ADVERTISEMENT

ವಿದೇಶ ಪ್ರವಾಸ: ಕೈಬಿಡುವುದೇ ಸೂಕ್ತ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 5:10 IST
Last Updated 21 ಏಪ್ರಿಲ್ 2012, 5:10 IST

ಸಾಗರ: ಬರಗಾಲ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುವ ನಿರ್ಧಾರವನ್ನು ಕೈಬಿಡುವುದೇ ಸೂಕ್ತ ಎಂದು ವಿಧಾನ ಪರಿಷತ್‌ನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಬರಲಿರುವ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಂಬಂಧ ಶುಕ್ರವಾರದಿಂದ ಪ್ರಚಾರ ಆರಂಭಿಸುವ ಮುನ್ನ  ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿದೇಶ ಪ್ರವಾಸಕ್ಕೆ ಆಯ್ಕೆಯಾದ ಶಾಸಕರ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆದರೆ, ನಾನು ಪ್ರವಾಸಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

1988ರಿಂದ ಪದವೀಧರ ಕ್ಷೇತ್ರವನ್ನು ಸತತವಾಗಿ ನಾಲ್ಕು ಬಾರಿ ಪ್ರತಿನಿಧಿಸಿದ್ದು, ಮತದಾರರು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಈ ಸಾಧನೆಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿ ಈ ಬಾರಿಯೂ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದೇನೆ ಎಂದು ಹೇಳಿದರು.

ವಿಧಾನ ಪರಿಷತ್‌ನ ಸ್ಪೀಕರ್ ಆಗಿದ್ದುಕೊಂಡೆ ಒಂದು ಪಕ್ಷದ ಅಭ್ಯರ್ಥಿಯಾಗಿ ಪ್ರಚಾರ ನಡೆಸುವುದು ಕಾನೂನು ಮತ್ತು ನೀತಿಯ ದೃಷ್ಟಿಯಿಂದ ಎಷ್ಟು ಸರಿ ಎಂದು ಕೇಳಿದ ಪ್ರಶ್ನೆಗೆ, ನಮ್ಮ ರಾಷ್ಟ್ರದಲ್ಲಿ ಸ್ಪೀಕರ್ ಆದವರು ಆ ಸ್ಥಾನಕ್ಕೆ ರಾಜೀನಾಮೆ ನೀಡದೆಯೆ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಅನೇಕ ಉದಾಹರಣೆಗಳಿವೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇದ್ದು ಅಧಿಕಾರದ ದುರ್ಬಳಕೆ ಪ್ರಶ್ನೆ ಉದ್ಬವವಾಗುವುದಿಲ್ಲ ಎಂದು ಉತ್ತರಿಸಿದರು.

ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಎಂಬುದನ್ನು ಒಪ್ಪಿಕೊಂಡ ಅವರು ನಾನು ಯಾವುದೇ ಗುಂಪಿಗೆ ಸೇರಿಲ್ಲ.  ಸದಾನಂದ ಗೌಡ  ಅವರ ಗುಂಪಿನ  ಜೊತೆ ಗುರುತಿಸಿಕೊಂಡಿದ್ದು ಸಧ್ಯದಲ್ಲೆ ಸಚಿವ ಸ್ಥಾನ ಪಡೆಯಲಿದ್ದೇನೆ ಎಂಬುದು ಸುಳ್ಳು ಸುದ್ದಿ. ನಾನು ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿ ಇಲ್ಲ ಎನ್ನುವುದಕ್ಕೆ ಇತ್ತೀಚೆಗಷ್ಟೆ ಶಿಕಾರಿಪುರ ಉತ್ಸವವನ್ನು ಖುದ್ದಾಗಿ ಉದ್ಘಾಟಿಸಿದ್ದೆ ನಿರ್ದಶನ ಎಂದರು.

ಶಿಕ್ಷಣ ಸಚಿವರಾಗಿದ್ದಾಗ ಕುವೆಂಪು ವಿವಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವನ್ನು ನಿರಾಕರಿಸಿದ ಅವರು, ಕಾನೂನು ವ್ಯಾಪ್ತಿಯಲ್ಲಿ ಏನು ಮಾಡಬೇಕೊ ಅದನ್ನು ಮಾಡಿದ್ದೇನೆ ಎಂದರು.

ಶಿಕ್ಷಕರ ಭವನ, ಸರ್ಕಾರಿ ನೌಕರರ ಭವನ ಇರುವಂತೆ ಪದವೀಧರರ ಭವನ ನಿರ್ಮಿಸಬೇಕು ಎಂಬ ಬೇಡಿಕೆ ಈವರೆಗೆ ಬಂದಿಲ್ಲ ಎಂದು ಹೇಳಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಆರ್.ಜಯಂತ್, ನಗರ ಅಧ್ಯಕ್ಷ ವಿ.ಮಹೇಶ್, ಟಿ.ಡಿ.ಮೇಘರಾಜ್, ರಾಧಾಕೃಷ್ಣ ನಾಯಕ್ ಬೇಂಗ್ರೆ, ಪ್ರಸನ್ನ ಕೆರೆಕೈ, ಬಿ.ತ್ಯಾಗಮೂರ್ತಿ, ತುಕಾರಾಂ, ಯಾದವಜಾಲಿ, ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.