ಸಾಗರ: ಇಲ್ಲಿನ ತಾಲ್ಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಆವಿನಹಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಉಪಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದೆ ಇರುವುದನ್ನು ಖಂಡಿಸಿ ರಿಪ್ಪನ್ ಪೇಟೆಯ ಸಾಮಾಜಿಕ ಕಾರ್ಯಕರ್ತ ಟಿ.ಆರ್. ಕೃಷ್ಣಪ್ಪ ಶನಿವಾರ ರಿಪ್ಪನ್‌ಪೇಟೆಯಿಂದ ಸಾಗರದವರೆಗೆ 34 ಕಿ.ಮೀ. ದೂರ ಸೈಕಲ್‌ನಲ್ಲಿ ಬಂದು ಪ್ರತಿಭಟನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶುಕ್ರವಾರ ನಾನು ಆವಿನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಇಲ್ಲಿಗೆ ಬಂದಿದ್ದೆ. ಆಗ ಚುನಾವಣಾ ಶಾಖೆಯಲ್ಲಿ ಆವಿನಹಳ್ಳಿ ಕ್ಷೇತ್ರ ಬಿಸಿಎಂ (ಎ) ಗೆ ಮೀಸಲಾಗಿದೆ ಎನ್ನುವ ಕುರಿತು ದಾಖಲೆ ಕೇಳಿದರೆ, ‘ಲಭ್ಯವಿಲ್ಲ’ ಎಂಬ ಉತ್ತರ ನೀಡಿದರು’ ಎಂದು ತಿಳಿಸಿದರು.
‘ಚುನಾವಣಾ ಶಾಖೆಯಲ್ಲಿ ಸಂಬಂಧಪಟ್ಟ ಮತದಾರರ ಪಟ್ಟಿಯೇ ಲಭ್ಯವಿಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಅಹಂಕಾರದಿಂದ ಉತ್ತರ ಕೊಡುತ್ತಾರೆ. ಮಾಹಿತಿ ಕೇಳಿ ಬರುವ ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಲಾಗುತ್ತಿಲ್ಲ’ ಎಂದು ದೂರಿದರು.
‘ನಾಮಪತ್ರದಲ್ಲಿ ಅಭ್ಯರ್ಥಿಗಳು ಹಾಗೂ ಸೂಚಕರು ತಮ್ಮ ಮನೆಯಲ್ಲಿ ಶೌಚಾಲಯ ಇರುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು ಎಂದಿದೆ. ಹಾಗಾದರೆ ಶೌಚಾಲಯವಿಲ್ಲದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಕ್ಕು ಇಲ್ಲವೇ’ ಎಂದು ಪ್ರಶ್ನಿಸಿದರು.
‘ಯಾವುದೇ ಗ್ರಾಮದ ಮನೆಯಲ್ಲಿ ಶೌಚಾಲಯ ಇಲ್ಲ ಎಂದರೆ ಅದಕ್ಕೆ ಸಂಬಂಧಪಟ್ಟ ಗ್ರಾಮದ ಆಡಳಿತವೇ ಹೊಣೆ. ಅದನ್ನು ಬಿಟ್ಟು ಶೌಚಾಲಯ ಇಲ್ಲ ಎನ್ನುವ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸುವುದು ಸರಿಯಲ್ಲ’ ಎಂದು
ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.