ADVERTISEMENT

ವಾರ ಕಳೆದರೂ ಖರೀದಿ ಇಲ್ಲ...

ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 6:16 IST
Last Updated 2 ಡಿಸೆಂಬರ್ 2013, 6:16 IST

ಭದ್ರಾವತಿ: ಇಲ್ಲಿನ ಎಪಿಎಂಸಿ ಆವರಣದಲ್ಲಿ ಭತ್ತ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭವಾಗಿ ವಾರ ಕಳೆದರೂ ಖರೀದಿ ಮಾತ್ರ ಶೂನ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಬೆಲೆ ಕುಸಿತದಿಂದ ಕಂಗಾಲಾಗಿದ್ದ ಅನ್ನದಾತನ ಪಾಲಿಗೆ ಒಂದಿಷ್ಟು ನೆರವು ರೂಪದಲ್ಲಿ ಜಿಲ್ಲಾಡಳಿತ ರಾಜ್ಯ ಉಗ್ರಾಣ ನಿಗಮ ಮೂಲಕ ನೇರವಾಗಿ ಖರೀದಿ ವ್ಯವಸ್ಥೆ ಆರಂಭಿಸಿ, ಪಹಣಿ ಕೃಷಿಕನ ಖಾತೆಗೆ ಹಣ ಜಮಾ ಮಾಡುವ ವ್ಯವಸ್ಥೆ ಜಾರಿ ಮಾಡಿದೆ.

ತಾಲ್ಲೂಕಿನಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ರೈತರು ಭತ್ತವನ್ನು ಮಾರಾಟ ಮಾಡಿ ಆಗಿದೆ. ಇನ್ನು ಮೆಕ್ಕೆಜೋಳ ಈ ಭಾಗದಲ್ಲಿ ಅಷ್ಟೇನೂ ಇಲ್ಲ ಎಂಬ ಸ್ಥಿತಿ ಇದ್ದರೂ, ಕೆಲವು ದಿನದಲ್ಲಿ ಒಂದಿಷ್ಟು ಖರೀದಿ ಪ್ರಯತ್ನ ಮಾಡಬಹುದು ಎಂಬ ಭರವಸೆ ಅಧಿಕಾರಿಗಳಿಂದ ವ್ಯಕ್ತವಾಗಿದೆ. 

ಈ ಭಾಗದ ರೈತರು ಹೆಚ್ಚಾಗಿ ಜ್ಯೋತಿ ಭತ್ತ ತಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, 1001, 1010 ಹಾಗೂ ಜಯ ಭತ್ತ ಇಳುವರಿ ಕಡಿಮೆ ಇದೆ. ಆದರೆ ಖರೀದಿ ಕೇಂದ್ರದಲ್ಲಿ ಜ್ಯೋತಿ ಹೊರತುಪಡಿಸಿ ಉಳಿಕೆ ಭತ್ತ ಖರೀದಿಗೆ ಅವಕಾಶ ಇರುವ ಕಾರಣ ಶೇ 30 ರಷ್ಟು ಕೃಷಿಕರು ಇದರ ಲಾಭದಿಂದ ಹೊರಗುಳಿಯುವ ಸ್ಥಿತಿ ಇದೆ.

ಕೇಂದ್ರದ ತೇವಾಂಶ ಕಂಡುಹಿಡಿಯುವ ಮಾಪಕ 17ತೇವಾಂಶ ಪ್ರಮಾಣದ ಭತ್ತ ಖರೀದಿಗೆ ಮಾತ್ರ ತನ್ನ ಒಪ್ಪಿಗೆ ನೀಡುತ್ತದೆ. ಇದರಿಂದಾಗಿ ಭತ್ತ ಮಾರಾಟಕ್ಕೆ ಬಂದ ಐದಾರು ರೈತರಲ್ಲಿ ಇಬ್ಬರ ಇಳುವರಿ ಮಾತ್ರ ಸ್ವೀಕಾರವಾಗಿದೆ ಎನ್ನುತ್ತಾರೆ ಗ್ರೇಡರ್ ರಾಮಪ್ಪ.
ಹಳೇ ಭತ್ತ, ತೇವಾಂಶ ಹೊಂದಿದ ಭತ್ತ, ಕಡಿಮೆ ತೇವಾಂಶ ಹೊಂದಿದ ಭತ್ತ ಖರೀದಿಗೆ ಕೇಂದ್ರದಲ್ಲಿ ಅವಕಾಶವಿಲ್ಲ. ಇದರಿಂದಾಗಿ ಖರೀದಿ ಪ್ರಕ್ರಿಯೆಗೆ ಒಂದಿಷ್ಟು ಹಿನ್ನಡೆಯಾಗಿದೆ ಎನ್ನುತ್ತಾರೆ ಉಗ್ರಾಣ ನಿಗಮ ಸಿಬ್ಬಂದಿ ಗುಲ್‌ ಅಹಮದ್ ಖಾನ್.

ಪ್ರಾರಂಭದಲ್ಲಿ ಒಬ್ಬ ರೈತರಿಂದ 25ಕ್ವಿಂಟಲ್‌ ಭತ್ತ ಖರೀದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಬೇಡಿಕೆ ಹಾಗೂ ರೈತ ಸಭೆಯಲ್ಲಿ ಒತ್ತಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಒಬ್ಬರು ಎಕರೆಗೆ 25 ಕ್ವಿಂಟಲ್‌ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ವ್ಯವಸ್ಥಾಪಕ ಕೆ. ರಾಜು.

ಈ ಕೇಂದ್ರದಲ್ಲಿ ಎಲ್ಲಾ ರೀತಿಯ ಭತ್ತವನ್ನು ಖರೀದಿ ಮಾಡುವ ಪ್ರಕ್ರಿಯೆ ನಡೆಯಬೇಕು. ತಡವಾಗಿ ಖರೀದಿ ಕೇಂದ್ರ ಆರಂಭವಾಗಿದ್ದು ಸಹ ಸರಿಯಲ್ಲ ಎನ್ನುವುದು ಎಮ್ಮೆಹಟ್ಟಿ ಕೃಷಿಕ ಡಿ.ಕೆ. ಶಿವಾಜಿರಾವ್, ತಾವು ಪ್ಲಾಸ್ಟಿಕ್‌ ಚೀಲದಲ್ಲಿ ತಂದಿದ್ದ ಭತ್ತ ತೋರಿಸಿ ತೇವಾಂಶ ಜಾಸ್ತಿ ಇರುವ ಕಾರಣ ವಾರ ಬಿಟ್ಟು ಬರಲು ಹೇಳಿದ್ದಾರೆ. ಇನ್ನು ಸ್ವಲ್ಪ ದಿನ ಒಣಗಿಸಿ ತಂದರೆ ಉತ್ತಮ ಬೆಲೆ ಸಿಗುತ್ತದೆ ಎಂದು  ಹೇಳುತ್ತಾರೆ. 
ಭತ್ತಕ್ಕೆ ರೂ. 1,600 ಹಾಗೂ ಮೆಕ್ಕೆಜೋಳಕ್ಕೆ ರೂ. 1,310 ದರ ಇರುವ ಖರೀದಿ ಕೇಂದ್ರದಲ್ಲಿ ಉತ್ತಮ ಬೆಲೆಯಂತೂ ಇದೆ.  ಆದರೆ ತೇವಾಂಶ ಮಾಪಕದ ಸೂಚನೆ ನಂತರ ಖರೀದಿ ನಡೆಯುವ ಕಾರಣ ರೈತರು ತಾವು ತಂದ ಭತ್ತ ಸ್ಯಾಂಪಲ್‌ಗೆ ತಕ್ಷಣವೇ ಒಪ್ಪಿಗೆ ಸಿಗುತ್ತದೆ ಎಂಬ ನಂಬಿಕೆ ಮಾತ್ರ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.