ADVERTISEMENT

ವಿದ್ಯಾರ್ಥಿಗಳ ಆಹಾರ ಕಡಿತಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 9:05 IST
Last Updated 20 ಅಕ್ಟೋಬರ್ 2012, 9:05 IST

ಶಿವಮೊಗ್ಗ: ಅಡುಗೆ ಅನಿಲದ ಸಿಲಿಂಡರ್‌ಗಳ ದರ ಏರಿಕೆಯನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಸರ್ಕಾರಿ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪೌಷ್ಠಿಕಾಂಶದ ಆಹಾರ ಕಡಿತಗೊಳಿಸಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಹಿಂದೆ ರಾಜ್ಯ ಸರ್ಕಾರ ಪ್ರತಿಯೊಬ್ಬ ಹಾಸ್ಟೆಲ್ ವಿದ್ಯಾರ್ಥಿಗೆ ತಿಂಗಳಿಗೆ ರೂ.850 ಆಹಾರ ವೆಚ್ಚವಾಗಿ ನೀಡುತ್ತಿತ್ತು. ಇದರಲ್ಲಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ, ವಾರಕ್ಕೊಮ್ಮೆ ಮೊಟ್ಟೆ, ಬಾಳೆಹಣ್ಣು ಹಾಗೂ ಕೋಳಿಮಾಂಸವನ್ನು ಮಿತ ಆಹಾರ ರೂಪದಲ್ಲಿ ಕೊಡಲಾಗುತ್ತಿತ್ತು. ಆದರೆ, ಈಚೆಗೆ ಸಬ್ಸಿಡಿ ಸಿಲಿಂಡರ್ ನೀಡಿಕೆ ಸ್ಥಗಿತಗೊಳಿಸಿದ್ದನ್ನೇ ನೆಪವಾಗಿಟ್ಟುಕೊಂಡು ವಾಣಿಜ್ಯ ಬಳಕೆ  ಸಿಲಿಂಡರ್ ಖರೀದಿಗೆ ವಿದ್ಯಾರ್ಥಿಗಳ ಹಣವನ್ನೇ ಬಳಸಿಕೊಳ್ಳುತ್ತಿದೆ. ಇದರಿಂದ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಸಿಲಿಂಡರ್ ಖರೀದಿಗೆ ಪ್ರತ್ಯೇಕ ಅನುದಾನ ಮೀಸಲಿರಿಸಬೇಕು. ತಲಾ ವಿದ್ಯಾರ್ಥಿಗೆ ಆಹಾರ ವೆಚ್ಚವಾಗಿ ನೀಡುತ್ತಿರುವ ಹಣ ಹೆಚ್ಚಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಎನ್‌ಎಸ್‌ಯುಐ ಅಧ್ಯಕ್ಷ ಸಿ.ಜಿ. ಮಧುಸೂದನ್, ಪದಾಧಿಕಾರಿಗಳಾದ ಚೇತನ್, ಶ್ರೀಜಿತ್ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.