ADVERTISEMENT

ಮ್ಯಾನ್‌ಹೋಲ್ಗೆ ಬಿದ್ದು ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 10:15 IST
Last Updated 14 ಜೂನ್ 2011, 10:15 IST
ಮ್ಯಾನ್‌ಹೋಲ್ಗೆ ಬಿದ್ದು ಕಾರ್ಮಿಕ ಸಾವು
ಮ್ಯಾನ್‌ಹೋಲ್ಗೆ ಬಿದ್ದು ಕಾರ್ಮಿಕ ಸಾವು   

ಭದ್ರಾವತಿ: ಸ್ಯಾನಿಟರಿ ಸ್ವಚ್ಛತೆಗಾಗಿ ಮ್ಯಾನ್‌ಹೋಲ್ ತೆಗೆದು ಕೆಲಸ ಮಾಡಲು ಮುಂದಾದ ಗುತ್ತಿಗೆ ಕಾರ್ಮಿಕ ಆಕಸ್ಮಿಕವಾಗಿ ಅದರಲ್ಲಿ ಬಿದ್ದು ಸಾವು ಕಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ.

ವಿಐಎಸ್‌ಎಲ್ ನಗರಾಡಳಿತ ಇಲಾಖೆ ಗುತ್ತಿಗೆ ಕಾರ್ಮಿಕ ಹೊಸಬುಳ್ಳಾಪುರ ವಾಸಿ ಲಕ್ಷ್ಮಣ (48)ಸಾವು ಕಂಡು ದುರ್ದೈವಿ. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ಆಗಮಿಸಿ ಶವ ತೆಗೆಯುವಲ್ಲಿ ಸಹಕರಿಸಿದ್ದಾರೆ.

ಘಟನೆ ವಿವರ: ಇಲ್ಲಿನ ಹುತ್ತಾಕಾಲೊನಿ ಬಳಿ ಕಲ್ಮಶದಿಂದ ತುಂಬಿದ್ದ ಮ್ಯಾನ್‌ಹೋಲ್ ತೆಗೆದು ಸ್ವಚ್ಛತೆ ಮಾಡುವ ಸಲುವಾಗಿ ವಿಐಎಸ್‌ಎಲ್ ನಗರಾಡಳಿತ ಇಲಾಖೆ ತನ್ನ ಗುತ್ತಿಗೆ ಸಿಬ್ಬಂದಿಯನ್ನು ಸೋಮವಾರ ಬೆಳಿಗ್ಗೆ ಕಳುಹಿಸಿತ್ತು.

ಲಕ್ಷ್ಮಣ ಮ್ಯಾನ್‌ಹೋಲ್ ಮುಚ್ಚಳ ತೆಗೆದು ಬಗ್ಗಿ ನೋಡುವ ಭರದಲ್ಲಿ ಆಕಸ್ಮಿಕವಾಗಿ ಅದರಲ್ಲಿ ಬಿದ್ದು ತನ್ನ ಜೀವವನ್ನು ಕಳೆದುಕೊಂಡಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ನಗರಾಡಳಿತ ಇಲಾಖೆ ಅಧಿಕಾರಿ ಸಿಬ್ಬಂದಿ, ನಾಗರಿಕರು ಸ್ಥಳಕ್ಕೆ ಆಗಮಿಸಿದರು.

ಪ್ರತಿಭಟನೆ: ಘಟನೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮೃತರ ಕುಟುಂಬದ ಸದಸ್ಯನಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಇದಕ್ಕೆ ಒಪ್ಪಿಗೆ ನೀಡಿರುವ ವಿಐಎಸ್‌ಎಲ್ ಅಧಿಕಾರಿ ವರ್ಗ, ಇನ್ನಿತರ ಕಾನೂನು ಭಾಗದ ಸವಲತ್ತು ಕೊಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಸತ್ಯ, ಚಿನ್ನಯ್ಯ, ಈಶ್ವರಪ್ಪ, ಪಳನಿರಾಜ್, ಮಣಿ ಸೇರಿದಂತೆ ಹಲವರು ಸ್ಥಳದಲ್ಲಿ ಹಾಜರಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.