ADVERTISEMENT

ಯುವಕನ ಸಂಶಯಾಸ್ಪದ ಸಾವು:ಐವರು ಪೊಲೀಸರ ಅಮಾನತು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 10:50 IST
Last Updated 25 ಮಾರ್ಚ್ 2012, 10:50 IST

ಶಿವಮೊಗ್ಗ: ಕಳವು ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಯಲ್ಲಿದ್ದ ಯುವಕನೊಬ್ಬ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.ಯುವಕನನ್ನು ಇರ್ಫಾನ್ (27) ಎಂದು ಗುರುತಿಸಲಾಗಿದೆ. ಕಾರ್ಕ್ಲ್‌ಪೇಟೆ ಸಮೀಪದ ಆಜಾದ್‌ನಗರದ ನಿವಾಸಿಯಾಗಿದ್ದು, ಬಟ್ಟೆ ವ್ಯಾಪಾರ ಮಾಡುತ್ತಿದ್ದ.

ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಈ ಯುವಕನನ್ನು ಶುಕ್ರವಾರ ಕೋಟೆ ಠಾಣೆ ಪೊಲೀಸರು ವಿಚಾರಣೆಗಾಗಿ ಕರೆತಂದಿದ್ದರು. ಈ ವೇಳೆ ಅಸ್ವಸ್ಥನಾದ ಈತನನ್ನು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲು ಕೊಂಡೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಮೃತ ಯುವಕನ ತಂದೆ ವಜೀರ್‌ಸಾಬ್ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಮಗನ ಸಾವಿನ ಬಗ್ಗೆ ಸಂಶಯವಿದ್ದು, ಸೂಕ್ತ ತನಿಖೆ ನಡೆಸುವಂತೆ  ತಿಳಿಸಿದ್ದಾರೆ.

ಅಮಾನತು: ಈ ಮಧ್ಯೆ ಆರೋಪಿಯ ಸಂಶಯಾಸ್ಪದ ಸಾವಿನ ಘಟನೆಗೆ ಸಂಬಂಧಪಟ್ಟಂತೆ ಕರ್ತವ್ಯಲೋಪಕ್ಕಾಗಿ ಕೋಟೆಠಾಣೆ ಪಿಎಸ್‌ಐ ಸೇರಿದಂತೆ ಐವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್‌ಗುಪ್ತ ಅಮಾನತುಗೊಳಿಸಿದ್ದಾರೆ.

ಕೋಟೆಠಾಣೆ ಪಿಎಸ್‌ಐ ಸಂದೀಪ್‌ಕುಮಾರ್, ಕಾನ್‌ಸ್ಟೇಬಲ್‌ಗಳಾದ ಪಿ.ಎಸ್. ಬಸವರಾಜು, ಪ್ರವೀಣ್ ಪಾಟೇಲ್, ಇಮ್ರಾನ್ ಮತ್ತು ಕೃಷ್ಣಪ್ಪ ಅವರನ್ನು ಅಮಾನತುಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.