ADVERTISEMENT

ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 5:55 IST
Last Updated 22 ಅಕ್ಟೋಬರ್ 2011, 5:55 IST

ಶಿವಮೊಗ್ಗ:  ಜಿಲ್ಲಾ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ,  ಮೆಗ್ಗಾನ್ ಬೋಧನಾ ಆಸ್ಪತ್ರೆಯಾಗಿ ಮಾರ್ಪಟ್ಟ ಒಂದು ವರ್ಷದಿಂದ ಆಸ್ಪತ್ರೆಯ ಚಿತ್ರಣವೇ ಬದಲಾಗಿದೆ. ಹೊಸ ಆಡಳಿತ ವ್ಯವಸ್ಥೆಯಿಂದ ದಿನನಿತ್ಯ ದಾಖಲಾಗುವ ರೋಗಿಗಳ ಸಂಖ್ಯೆ ಗಣನೀಯ ಇಳಿಮುಖವಾಗಿ, ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡಿದ್ದಾರೆ ಎನ್ನುವುದು ಅಂಕಿ-ಅಂಶಗಳಿಂದ ದೃಢವಾಗಿದೆ.

ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಾಗಿದ್ದ ಸಂದರ್ಭ ರೋಗಿಗಳಿಗೆ ಉಚಿತ ಚಿಕಿತ್ಸೆ ಮಾಡಲಾಗುತ್ತಿದ್ದು, ಈಗ ಜಿಲ್ಲಾ ಆಸ್ಪತ್ರೆ ಕೇಂದ್ರವನ್ನು ಶಿಕಾರಿಪುರಕ್ಕೆ ವರ್ಗಾಯಿಸಿರುವುದರಿಂದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯದೇ ಬಡ, ಮಧ್ಯಮ ವರ್ಗದ ರೋಗಿಗಳು ಪರದಾಡುವಂತಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಅಲ್ಲದೇ, ಶಿಕಾರಿಪುರಕ್ಕೆ ಜಿಲ್ಲಾ ಆಸ್ಪತ್ರೆ ವರ್ಗಾವಣೆ ಆಗಿದ್ದರಿಂದ ಶಿವಮೊಗ್ಗ ,ಹೊಸನಗರ, ತೀರ್ಥಹಳ್ಳಿ, ಭದ್ರಾವತಿ ಜತೆಗೆ ಚಿಕ್ಕಮಗಳೂರಿನ ಕಡೂರು, ತರೀಕೆರೆಯ ರೋಗಿಗಳು ಶಿಕಾರಿಪುರಕ್ಕೆ ತೆರಳಿ ಚಿಕಿತ್ಸೆ ಪಡೆಯುವುದು ಸಾಧ್ಯವಾಗದೆ, ಇಲ್ಲೇ ಇರುವ ಖಾಸಗಿ ಆಸ್ಪತ್ರೆಗಳಿಗೆ ಇಲ್ಲಿಯೇ ಶುಲ್ಕ ಪಾವತಿಸಿ ಚಿಕಿತ್ಸೆ ಪಡೆಯುವಂತಾಗಿದೆ.

ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಾಗಿದ್ದ ಸಂದರ್ಭ ಇತರೆ ರೋಗಿಗಳನ್ನು ಹೊರತುಪಡಿಸಿ ಹೆರಿಗೆ ರೋಗಿಗಳೇ ತಿಂಗಳಿಗೆ ಸುಮಾರು 900ರಿಂದ 1000 ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಆದರೆ, ಜಿಲ್ಲಾ ಆಸ್ಪತ್ರೆ ಶಿಕಾರಿಪುರಕ್ಕೆ ವರ್ಗಾವಣೆ ಆದ ಮೇಲೆ  400ರಿಂದ 500 ಬಂದರೆ ಹೆಚ್ಚು ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

ಮೆಗ್ಗಾನ್ ಆಸ್ಪತ್ರೆಯ ಬಹುತೇಕ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಿನದ ಬಹುಪಾಲು ಸಮಯ ಅಲ್ಲಿಯೇ ಕಳೆಯುತ್ತ್ದ್ದಿದು, ಇನ್ನೂ ಕೆಲ ವೈದ್ಯರು ಖಾಸಗಿ ಆಸ್ಪತ್ರೆಗೆ ಹೆಚ್ಚು ಆಸಕ್ತಿ ತೋರಿ, ಮೆಗ್ಗಾನ್ ಆಸ್ಪತ್ರೆ ತೊರೆದಿದ್ದಾರೆ. ಮೆಗ್ಗಾನ್‌ನಲ್ಲಿ ಕೆಲ ತಿಂಗಳ ಹಿಂದೆ 200 ಸಂಖ್ಯೆಯಲ್ಲಿದ್ದ ವೈದ್ಯರು ಈಗ ಕೇವಲ 110 ವೈದ್ಯರು ಮಾತ್ರವೇ ಇರುವುದು ಇದಕ್ಕೆ ಸಾಕ್ಷಿಯಾಗಿದೆ.

ಅಲ್ಲದೇ, ಈಗ ಶುಲ್ಕ ಪಾವತಿಸಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಹ ದೊರೆಯುವುದಿಲ್ಲ. ಬೆಳಿಗ್ಗೆ 9ಕ್ಕೆ ಬಂದು ಆಸ್ಪತ್ರೆಯಲ್ಲಿ ಕುಳಿತರೂ ವೈದ್ಯರು ಮಧ್ಯಾಹ್ನ 12ಗಂಟೆಗೋ 2ಗಂಟೆಗೋ ಬರುತ್ತಾರೆ. ಒಮ್ಮಮ್ಮೆ ಬರುವುದೇ ಇಲ್ಲ. ಹಾಗಾಗಿ ಹೆಚ್ಚು ಹಣ ನೀಡಿಯಾದರೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಆರೋಪಿಸುತ್ತಾರೆ ಚಿಕಿತ್ಸೆಗೆ ಬಂದ ರೋಗಿಗಳು.

ಕೆಲ ತಿಂಗಳ ಹಿಂದೆ ವೈದ್ಯಕೀಯ ಸಚಿವ ಎಸ್.ಎ. ರಾಮದಾಸ್, ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಾಗ ಸುಮಾರು 80 ವೈದ್ಯರು ಆಸ್ಪತ್ರೆಗೆ ಹಾಜರಾಗದೇ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದನ್ನು ಗಮನಿಸಿ ಅಂಥ ವೈದ್ಯರ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.