ADVERTISEMENT

ಮೂರು ತಿಂಗಳಿನಲ್ಲಿ 21 ವರದಕ್ಷಿಣೆ ಪ್ರಕರಣ ದಾಖಲು!

ವರದಕ್ಷಿಣೆ ಪ್ರಕರಣ: ಭದ್ರಾವತಿಯಲ್ಲಿ ಅತಿ ಹೆಚ್ಚು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 11:15 IST
Last Updated 1 ಆಗಸ್ಟ್ 2013, 11:15 IST

ಶಿವಮೊಗ್ಗ: ಕಳೆದ ಮೂರು ತಿಂಗಳಿನಲ್ಲಿ ಜಿಲ್ಲೆಯಲ್ಲಿ 21 ವರದಕ್ಷಿಣೆ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಅದರಲ್ಲಿ ಭದ್ರಾವತಿಯಲ್ಲಿ ಅತಿ ಹೆಚ್ಚು 14 ಪ್ರಕರಣಗಳು ದಾಖಲಾಗಿವೆ. ಕೌಟುಂಬಿಕ ಹಿಂಸೆ ಅಡಿ 104 ಪ್ರಕರಣಗಳು ಸಾಂತ್ವನ ಕೇಂದ್ರಗಳ ಮೂಲಕ ದಾಖಲಾಗಿವೆ.

-ಇದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ, ವರದಕ್ಷಿಣೆ ನಿಷೇಧ ಕಾಯ್ದೆ, ಸಾಂತ್ವನ ಯೋಜನೆ ಹಾಗೂ ಮದ್ಯ, ಮಾದಕವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತಮ್ಮ ತಿಳಿಸಿದ ಮಾಹಿತಿ.

ಏಪ್ರಿಲ್ 2013ರಿಂದ ಜೂನ್ 2013ರವರೆಗೆ ಜಿಲ್ಲೆಯಲ್ಲಿ ಒಟ್ಟು 21 ವರದಕ್ಷಿಣೆ ಪ್ರಕರಣಗಳು ಪೊಲೀಸ್ ಇಲಾಖೆಯಿಂದ ದಾಖಲಾಗಿವೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ 2005ರ ನಿಯಮ 2006ರಡಿಯಲ್ಲಿ ಸಾಂತ್ವನ ಕೇಂದ್ರಗಳ ಮೂಲಕ 104 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 9 ಪ್ರಕರಣಗಳನ್ನು ಮ್ಯೋಜಿಸ್ಟ್ರೇಟ್‌ಗೆ ಡಿಐಆರ್ ಸಲ್ಲಿಸಲಾಗಿದೆ ಹಾಗೂ 26 ಪ್ರಕರಣಗಳಲ್ಲಿ ಕಾನೂನು ಸಲಹೆ ಪಡೆಯಲಾಗಿದೆ. 57 ಪ್ರಕರಣಗಳಲ್ಲಿ ನ್ಯಾಯಾಧೀಶರು ವಿಚಾರಣೆ ನಡೆಸಿ 4 ಪ್ರಕರಣಗಳಲ್ಲಿ ಮಧ್ಯಂತರ ಆದೇಶ ಹಾಗೂ 2 ಪ್ರಕರಣಗಳಲ್ಲಿ ಅಂತಿಮ ಆದೇಶ ನೀಡಲಾಗಿದೆ. ಒಟ್ಟು 47 ಪ್ರಕರಣಗಳು ನ್ಯಾಯಾಲಯದ ಮುಂದೆ ಬಾಕಿ ಇವೆ ಎಂದು ಅವರು ಮಾಹಿತಿ ನೀಡಿದರು.

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಮತ್ತು ಸಾಗಣಿಗೆ ಒಳಗಾದ ಮಹಿಳೆಯರ ಮತ್ತು  ಮಕ್ಕಳ ರಕ್ಷಣೆ ಹಾಗೂ ಪುನರ್ ವಸತಿ ಕಲ್ಪಿಸುವ ಸಲುವಾಗಿ ಜಿಲ್ಲೆಯಲ್ಲಿ 260 ಕಾವಲು ಸಮಿತಿಗಳನ್ನು ರಚಿಸಲಾಗಿದ್ದು, ಈವರೆಗೆ 245 ಸಭೆಗಳನ್ನು ನಡೆಸಲಾಗಿದೆ. ಮದ್ಯ ಮತ್ತು ಮಾದಕ  ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಯೋಜನೆಯಡಿ ಶಿವಮೊಗ್ಗದ ಸುರಭಿ ಮಹಿಳಾ ಮಂಡಳಿ ಹಾಗೂ ಭದ್ರಾವತಿ ಆಶಾಕಿರಣ ಸಂಸ್ಥೆಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಕ್ರಮವಾಗಿ 110 ಹಾಗೂ 259 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾತನಾಡಿ, ಸಾಂತ್ವನ ಕೇಂದ್ರಗಳು ನೊಂದ ಮಹಿಳೆಯರಿಗೆ ಕೇವಲ ಸಮಾಧಾನಪಡಿಸುವ ಅಥವಾ ರಾಜಿ ಮಾಡುವ ಜತೆಗೆ ಕಾನೂನಿನ ರಕ್ಷಣೆ ಬಗ್ಗೆ ತಿಳಿಸಿಕೊಡಬೇಕು. ಪರಿಣಾಮ ಕೌಟುಂಬಿಕ ದೌರ್ಜನ್ಯಗಳು ಮರುಕಳಿಸುವುದನ್ನು ತಡೆಯಬಹುದು ಎಂದರು.

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ವಿಷಯವಾಗಿ ಜವಾಬ್ದಾರಿ ಹೊಂದಿದ ಸ್ವಯಂಸೇವಾ ಸಂಸ್ಥೆಯು ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ 90 ದಿನಗಳಿಗೆ ಹೆಚ್ಚು ಗೈರು ಹಾಜರಾದ ಮಕ್ಕಳ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದು ಸಮಿತಿಗೆ ಸಲ್ಲಿಸಬೇಕು. ನಂತರ ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಮಗು ನಾಪತ್ತೆ ಅಥವಾ ಇನ್ನಿತರ ವಿವರಗಳನ್ನು ಕ್ರೋಡೀಕರಿಸಿ ಎರಡು ತಿಂಗಳಲ್ಲಿ ಸಮಿತಿ ಸಲ್ಲಿಸುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್, ಸಾಂತ್ವನ ಕೇಂದ್ರಗಳ ಮುಖ್ಯಸ್ಥರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.