ADVERTISEMENT

ರಾತ್ರಿ ಸಂಚಾರಕ್ಕೆ ಹೆದರುವ ಜನರು

ಮೇಲ್ಸೇತುವೆ ಎರಡೂ ಬದಿಯಲ್ಲಿ ವಿದ್ಯುತ್ ಕಂಬಗಳಿದ್ದರೂ ಬೆಳಗದ ದೀಪಗಳು

ಅರ್ಚನಾ ಎಂ.
Published 16 ಏಪ್ರಿಲ್ 2018, 11:21 IST
Last Updated 16 ಏಪ್ರಿಲ್ 2018, 11:21 IST
ಶಿವಮೊಗ್ಗ-ಹೊನ್ನಾಳಿ ರಸ್ತೆಯ ಮೇಲ್ಸೇತುವೆ.
ಶಿವಮೊಗ್ಗ-ಹೊನ್ನಾಳಿ ರಸ್ತೆಯ ಮೇಲ್ಸೇತುವೆ.   

ಶಿವಮೊಗ್ಗ: ಶಿವಮೊಗ್ಗ–ಹೊನ್ನಾಳಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಮೇಲ್ಸೇತುವೆಯಲ್ಲಿ ರಾತ್ರಿ ಸಮಯದಲ್ಲಿ ಸಂಚರಿಸಲು ವಾಹನ ಸವಾರರು, ಪಾದಚಾರಿಗಳು ಭಯಪಡುವ ಸ್ಥಿತಿ ಎದುರಾಗಿದೆ.

ಮೇಲ್ಸೇತುವೆ ನಿರ್ಮಾಣಕ್ಕೂ ಮೊದಲು ರೈಲು ಹಳಿಯನ್ನು ದಾಟಿ ಸಂಚರಿಸಬೇಕಿತ್ತು. ಪ್ರತಿ ಬಾರಿ ರೈಲುಗಳು ಬಂದು ಹೋಗುವಾಗ ಹೊನ್ನಾಳಿ–ಶಿವಮೊಗ್ಗ ರಸ್ತೆಯ ಗೇಟ್‌ ಹಾಕಲಾಗುತ್ತಿತ್ತು. ಬೆಳಿಗ್ಗೆ ಮತ್ತು ಸಂಜೆ ‌ಸಮಯದಲ್ಲಿ ಈ ರಸ್ತೆ ವಾಹನ‌ ದಟ್ಟಣೆಯಿಂದ ಕೂಡಿರುತ್ತಿತ್ತು. ರೈಲ್ವೆ ಗೇಟ್ ಹಾಕಿದರಂತೂ ವಾಹನ‌ ಸವಾರರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಪ್ರತಿದಿನ ಸಂಚರಿಸುವ ಶಾಲಾ ವಾಹನ, ನಗರ ಸಾರಿಗೆಗಳಲ್ಲಿ ಕೆಲಸಕ್ಕಾಗಿ ತೆರಳುವವರಿಗೆ ಗೇಟ್‌ ಹಾಕಿದರೆ ಇನ್ನೂ ತಡವಾಗುತ್ತಿತ್ತು. ಅನಿವಾರ್ಯವಾಗಿ ರೈಲು ಹೋಗುವವರೆಗೂ ಕಾಯಲೇಬೇಕಾಗಿತ್ತು.

ಈ ಸಮಸ್ಯೆಯಿಂದ ಬೇಸತ್ತ ಸಾರ್ವಜನಿಕರು ಇಲ್ಲೊಂದು ಮೇಲ್ಸೇತುವೆ ಆಗಲೇಬೇಕೆಂದು ಪ್ರತಿಭಟನೆಗಳನ್ನು ಮಾಡಿದ್ದರು. ಇದರ ಪರಿಣಾಮ ಮೇಲ್ಸೇತುವೆಯು ನಿರ್ಮಾಣವಾಯಿತು. ರಾತ್ರಿ ವೇಳೆ ರಸ್ತೆಯಲ್ಲಿ ವಾಹನಗಳು, ಸಾರ್ವಜನಿಕರು ಸುಗಮವಾಗಿ ಸಂಚರಿಸಲು ವಿದ್ಯುತ್‌ ಕಂಬಗಳನ್ನು ಅಳವಡಿಸಲಾಯಿತು. ಈಗ ಶಿವಮೊಗ್ಗ–ಹೊನ್ನಾಳಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡೆತಡೆ ಇಲ್ಲ. ಆದರೆ, ರಾತ್ರಿ ವೇಳೆ ಇಲ್ಲಿ ಸಂಚರಿಸಲು  ಸಾರ್ವಜನಿಕರು ಭಯ ಪಡುತ್ತಿದ್ದಾರೆ.

ADVERTISEMENT

ಮೇಲ್ಸೇತುವೆಯ ಎರಡೂ ಬದಿಗಳಲ್ಲಿ  ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಆದರೆ, ಅವುಗಳಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೇಲ್ಸೇತುವೆ ಹತ್ತುವಾಗ ಅಳವಡಿಸಿರುವ ಮೂರು–ನಾಲ್ಕು ವಿದ್ಯುತ್ ದೀಪಗಳು ಹೊತ್ತುತ್ತವೆ.  ನಂತರದ ಕಂಬಗಳಲ್ಲಿನ ವಿದ್ಯುತ್‌ ದೀಪಗಳು ಹೊತ್ತುವುದಿಲ್ಲ. ಇಡೀ ಸೇತುವೆ ಕತ್ತಲು ಆವರಿಸಿರುತ್ತದೆ. ಇದರಿಂದ ರಾತ್ರಿ 8 ಗಂಟೆ ನಂತರ ವಾಹನ ಸವಾರರು, ಪಾದಚಾರಿಗಳು ಕತ್ತಲಲ್ಲಿ ಹೋಗಲು ಭಯಪಡುತ್ತಾರೆ.

ಪಾದಚಾರಿ ರಸ್ತೆ ಇಲ್ಲ:  ಅರ್ಧ ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಿದ್ದರೂ ಅಲ್ಲಿ ಪಾದಚಾರಿ ರಸ್ತೆ ನಿರ್ಮಿಸಿಲ್ಲ. ರಸ್ತೆಗೆ ಹಾಕಿರುವ ಡಾಂಬರು ಹಾಳಾಗುತ್ತಿದೆ. ವಾಹನ ಸಂಚಾರ ಅಧಿಕವಿರುವ ಈ ರಸ್ತೆಯಲ್ಲಿ ಎರಡು ಕಡೆಯಿಂದಲೂ ವಾಹನಗಳು ವೇಗವಾಗಿ ಸಂಚರಿಸುತ್ತವೆ. ನಡೆದು ಹೋಗುವವರು ಈ ರಸ್ತೆಯಲ್ಲಿ ಹೋಗಲು ಹಿಂದೇಟು ಹಾಕುತ್ತಾರೆ. ಅವರಿಗೆ ಬದಲಿ ಮಾರ್ಗವೂ ಇಲ್ಲ.

ರಸ್ತೆಯಲ್ಲಿ ವಿಭಜಕ ಇಲ್ಲ: ಈ ಮೇಲ್ಸೇತುವೆಯಲ್ಲಿ ವಿಭಜಕ ಇಲ್ಲದ ಕಾರಣ ಅಪಘಾತಗಳಿಗೆ ಕಾರಣ ವಾಗಬಹುದು.ವಿದ್ಯುತ್ ದೀಪ ಇರದೇ ಹೋದರೆ ಅಪಘಾತ, ಕಳವುಗಳಂತಹ ದುಷ್ಕೃತ್ಯಗಳು ಹೆಚ್ಚಾಗಿ ಸಂಭವಿಸುತ್ತವೆ.

‘ಈ ಮೇಲ್ಸೇತುವೆಯಲ್ಲಿ ಅಳವಡಿಸಿರುವ ಕೆಲವು ವಿದ್ಯುತ್‌ ದೀಪಗಳು ಹೊತ್ತುವುದಿಲ್ಲ. ದ್ವಿಚಕ್ರ ವಾಹನದಲ್ಲಿ ರಾತ್ರಿ ಸಮಯ ಒಬ್ಬಳೇ ಹೋಗಲು  ಭಯವಾಗುತ್ತದೆ. ಮಹಿಳೆಯರು ಒಬ್ಬೊಬ್ಬರೇ ಇಲ್ಲಿ ಓಡಾಡಲು ಸಾಧ್ಯವಿಲ್ಲ. ಶೀಘ್ರ ವಿದ್ಯುತ್‌ ದೀಪ ಅಳವಡಿಸಿ ಸಾರ್ವಜನಿಕರು ನಿರ್ಭೀತಿಯಿಂದ ಸಂಚರಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂಬುದು ಉದ್ಯೋಗಸ್ಥ ಮಹಿಳೆ ಶಿಲ್ಪಾ ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.