ADVERTISEMENT

ರಂಗಾಯಣ ನಾಟಕೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 6:35 IST
Last Updated 7 ಜೂನ್ 2011, 6:35 IST

ಶಿವಮೊಗ್ಗ: ಇವತ್ತಿನ ಸಮಾಜದಲ್ಲಿನ ದೊಂಬರಾಟವನ್ನು ತೊಡೆದುಹಾಕುವ ಶಕ್ತಿ ರಂಗಭೂಮಿಗಿದ್ದು, ಈ ಕಲಾ ಪ್ರಕಾರವನ್ನು ಇನ್ನಷ್ಟು ಸಶಕ್ತವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ರಂಗಾಯಣ ಹಮ್ಮಿಕೊಂಡಿರುವ ಮೂರು ದಿನಗಳ ನಾಟಕೋತ್ಸವಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.


ಸಮಾಜದಲ್ಲಿ ಸಾಹಿತ್ಯ, ಸಂಗೀತ, ರಂಗಭೂಮಿಯ ಅಭಿರುಚಿ ಹೆಚ್ಚು ಮಾಡುತ್ತಾ ಹೋದರೆ ಸಾಧ್ಯವಾದಷ್ಟರ ಮಟ್ಟಿಗೆ ಈ ದೊಂಬರಾಟಗಳು ನಿಲ್ಲುತ್ತವೆ ಎಂದರು.

ರಂಗಾಯಣ ಇನ್ನೇನು ಸ್ಥಾವರತ್ವ ಪಡೆಯುತ್ತೆಂಬ ಸನ್ನಿವೇಶದಲ್ಲಿ ಹೊಸ ನಿರ್ದೇಶಕ ಲಿಂಗದೇವರು ಹಳೆಮನೆ ಅವರ ಪ್ರವೇಶ ಆಯಿತು. ಈಗ ರಂಗಾಯಣ ಹಾಗಿಲ್ಲ. ಹೊಸ ರಂಗಶಾಲೆ ಸ್ಥಾಪಿಸಿ, ಹಳೇ ಬೇರು, ಹೊಸ ಚಿಗುರಿನಿಂದ ಹೊಸ ಸಾಧ್ಯತೆಗಳನ್ನು ಅಲ್ಲಿ ಸೃಷ್ಟಿಸಲು ಸಾಧ್ಯವಾಗಿದೆ ಎಂದರು.

ಮಾನಸಿಕ ತಜ್ಞ ಡಾ.ಅಶೋಕ್ ಪೈ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಬ್ಬ ನಟ, ಪ್ರೇಕ್ಷಕ, ವಿಮರ್ಶಕ ಇರುತ್ತಾನೆ. ಜೀವನ, ನಾಟಕ ಆಗಲು ಸಾಧ್ಯವಿಲ್ಲ. ನಾಟಕಕ್ಕೆ ನಿಗದಿತ ದೃಶ್ಯಗಳಿರುತ್ತವೆ. ಜೀವನ ಅನಿಶ್ಚಯವಾದದ್ದು ಎಂದರು.

ರಂಗಾಯಣ ಶಿವಮೊಗ್ಗಕ್ಕೆ ಬರುತ್ತಿರುವುದು ಸ್ವಾಗತಾರ್ಹ. ಇಲ್ಲಿ ಇನ್ನಷ್ಟು ರಂಗಚಟುವಟಿಕೆಗಳು ಬೆಳಯಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಪ್ರೊ.ಲಿಂಗದೇವರು ಹಳೆಮನೆ ಮಾತನಾಡಿ, ರಂಗಾಯಣದ ಶಾಖೆಗೆ ಶಿವಮೊಗ್ಗದಲ್ಲಿ ವ್ಯಕ್ತವಾಗುತ್ತಿರುವ ಅನುಮಾನ ಸಹಜವಾದದ್ದಲ್ಲ. ರಂಗಾಯಣದ ಜವಾಬ್ದಾರಿ ಕೇವಲ ರೆಪರ್ಟರಿ ನಡೆಸುವುದಿಲ್ಲ; ಬದಲಿಗೆ ಒಟ್ಟು ರಂಗಭೂಮಿಯ ವಿಸ್ತರಣೆಯ ಹಾಗೂ ರಂಗಭೂಮಿಯನ್ನು ಶ್ರೇಷ್ಠತೆಯ ದಾರಿಯಲ್ಲಿ ಮುಂದಕ್ಕೆ ತೆಗೆದುಕೊಂಡು ಬಹುದೊಡ್ಡ ಜವಾಬ್ದಾರಿ ಇದೆ ಎಂದು ನುಡಿದರು.

ಸುವರ್ಣ ಸಾಂಸ್ಕೃತಿಕ ಭವನ ರಂಗಾಯಣಕ್ಕೆ ಬೇಡ. ಸರ್ಕಾರ ನೀಡಿದರೆ ತಾತ್ಕಾಲಿಕವಾಗಿ ಬಳಸಿಕೊಂಡು, ಆ ಕಟ್ಟಡದ ಹತ್ತಿರ ಇರುವ ಮೂರು ಎಕರೆ ಜಾಗವನ್ನು ರಂಗಾಯಣಕ್ಕೆ ಸರ್ಕಾರ ನೀಡಬೇಕು ಎಂದು ಮನವಿ ಮಾಡಿದರು.

ರಂಗಾಯಣ ರಂಗಶಾಲೆಯ ಸಂಯೋಜಕ ಮಂಜುನಾಥ್ ಬೆಳಕೆರೆ ಸ್ವಾಗತಿಸಿದರು. ಕಾಂತೇಶ್ ಕದರಮಂಡಲಗಿ ವಂದಿಸಿದರು. ಹೊನ್ನಾಳಿ ಚಂದ್ರಶೇಖರ್ ಕಾರ್ಯಕ್ರಮ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT