ADVERTISEMENT

ಯುವಕರಿಗೆ ಆದ್ಯತೆ ನೀಡದ ಪಕ್ಷಗಳು

ಪಕ್ಷೇತರ ಅಭ್ಯರ್ಥಿಯ ಬಹಿರಂಗ ಪ್ರಚಾರ ಸಭೆಯಲ್ಲಿ ಹೈಕೋರ್ಟ್‌ ವಕೀಲ ಅನಂತನಾಯ್ಕ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 13:52 IST
Last Updated 6 ಮೇ 2018, 13:52 IST

ಶಿಕಾರಿಪುರ: ‘ರಾಜಕೀಯ ಕ್ಷೇತ್ರದಲ್ಲಿ ಯುವಕರಿಗೆ ಆದ್ಯತೆ ನೀಡುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ’ ಎಂದು ಬೆಂಗಳೂರು ಹೈಕೋರ್ಟ್‌ ವಕೀಲ ಅನಂತನಾಯ್ಕ ಟೀಕಿಸಿದರು.

ಪಟ್ಟಣದ ಹಳೇ ಸಂತೆ ಮೈದಾನದಲ್ಲಿ ಶನಿವಾರ ಪಕ್ಷೇತರ ಅಭ್ಯರ್ಥಿ ವಿನಯ್‌ ಕೆ.ಸಿ. ರಾಜಾವತ್‌ ಪರ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜಕೀಯ ಕ್ಷೇತ್ರದಲ್ಲಿ ಯುವಕರಿಗೆ ಆದ್ಯತೆ ದೊರೆಯಬೇಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಕ್ಕಳು ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೆಗೌಡ ಮಕ್ಕಳು ಮೊಮ್ಮಕ್ಕಳು ರಾತ್ರೊ ರಾತ್ರಿ ರಾಜಕೀಯ ನಾಯಕರಾಗುತ್ತಾರೆ. ಆದರೆ ಪೊಲೀಸ್‌ ಅಧಿಕಾರಿ ಮಗ ವಿನಯ್‌ ರಾಜಾವತ್‌ ಏಕೆ ನಾಯಕರಾಗಬಾರದು ಎಂದು ಪ್ರಶ್ನಿಸಿದ ಅವರು, ವಿನಯ್‌ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ತಮ್ಮ ಮಗನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡಿಸದ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದ ಅವರು, ರೈತನ ಮಗ ಎಂದು ಹೇಳುವ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಹಾವೇರಿಯಲ್ಲಿ ರೈತನ ಮೇಲೆ ಗುಂಡು ಹಾರಿಸಲು ಕಾರಣರಾದರು. ಚೆಕ್‌ ಮೂಲಕ ಹಣ ಪಡೆದು ಜೈಲಿಗೆ ಹೋಗಿ ತಾಲ್ಲೂಕಿನ ಜನರಿಗೆ ಅವಮಾನ ಮಾಡಿದರು ಎಂದು ಟೀಕಿಸಿದರು.

ಸಂವಿಧಾನ ವಿರೋಧಿ ಹೇಳಿಕೆ ನೀಡುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆಗೆ ಬುದ್ಧಿ ಹೇಳುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಯಡಿಯೂರಪ್ಪ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದರು.ಪಕ್ಷೇತರ ಅಭ್ಯರ್ಥಿ ವಿನಯ್‌ ಕೆ.ಸಿ. ರಾಜಾವತ್‌ ಮಾತನಾಡಿ, ‘ವಿದ್ಯಾರ್ಥಿ ಸಂಘಟನೆ ಅಧ್ಯಕ್ಷನಾಗಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ ಹಾಗೂ ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ್ದೇನೆ. 40 ವರ್ಷ ಆಡಳಿತ ನಡೆಸಿದರೂ ಜನಪ್ರತಿನಿಧಿಗಳು ತಾಲ್ಲೂಕಿನಲ್ಲಿ ಅಭಿವೃದ್ಧಿ ಮಾಡಿಲ್ಲ, ಹಲವು ಮೂಲಭೂತ ಸೌಲಭ್ಯಗಳ ಕೊರತೆ ಗ್ರಾಮಗಳಲ್ಲಿವೆ. ಸಮಸ್ಯೆ ಬಗೆಹರಿಸಲು ನನ್ನ ಉಂಗುರದ ಗುರುತಿಗೆ ಮತ ಹಾಕಿ ನನ್ನನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ರಾಜ್ಯ ತಾಂಡಾ ರಕ್ಷಣಾ ವೇದಿಕೆ ಅಧ್ಯಕ್ಷ ಲಿಂಗರಾಜನಾಯ್ಕ, ಕಾರ್ಯದರ್ಶಿ ಬಸವರಾಜ್‌ನಾಯ್ಕ, ವೆಂಕಟೇಶನಾಯ್ಕ, ಮುಖಂಡರಾದ ವಿಜಯ್‌ಹಿರೇಮಠ್‌, ಸಂಜಯ್‌, ಚಂದು ಬಂಜಾರ, ಕಿಶೋರ್‌, ಯು.ಸಿ. ರವಿ, ಮಂಜು, ಡಿ.ಆರ್‌. ಗೀರೀಶ್‌, ವೆಂಕಟೇಶನಾಯ್ಕ, ರಾಘವೇಂದ್ರ, ಮೈಕಲ್‌ ಉಪಸ್ಥಿತರಿದ್ದರು.

ಜನರನ್ನು ತಡೆದ ರಾಜಕೀಯ ಪಕ್ಷಗಳು: ಆರೋಪ

ಬಹಿರಂಗ ಸಭೆಗೆ 50ಸಾವಿರ ಜನರು ಪಾಲ್ಗೊಳ್ಳುತ್ತಾರೆ ಎಂದು ಪಕ್ಷೇತರ ಅಭ್ಯರ್ಥಿ ವಿನಯ್‌ ಕೆ.ಸಿ. ರಾಜಾವಾತ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ, ಸಭೆಯಲ್ಲಿ ಜನರಿಲ್ಲದೇ ಖಾಲಿ ಖುರ್ಚಿಗಳು ಕಂಗೊಳಿಸುತ್ತಿದ್ದವು. ಇದಕ್ಕೆ ಭಾಷಣದಲ್ಲಿ ಪ್ರತಿಕ್ರಿಯಿಸಿದ ಅಭ್ಯರ್ಥಿ ವಿನಯ್‌ ರಾಜಾವತ್ ನನ್ನ ಸಭೆಗೆ ಜನರು ಬಾರದಂತೆ ರಾಜಕೀಯ ಪಕ್ಷದ ಮುಖಂಡರು ತಡೆದಿದ್ದಾರೆ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.