ ತಾಲ್ಲೂಕಿನ ರಾಜಕಾರಣದ ದಿಕ್ಕು ಬದಲಾಯಿತು. ತಾಲ್ಲೂಕಿನಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಿದ ಬಿ.ಎಸ್. ಯಡಿಯೂರಪ್ಪ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಭದ್ರ ಕೋಟೆಗೆ ಲಗ್ಗೆ ಇಟ್ಟರು. 1983 ರ ವಿಧಾನ ಸಭಾ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ 40,687 ಮತ ಪಡೆಯುವ ಮೂಲಕ ಮಾಜಿ ಸಚಿವ ಕೆ. ವೆಂಕಟಪ್ಪ ವಿರುದ್ದ ಮೊದಲ ಗೆಲುವು ಸಾಧಿಸಿದರು. ಅಂದು ಒಟ್ಟು ಮತದಾರರ ಸಂಖ್ಯೆ 87,794.

1985ರಲ್ಲಿ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪ 39,077 ಮತ ಪಡೆಯುವ ಮೂಲಕ ಕಾಂಗ್ರೆಸ್‌ನ ಮಹದೇವನಗೌಡರು ಎಂ. ಪಾಟೀಲ (ಮಾದೇಗೌಡ್ರು) ವಿರುದ್ಧ ಗೆಲುವು ಸಾಧಿಸಿದರು. ಅಂದು ಮತದಾರರ ಸಂಖ್ಯೆ 97,200.

1989ರ ಚುನಾವಣೆಯಲ್ಲಿ ಯಡಿಯೂರಪ್ಪ 36,589 ಮತ ಪಡೆದು ಗೆಲುವು ಸಾಧಿಸಿದರು. ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ(ಬಂಡಾಯ ಕಾಂಗ್ರೆಸ್) ನಗರದ ಮಹಾದೇವಪ್ಪ 34,315 ಮತ ಪಡೆದು, ಕಡಿಮೆ ಆಂತರದಲ್ಲಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸೋಲು ಅನುಭವಿಸಿದರು. ಕಾಂಗ್ರೆಸ್‌ನಿಂದ ಕೆ. ಶೇಖರಪ್ಪ ಸ್ಪರ್ಧಿಸಿದ್ದರು.

1994ರ ಚುನಾವಣೆಯಲ್ಲೂ ಕೂಡ ಬಿ.ಎಸ್. ಯಡಿಯೂರಪ್ಪ 50,885 ಮತ ಪಡೆದು ಕಾಂಗ್ರೆಸ್‌ನ ನಗರದ ಮಹಾದೇವಪ್ಪ ವಿರುದ್ಧ ಗೆಲುವು ಸಾಧಿಸಿದರು. ಎಸ್. ಪೂರ‌್ಯಾನಾಯ್ಕ ಕೂಡ ಸ್ಪರ್ಧಿಸಿದ್ದರು.

ಸತತ ಗೆಲುವಿನ ಮಾಲೆ ಧರಿಸಿ ಸೋಲಿಲ್ಲದ ಸರದಾರ ಆಗಿದ್ದ, ಬಿ.ಎಸ್. ಯಡಿಯೂರಪ್ಪ ಗೆಲುವಿನ ಓಟಕ್ಕೆ 1999ರಲ್ಲಿ ನಡೆದ ಚುನಾವಣೆ ಕಡಿವಾಣ ಹಾಕಿತು. ಸತತ ನಾಲ್ಕು ಬಾರಿ ವಿಧಾನಸಭೆ ಪ್ರವೇಶಿಸಿದ ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿ ಕಾಂಗ್ರೆಸ್‌ನ ಅಭ್ಯರ್ಥಿ ವಕೀಲ ಬಿ.ಎನ್. ಮಹಾಲಿಂಗಪ್ಪ ವಿರುದ್ಧ 7561 ಮತ ಅಂತರದಿಂದ ಸೋಲು ಅನುಭವಿಸಿದರು. ಬಿ.ಎನ್. ಮಹಾಲಿಂಗಪ್ಪ ಅವರ ಗೆಲುವಿನ ಹಿಂದೆ ಮಾಜಿ ಮುಖ್ಯ ಮಂತ್ರಿ ಸಾರೇಕೊಪ್ಪ ಬಂಗಾರಪ್ಪ ತಂತ್ರಗಾರಿಕೆ ಕೆಲಸ ಮಾಡಿತ್ತು. ನಂತರ ಬಿ.ಎಸ್. ಯಡಿಯೂರಪ್ಪ ವಿಧಾನ ಪರಿಷತ್ತು ಸದಸ್ಯರಾದರು.

ತದ ನಂತರ ಸೋಲು ಅನುಭವಿಸಿದ್ದ ಬಿ.ಎಸ್. ಯಡಿಯೂರಪ್ಪ 2004 ಚುನಾವಣೆಯಲ್ಲಿ 64,972 ಮತ ಪಡೆದು ಕಾಂಗ್ರೆಸ್‌ನ ಕೆ. ಶೇಖರಪ್ಪ ವಿರುದ್ಧ ಜಯ ಗಳಿಸಿದರು. ಈ ಚುನಾವಣೆಯಲ್ಲಿ ಬಿಜೆಪಿ 79 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. 2006 ರಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬಿದ್ದು, ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ  ಯಡಿಯೂರಪ್ಪ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು.

2008ರಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದರು. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಬಿ.ಎಸ್. ಯಡಿಯೂರಪ್ಪ 83,491 ಮತ ಪಡೆದು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪರ ವಿರುದ್ಧ 45,927 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದರು. ಈ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ 8 ಸ್ಪರ್ಧಿಗಳನ್ನು ಮಣಿಸಿದರು. ತಾಲ್ಲೂಕಿನ ಮತದಾರರ ಸಂಖ್ಯೆ 1,60,812.

ನಂತರ ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಸ್ತುತ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನೂತನ ಪಕ್ಷ ಕೆಜೆಪಿ ರಚನೆ ಮಾಡಿ ರಾಜ್ಯಾಧ್ಯಕ್ಷರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.