ADVERTISEMENT

ರಿಪ್ಪನ್‌ಪೇಟೆಗೆ ಬಂತು ಮಾವಿನ ಮಿಡಿ ವ್ಯಾಪಾರ

ಟಿ.ರಾಮಚಂದ್ರ ರಾವ್
Published 18 ಮಾರ್ಚ್ 2012, 6:55 IST
Last Updated 18 ಮಾರ್ಚ್ 2012, 6:55 IST

`ಮಾತುಬಲ್ಲವನಿಗೆ ಜಗಳವಿಲ್ಲ... ಊಟಬಲ್ಲವನಿಗೆ ರೋಗವಿಲ್ಲ~  ಇದು ನಾಣ್ಣುಡಿ. ಹಾಗಂತ ಊಟದ ರುಚಿ ಹೆಚ್ಚಿಸಲು ಊಟಕ್ಕೊಂದು ಉಪ್ಪಿನಕಾಯಿ ಆವಶ್ಯಕ. ಅದರಲ್ಲೂ ಅಪ್ಪೆಮಿಡಿ ಉಪ್ಪಿನಕಾಯಿ! ಜನವರಿ, ಫೆಬ್ರುವರಿಯಲ್ಲಿಯೇ ಪ್ರಾರಂಭವಾಗುವ ಮಿಡಿಯ ಸಗಟು ವ್ಯಾಪಾರದ ಲೆಕ್ಕಾಚಾರ ಅಂತೂ ಇಂತು ಯುಗಾದಿ ಎದುರಲ್ಲಿ ಪ್ರಾರಂಭವಾಗಿದೆ. ಉಪ್ಪಿನ ಕಾಯಿಗೆ ಹಲವು ಬಗೆಯ ತರಕಾರಿ ಬಳಕೆಯಾಗುವುದು ಸಹಜ. ಅದರೂ, ರುಚಿಯಲ್ಲಿ ಮಾವಿನ ಮಿಡಿಗೆ ಸರಿಗಟ್ಟಲು ಸಾಧ್ಯವಿಲ್ಲ.

ಈ ವರ್ಷ ಪ್ರಾರಂಭದಲ್ಲಿ ಮೋಡಕವಿದ ವಾತಾವರಣ ಅಲ್ಲದೇ ಅತಿಹೆಚ್ಚಿನ ಮಂಜು ಬಿದ್ದ ಕಾರಣ ಇಲ್ಲಿನ ಮಾಮರಗಳು ಚಿಗುರಿವೆ ಹೊರತು ಇಳುವರಿ ಕಂಡಿಲ್ಲ.  ಮಾವಿನ ಮಿಡಿಯ ಸುಗ್ಗಿ ಬಂತೆಂದರೆ ಈ ಊರಿನ ಹಲವರು ದೈನಂದಿನ ಉದ್ದಿಮೆಯೊಂದಿಗೆ ಮಾವಿನ ಮಿಡಿಯನ್ನು ಸಂಗ್ರಹಿಸುತ್ತಾರೆ. ಸಂಸ್ಕರಿಸಿ ಉಪ್ಪಿಗೆ ಹಾಕಿ ಚಟ್ಟಿಸಿದ ಮಿಡಿ ಮಾರಾಟದ ವ್ಯವಸ್ಥೆಯು ಇದೆ. ಹಸಿ ಅಪ್ಪೆ ಮಿಡಿಯೊಂದಿಗೆ -ಚಟ್ಟಿಸಿದ ಮಿಡಿಯನ್ನು ಆಸಕ್ತರು ಖರೀದಿಸುವುದು ವಾಡಿಕೆ.

ಮಾರ್ಚ್ ತಿಂಗಳ ಮಧ್ಯದಲ್ಲಿ ಪ್ರಾರಂಭವಾದ ಈ ವ್ಯಾಪಾರ ವಹಿವಾಟು ಮೇ ತಿಂಗಳ 15ರ ವರೆಗೆ ನಡೆಯುತ್ತದೆ. ಮಳೆ ಬಂದ ನಂತರ ಹಾಗೂ ಅಲಿಕಲ್ಲು ಮಳೆ ಬಿದ್ದರೆ ಮಾತ್ರ ಗ್ರಾಹಕರು ಮಿಡಿ ಖರೀದಿಯಿಂದ ಹಿಂದೆ ಸರಿಯುತ್ತಾರೆ.

ರಿಪ್ಪನ್‌ಪೇಟೆಯ ಅಪ್ಪೆ ಮಿಡಿಗೆ ಉತ್ತಮ ಧಾರಣೆ ಇರುವುದರಿಂದ ಚಿಕ್ಕಮಗಳೂರು, ಹಾಸನ, ಬೇಲೂರು ಹಾಗೂ ಸವಳಂಗ, ನ್ಯಾಮತಿ ಸುರಹೊನ್ನೆ ಕಡೆಗಳಿಂದ ಮಾವಿನ ಮಿಡಿ ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಅಪ್ಪೆಮಿಡಿ ಖರೀದಿಗೆ ರಿಪ್ಪನ್‌ಪೇಟೆ ಪ್ರಮುಖ ಮಾರುಕಟ್ಟೆಯಾದ ಕಾರಣ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಮಾವಿನಮಿಡಿ ಖರೀದಿಗೆ ಬರುತ್ತಾರೆ. ಅವರವರ ಅಭಿರುಚಿಗೆ ತಕ್ಕುದಾದ ಮಿಡಿ ದೊರಕುವುದರಿಂದ ಮಾವಿನ ಮಿಡಿ ಮಾರಾಟದ ಮಧ್ಯವರ್ತಿಗಳು ಗ್ರಾಹಕರಿಗೆ ಪೂರೈಕೆ ಮಾಡುತ್ತಾರೆ. ಈ ಬಾರಿ ಧಾರಣೆ ಏರುಮುಖ ಕಾಣುವ ಸಾಧ್ಯತೆ ಹೆಚ್ಚು.

ತರಹೇವಾರಿ ಮಿಡಿ
ಮಾವಿನ ಮಿಡಿಯಲ್ಲಿ ಹತ್ತು ಹಲವು ಜಾತಿಗಳಿದ್ದು, ಜೀರಿಗೆ ಮಿಡಿ, ಅಪ್ಪೆಮಿಡಿ, ಕರ್ಪೂರ ಮಿಡಿ, ಕರ್ಪೂರ ಅಪ್ಪೆ, ಹೊಳೆಸಾಲು ಅಪ್ಪೆ, ದುಂಡಪ್ಪೆ, ಇತ್ಯಾದಿಗಳು ಪ್ರಮುಖವಾದವುಗಳು. ಪಟ್ಟಣದ ಸುತ್ತಮುತ್ತ ಹರಿಯುವ ನದಿ, ಹೊಳೆತಟದಲ್ಲಿ ಇರುವ ಮಾವಿನ ಮರಗಳ ಸಣ್ಣಗಾತ್ರದ ಕಾಯಿಗಳನ್ನು ಕಿತ್ತುತಂದು ಹಸನುಗೊಳಿಸಿ ಉಪ್ಪಿನಲ್ಲಿ ಸಂಸ್ಕರಣೆ ಮಾಡಿ ತಯಾರಾದ ಉಪ್ಪಿನಕಾಯಿಗೆ ರುಚಿ ಹೆಚ್ಚು 3-4 ವರ್ಷ ಕಾಪಿಟ್ಟು ಉಪಯೋಗಿಸಿದರೂ ರುಚಿಯಲ್ಲಿ ವ್ಯತ್ಯಾಸವಿರುವುದಿಲ್ಲ. ಹೀಗಾಗಿ, ವಿದೇಶಗಳಿಗೂ ಇಲ್ಲಿನ ಅಪ್ಪೆ ಮಿಡಿ ಉಪ್ಪಿನ ಕಾಯಿ ರವಾನೆಯಾಗುವ ಕಾರಣ ಇಲ್ಲಿಯ ಈ ಮಾವಿನ ಮಿಡಿಗೆ ಬೇಡಿಕೆ ಹೆಚ್ಚು.

ತಾಜ ಅಪ್ಪೆಮಿಡಿ ಉಪ್ಪಿನಕಾಯಿ ಸವಿಯಲು ಒಮ್ಮೆ ರಿಪ್ಪನ್‌ಪೇಟೆಗೆ ಬನ್ನಿ. ಆದರೆ, ಈ ಬಾರಿ ಹೊಳೆ ಸಾಲಿನ ಫಸಲು ಇನ್ನು ಮಾರುಕಟ್ಟೆಗೆ ಬಂದಿಲ್ಲ. ಪರಸ್ಥಳದಿಂದ ಬಂದ ಮಿಡಿಗೆ ಸ್ಥಳೀಯ ಮಿಡಿ ಎಂದು ನಾಮಕರಣಗೊಂಡು ಮಾರಾಟವಾಗುತ್ತಿದೆ. ಮಾಲು ಪಕ್ಕ... ತೆಗಿರೊಕ್ಕ ಎಂಬಂತೆ ಮಿಡಿಯ ಗುಣಮಟ್ಟ ಹಾಗೂ ಗುಣಕ ಖಾತರಿ ಪಡಿಸಿಕೊಂಡು ವ್ಯಾಪಾರ ಮಾಡಿ ಮೋಸ ಹೋಗಬೇಡಿ!ಆದರೆ, ಮಿಡಿ ಧಾರಣೆ ಮಾತ್ರ ಖಚಿತವಾಗಿ ಹೇಳುವಂತಿಲ್ಲ.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.