ADVERTISEMENT

ರೈತರ ಸಾಲಮನ್ನಾ ಘೋಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 5:35 IST
Last Updated 24 ಜನವರಿ 2012, 5:35 IST

 ಸೊರಬ: ಅಸಮರ್ಪಕ ಬೆಂಬಲ ಬೆಲೆ, ಅವೈಜ್ಞಾನಿಕವಾಗಿ ಏರಿರುವ ರಸಗೊಬ್ಬರ ಬೆಲೆಯಿಂದ ರಾಜ್ಯದ ರೈತರು ಹೈರಾಣಾಗಿದ್ದಾರೆ. ಅವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸಾಲ ಮನ್ನಾ ಘೋಷಿಸಲಿ ಎಂದು ಯುವ ಜೆಡಿಎಸ್ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಆಗ್ರಹಿಸಿದರು.

ಭಾನುವಾರ ತಾಲ್ಲೂಕಿನ ಹಿರಿಯ ಮುಖಂಡರ ಮನೆಗಳಿಗೆ ಸೌಹಾರ್ದ ಭೇಟಿ ನೀಡಿದ ಅವರು, ರಾತ್ರಿ ಆನವಟ್ಟಿಯ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಿತೈಶಿ ವೀರಬಸಪ್ಪ ಅವರ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.


ಭಾಗ್ಯಜ್ಯೋತಿ ಸೌಲಭ್ಯ ಪಡೆದ ಬಡವರ ಮನೆಗಳಿಗೆ 5 ಸಾವಿರದವರೆಗೆ ಬಿಲ್‌ವಸೂಲಿ ಮಾಡಲಾಗುತ್ತಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಜನಪ್ರತಿನಿಧಿಗಳು ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇಂತಹ ಕೃತ್ಯ ಮುಂದುವರಿದಲ್ಲಿ ಆಂದೋಲನ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ಬಂಗಾರಪ್ಪ ಮೇಲೆ ಅಭಿಮಾನ ಹಾಗೂ ತಮ್ಮ ಮೇಲೆ ವಿಶ್ವಾಸ ಇರಿಸಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಹಾಗೂ ವರಿಷ್ಠರು ಉನ್ನತ ಸ್ಥಾನ ನೀಡಿದ್ದಾರೆ. ಇದರ ಜವಾಬ್ದಾರಿ ಅರಿತು ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ತಾವು ಮುಂದಾಗುವುದಾಗಿ  ತಿಳಿಸಿದರು.


ಇದೇ ತಿಂಗಳ 28ರಂದು ಹಳಿಯಾಲದಲ್ಲಿ ತಮ್ಮ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ. ರಾಜ್ಯಾದ್ಯಂತ ವಿವಿಧ ಪಕ್ಷಗಳಲ್ಲಿ ಇರುವ ಅನೇಕ ಮುಖಂಡರು ಜೆಡಿಎಸ್ ಸೇರಲಿದ್ದಾರೆ. ನಂತರ, ದಿನಕ್ಕೆ 2 ಜಿಲ್ಲೆಯಂತೆ, ಒಟ್ಟು 140 ತಾಲ್ಲೂಕುಗಳಲ್ಲಿ ಮಹಿಳಾ ಹಾಗೂ ಯುವ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಮಾರ್ಚ್ ವೇಳೆ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜೆಡಿಎಸ್ ಉತ್ತಮ ಸರ್ಕಾರ ನೀಡುವ ಭರವಸೆ ಜನತೆಯಲ್ಲಿದ್ದು, ಬಂಗಾರಪ್ಪ ಆದರ್ಶಗಳನ್ನು ರಾಜ್ಯಕ್ಕೆ ಪುನಃ ಕೊಡುಗೆ ನೀಡಲು ಆ ಪಕ್ಷಕ್ಕೆ ಮಾತ್ರ ಸಾಧ್ಯ ಎಂದ ಅವರು, ತಾವು ಶಾಸಕ ಆಗುವುದು ಎಷ್ಟುಮುಖ್ಯವೋ, ಎಚ್‌ಡಿಕೆ ಮುಖ್ಯಮಂತ್ರಿ ಆಗುವುದೂ ಅಷ್ಟೇ ಅಗತ್ಯ ಎಂದರು.

ತವನಂದಿಯಲ್ಲಿ ಬಂಗಾರಪ್ಪ ಸ್ಮರಣಾರ್ಥ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಭೇಟಿ ನೀಡಿ ಸಂಘಟಕರನ್ನು ಅಭಿನಂದಿಸಿದ ಅವರು, ಇಂತಹ ಶಿಬಿರಗಳಿಗೆ ತಮ್ಮ ಸಹಕಾರ ಸಂಪೂರ್ಣ ಇದೆ ಎಂದರು. ತಾಲ್ಲೂಕಿನೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದರು.

ಹೆಗ್ಗೋಡು ಗ್ರಾಮಕ್ಕೆ ಭೇಟಿ ನೀಡಿ ಈಚೆಗೆ ನಿಧನರಾದ ರೇವಣಪ್ಪಗೌಡ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಂಗಾರಪ್ಪ ಸಮಕಾಲೀನರಾದ ಶ್ರೀಕಂಠಗೌಡರ ಮನೆಗೆ ತೆರಳಿದ್ದರು. ಗ್ರಾ.ಪಂ. ಸದಸ್ಯ ಜೆ. ಚಂದ್ರಶೇಖರ್, ಕುಮ್ಮೂರು ವೀರಪ್ಪ, ಸಾಹುಕಾರ್ ಸೋಮಣ್ಣ, ಕೆ.ಪಿ. ನಟರಾಜ್, ಮಂಜಪ್ಪ, ಅನ್ವರ್‌ಭಾಷಾ, ಶೇಖರಪ್ಪ, ಇನ್ನೂ ಮೊದಲಾದವರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.