ADVERTISEMENT

ಮೂರರಿಂದ ಏಳು ದಿನದೊಳಗೆ ರೈತರಿಗೆ ಹಣ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 6:15 IST
Last Updated 4 ಡಿಸೆಂಬರ್ 2013, 6:15 IST

ಶಿವಮೊಗ್ಗ: ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಗೆ ಖರೀದಿಸಿದ ಮೊತ್ತವನ್ನು   ಮೂರರಿಂದ ಏಳು ದಿನದ ಒಳಗಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಜಿಲ್ಲಾ ಕಾರ್ಯಪಡೆ‌ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದರು.

ರೈತರ ಅನುಕೂಲಕ್ಕಾಗಿಯೇ ಸರ್ಕಾರ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿಸುವ ಯೋಜನೆ ರೂಪಿಸಿದ್ದು, ರೈತರು ಮಧ್ಯವರ್ತಿಗಳ ವಂಚನೆಗೆ ಒಳಗಾಗದೆ ನೇರವಾಗಿ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿ 3 ರಿಂದ 7ದಿನದ ಒಳಗಾಗಿ ಖರೀದಿ ಮೊತ್ತ ಪಡೆಯಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 11 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಮೆಕ್ಕೆಜೋಳ ಪ್ರತಿ ಕ್ವಿಂಟಲ್‌ಗೆ ₨ 1,310- ಹಾಗೂ ಭತ್ತ ಪ್ರತಿ ಕ್ವಿಂಟಲ್‌ಗೆ ₨ 1,600- ದರದಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಖರೀದಿಸಿದ ಧಾನ್ಯಗಳ ಶೇಖರಣೆ ದೃಷ್ಟಿಯಿಂದ ಧಾನ್ಯದ ಗುಣಮಟ್ಟದ ಪರೀಕ್ಷೆ ಹಾಗೂ ಸಂಬಂಧಿಸಿದ ರೈತರ ದಾಖಲಾತಿಗಳನ್ನು ಕಡ್ಡಾಯ ಗೊಳಿಸಲಾಗಿದೆ. ಅದರಂತೆ ದೃಢೀಕರಿಸಿದ ತಮ್ಮ ಮಾದರಿ ಧಾನ್ಯ ಹಾಗೂ ದಾಖಲೆಗಳೊಂದಿಗೆ ಖರೀದಿ ಕೇಂದ್ರಗಳಲ್ಲಿ ನೀಡುವ ಕೂಪನ್ ನಲ್ಲಿ ತಿಳಿಸಿದ ದಿನಾಂಕದಂದು ತಮ್ಮ ಧಾನ್ಯಗಳನ್ನು ಖರೀದಿಗೆ ತರಬಹುದು ಎಂದರು.

ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳ ಆರಂಭವಾಗಿರುವ ಬಗ್ಗೆ ವ್ಯಾಪಕ ಮಾಹಿತಿ ನೀಡಲಾಗಿದೆ ಹಾಗೂ ಖಾಸಗಿ ವರ್ತಕರಿಗಿಂತ ಹೆಚ್ಚು ಬೆಲೆ ಯನ್ನು ಸರ್ಕಾರ ನಿಗದಿಗೊಳಿಸಿದ್ದು, ರೈತರು ಮಧ್ಯವರ್ತಿಗಳ ವಂಚನೆಗೆ ಒಳಗಾಗದೆ ಯೋಜನೆಯ ಉಪಯೋಗ ಪಡೆಯಬೇಕು. ಖರೀದಿ ಕೇಂದ್ರಗಳಲ್ಲಿ ರೈತರಿಗೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೆ ಖರೀದಿ ಮೊತ್ತವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಎಲ್ಲೆಲ್ಲಿ ಖರೀದಿ ಕೇಂದ್ರ?
ಶಿವಮೊಗ್ಗ ಜಿಲ್ಲೆಯ 11 ಎಪಿಎಂಸಿ ಪ್ರಾಂಗಣಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಆನವಟ್ಟಿ, ರಿಪ್ಪನ್ ಪೇಟೆ, ಸಾಗರ, ಆನಂದಪುರ, ತೀರ್ಥಹಳ್ಳಿ ಹಾಗೂ ಹೊಸನಗರ ಎಪಿಎಂಸಿ ಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಭತ್ತ ಹಾಗೂ ಮೆಕ್ಕೆಜೋಳವನ್ನು ಸರ್ಕಾರ ನಿಗದಿಗೊಳಿಸಿದ ಬೆಂಬಲ ಬೆಲೆಗೆ ಕರ್ನಾಟಕ ಉಗ್ರಾಣ ನಿಗಮದಿಂದ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.

ರೈತರು ತರಬೇಕಾದ ದಾಖಲಾತಿ
ರೈತರು ತಮ್ಮ ಉತ್ಪನ್ನಗಳನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಕೆಲವು ದೃಢೀಕೃತ ದಾಖಲಾತಿಗಳನ್ನು ಹಾಗೂ ಮಾದರಿ ಧಾನ್ಯದ ಗುಣಮಟ್ಟವನ್ನು ಪರೀಕ್ಷೆ ಮಾಡಿಸಬೇಕಿದೆ ಎಂದರು.

ಅದರಂತೆ  ತಹಶಿೀಲ್ದಾರ್ ಅಥವಾ ಉಪತಹಶೀಲ್ದಾರ್ ದೃಢೀಕರಿಸಿದ ಕಂಪ್ಯೂಟರೀಕೃತ ಪಹಣಿ, ರೈತರ ಹೆಸರು ಮತ್ತು ಬೆಳೆದ ಉತ್ಪನ್ನದ ಹೆಸರು, ಪ್ರಮಾಣ ನಮೂದಿಸಿದ ಕೂಪನ್‌ ಅನ್ನು ತಹಶೀಲ್ದಾರ್, ಉಪತಹಶೀಲ್ದಾರ್ ಅಥವಾ ಕಂದಾಯ ಅಧಿಕಾರಿಗಳಿಂದ ದೃಢೀಕರಿಸಿರಬೇಕು. ಕಂದಾಯ ಅಧಿಕಾರಿಗಳಿಂದ ಬೆಳೆ ದೃಢೀಕರಣ ಪತ್ರ, ರಾಷ್ಟ್ರೀಕೃತ ಬ್ಯಾಂಕ್‌ನ ಪಾಸ್ ಪುಸ್ತಕದ ಜೆರಾಕ್ಸ್, ರದ್ದುಪಡಿಸಿದ ಒಂದು ಚೆಕ್‌ ಸ್ಲಿಪ್‌ ತರಬೇಕಿದೆ ಎಂದು ಮಾಹಿತಿ ನೀಡಿದರು.

ರೈತರಿಗೆ ವಿನಾಯ್ತಿ
ರೈತರು ಖರೀದಿ ಕೇಂದ್ರಗಳಲ್ಲಿ ತಮ್ಮ ಧಾನ್ಯಗಳನ್ನು ಸುಲಭವಾಗಿ ಬೆಂಬಲ ಬೆಲೆಗೆ ಮಾರಾಟ ಮಾಡಬೇಕೆಂಬ ಉದ್ದೇಶದಿಂದ ರೈತರ ಅನುಕೂಲಕ್ಕಾಗಿ ಈ ಹಿಂದೆ ನಿಗದಿಗೊಳಿಸಿದ್ದ 50ಕೆ.ಜಿ ಚೀಲದಲ್ಲಿ ತರಬೇಕೆಂಬ, ಗ್ರೇಡ್ ‘ಎ’ ಭತ್ತವನ್ನು ಮಾತ್ರ ಖರೀದಿಸಬೇಕೆಂಬ ಹಾಗೂ ಗರಿಷ್ಠ 25ಕ್ವಿಂಟಾಲ್ ಖರೀದಿಸುವ ಮಿತಿಯಿಂದ ವಿನಾಯ್ತಿ ನೀಡಲಾಗಿದೆ ಎಂದರು.

ರೈತರು ತಮ್ಮ ಅನುಕೂಲಕ್ಕೆ ತಕ್ಕಂತೆ 50, 75 ಹಾಗೂ 100ಕೆ.ಜಿ.ವರೆಗಿನ ಚೀಲದಲ್ಲಿ ಧಾನ್ಯವನ್ನು ಖರೀದಿ ಕೇಂದ್ರಗಳಿಗೆ ತರಲು ಅವಕಾಶ ಕಲ್ಪಿಸಲಾಗಿದೆ.  ಭತ್ತದ ಗ್ರೇಡ್ ಎ ಬದಲಾಗಿ ಸಾಮಾನ್ಯ ಭತ್ತಕ್ಕೂ ಪ್ರತಿ ಕ್ವಿಂಟಲ್‌ `1,600ಗೆ ಖರೀದಿಸಲು ಹಾಗೂ ಗರಿಷ್ಠ ಮಿತಿ 25ಕ್ವಿಂಟಲ್‌ಗಿಂತಲೂ ಹೆಚ್ಚು ಧಾನ್ಯ ಖರೀದಿಗೆ ಒಳಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಧರ್, ಕೃಷಿ ಉತ್ಪನ್ನ ಮಾರುಕಟ್ಟೆ ಉಪನಿರ್ದೇಶಕ ವಿನೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.