ADVERTISEMENT

ರಸ್ತೆ ವಿಸ್ತರಣೆ; ನಿವಾಸಿಗಳ ವಿಭಿನ್ನ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 10:10 IST
Last Updated 20 ಅಕ್ಟೋಬರ್ 2011, 10:10 IST

ಸೊರಬ: ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಪ್ರಕ್ರಿಯೆಯ ಚಾಲನೆಗೆ ಉಪ ವಿಭಾಗಾಧಿಕಾರಿ ನ. 3ರ ದಿನಾಂಕ ನಿಗದಿಪಡಿಸಿ, ಪರಿಹಾರದ ಮೊತ್ತವನ್ನೂ ಘೋಷಿಸಿದ್ದು, ಅದರ ಬೆನ್ನಲ್ಲಿಯೇ ಮುಖ್ಯರಸ್ತೆ ನಿವಾಸಿಗಳಿಂದ ವಿವಿಧ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಮುಖ್ಯರಸ್ತೆ ನಿವಾಸಿಗಳ ಅನೇಕ ದಿನಗಳ ಗೊಂದಲಕ್ಕೆ ಈ ಬೆಳವಣಿಗೆ ತೆರೆ ಎಳೆದಿದ್ದರೂ, ಸದ್ಯಕ್ಕೆ ಮುಖ್ಯರಸ್ತೆಯ ಸುಮಾರು ಆರ್ಧಭಾಗವನ್ನು ಮಾತ್ರ ವಿಸ್ತರಣೆಗೆ ಒಳಪಡಿಸಿರುವುದು ಅಚ್ಚರಿ ಮೂಡಿಸಿದೆ.

ಇಡೀ ಮುಖ್ಯರಸ್ತೆಯನ್ನು ಏಕೆ ಒಳಪಡಿಸುತ್ತಿಲ್ಲ? ಮುಂದಿನ ಭಾಗವನ್ನು ಎಂದು ಆರಂಭಿಸುತ್ತಾರೆ? ತೀರ್ಮಾನದ ಹಿಂದೆ ನಿವಾಸಿಗಳನ್ನು ವಿಭಜಿಸಿ, ಸುಲಲಿತವಾಗಿ ಕೆಲಸ ಸಾಧಿಸಬಹುದು ಎಂಬ ಉಪಾಯ ಇದೆಯೇ? ಎಂಬುದು ಅನೇಕ ನಿವಾಸಿಗಳ ಪ್ರಶ್ನೆ ಆಗಿದೆ. ಎಲ್ಲಾ ಖಾತೆದಾರರಿಗೂ ಪೂರ್ಣ ಪ್ರಮಾಣದ ಪರಿಹಾರ ಕೊಡುವಷ್ಟು ಅನುದಾನದ ಕೊರತೆ ಇರುವುದರಿಂದ ಹಂತ ಹಂತವಾಗಿ ವಿಸ್ತರಣೆ ಕೈಗೊಳ್ಳಲಾಗುವುದು ಎಂಬ ಉತ್ತರದ ಹೊರತಾಗಿ ಬೇರಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ.

ವಿಸ್ತರಣೆಗೆ ನಿಗದಿಪಡಿಸಿರುವ ಅಳತೆ ಸಹ ಅನುಮಾನಕ್ಕೆ ಈಡು ಮಾಡಿದೆ. ಪ್ರಸ್ತುತ ಅಧಿಕಾರಿಗಳು ರಸ್ತೆಯ ಮಧ್ಯಭಾಗದಿಂದ ಎರಡೂ ಪಾರ್ಶ್ವಗಳಲ್ಲಿ ತಲಾ 30 ಅಡಿ ಎಂದು ತಿಳಿಸಿದ್ದಾರೆ. ಈ ಮೊದಲು ಕೆಲವರು ಪದೇ ಪದೇ ನಿವಾಸಿಗಳಿಗೆ ವಿಸ್ತರಣೆಯ ಭೂತ ಕಾಡುವುದು ಬೇಡ ಎಂಬ ಉದ್ದೇಶದಿಂದ 40 ಅಡಿ ನಿಗದಿಪಡಿಸಲು ಮನವಿ ಮಾಡಿದ್ದ ಮೇರೆಗೆ ಶಾಸಕ ಎಚ್. ಹಾಲಪ್ಪ ಅದನ್ನೇ ಅನುಮೋದಿಸಿದ್ದರು.

ಟೆಂಡರ್‌ನಲ್ಲಿ ಸಹ ಒಟ್ಟು 80 ಅಡಿ ಎಂದು ನಮೂದಾಗಿದೆ ಎಂದು ಕೆಲ ನಿವಾಸಿಗಳು ತಿಳಿಸಿದ್ದಾರೆ.
ಹಾಗಾದರೆ ಮೌಖಿಕವಾಗಿ 30 ಅಡಿ ಎಂದು ಹೇಳಿ ನಂತರ ಅದನ್ನು ಹೆಚ್ಚುವರಿಗೊಳಿಸುತ್ತಾರೆಯೇ? ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಬಹುಪಾಲು ನಿವಾಸಿಗಳು 40 ಅಡಿ ವಿಸ್ತರಣೆಯನ್ನು ಒಪ್ಪಿಕೊಳ್ಳುತ್ತಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಪರಿಹಾರಕ್ಕೆ ನಿಗದಿಪಡಿಸಿರುವ ದರ ನಿವಾಸಿಗಳ ಆಕ್ರೋಶಕ್ಕೆ ಕಾರಣ ಆಗಿದೆ. ಪ್ರತಿ ಚದರ ಅಡಿಗೆ ಕನಿಷ್ಠ 330ರಿಂದ ಗರಿಷ್ಠ 530ರವರೆಗೆ ನಿಗದಿಯಾಗಿದ್ದು, ತೀರ್ಥಹಳ್ಳಿಯಲ್ಲಿ ನೀಡಿದ ದರಕ್ಕಿಂತ ಬಹು ಕಮ್ಮಿಯಿದೆ. ತೀರ್ಥಹಳ್ಳಿಯಂತೆ ಸೊರಬ ಸಹ ತಾಲ್ಲೂಕು ಕೇಂದ್ರ ಅಲ್ಲವೇ? ಅಲ್ಲಿ ಪರಿಹಾರ ನೀಡಿದ ಸರ್ಕಾರವೇ ಇಲ್ಲಿಯೂ ನೀಡುವುದಲ್ಲವೇ? ಇಂದಿನ ಮಾರುಕಟ್ಟೆ ಬೆಲೆಗೆ ಇದು ಸಮಾನವಾಗಿದೆಯೇ? ಎಂದು ಪ್ರಶ್ನಿಸುವಂತೆ ಮಾಡಿದ್ದು, ಬೆಂಬಲಕ್ಕೆ ಬರಲು ಕ್ಷೇತ್ರದ ಶಾಸಕರತ್ತ ಬೆರಳು ತೋರಿಸುವಂತಾಗಿದೆ. ಎಸ್‌ಆರ್ ದರಕ್ಕನುಗುಣವಾಗಿ ದರ ನಿಗದಿ ಆಗಿದೆ ಎಂಬ ಉತ್ತರ ಬಂದಿದ್ದರೂ, ಹೊಸ ಕಟ್ಟಡದ ನಿರ್ಮಾಣ/ದುರಸ್ತಿ ಈ ಪರಿಹಾರದಲ್ಲಿ ಸಾಧ್ಯವೇ ಎಂಬುದು ಸ್ಥಳೀಯರ ಮರು ಪ್ರಶ್ನೆ ಆಗಿದೆ.

ಖಾಲಿ ನಿವೇಶನಗಳಿಗೆ ಪರಿಹಾರ ನೀಡುವುದಿಲ್ಲ ಎಂದು ಹೇಳಲಾಗಿದ್ದು, ಈ ವಿಚಾರ ನ್ಯಾಯ ಸಮ್ಮತವಾದುದಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಅನೇಕ ಅನಿವಾರ್ಯ ಕಾರಣಗಳಿಂದ ಅಂತಹ ಜಾಗದಲ್ಲಿ ಕಟ್ಟಡ ನಿರ್ಮಿಸಿಕೊಳ್ಳಲು ಸಾಧ್ಯವಾಗದೇ ಇರುವವರ ಪಾಡೇನು? ಎಂಬ ಸಮಸ್ಯೆ ಎದುರಾಗಿದೆ.
ನಮ್ಮ ಸಹಮತ ಇರುವುದು ರಸ್ತೆ ವಿಸ್ತರಣೆಗೆ ಮಾತ್ರ. ಆದರೆ, ಹಾಲಿ ನಿಗದಿಪಡಿಸಿರುವ ಪರಿಹಾರಕ್ಕಲ್ಲ ಎಂದು ನಿವಾಸಿಗಳು ರಾಗ ಎಳೆದಿದ್ದಾರೆ.
.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT