ADVERTISEMENT

ವಿವಿಧೆಡೆ ಸಂಭ್ರಮದ ಕ್ರಿಸ್‌ಮಸ್ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:30 IST
Last Updated 26 ಡಿಸೆಂಬರ್ 2012, 5:30 IST

ಭದ್ರಾವತಿ:  ನಗರದ ವಿವಿಧ ಬಡಾವಣೆಯಲ್ಲಿನ ಕ್ರೈಸ್ತ ಮಂದಿರದಲ್ಲಿ ವೈಭವದ, ಸಂಭ್ರಮದ ಕ್ರಿಸ್‌ಮಸ್ ಆಚರಣೆ ನಡೆದಿದ್ದು, ಅದರ ಸವಿಯನ್ನು ಕ್ರೈಸ್ತ ಬಾಂಧವರು ಮಂಗಳವಾರ ಸವಿದರು.

ಕ್ರಿಸ್‌ಮಸ್ ಟ್ರೀ ಅಲಂಕಾರ, ವಿದ್ಯುತ್ ದೀಪಗಳಿಂದ ಜಗಮಗಿಸಿದ ಚರ್ಚ್‌ಗಳು, ಬಣ್ಣ ಬಣ್ಣದ ವೇಷತೊಟ್ಟ ಪುಟಾಣಿಗಳು, ಕ್ರಿಸ್ತನ ಜನನದ ದೃಶ್ಯ ಅಲಂಕಾರ, ವಿವಿಧ ಮಾದರಿಯಲ್ಲಿ ನಿರ್ಮಿಸಿದ ಏಸು ಜನ್ಮದ ದೃಶ್ಯಗಳು ನೋಡುಗರ ಮನ ಸೆಳೆದವು.

ಸೋಮವಾರ ಮಧ್ಯರಾತ್ರಿ ನ್ಯೂಟೌನ್, ಕಾಗದನಗರ, ಗಾಂಧಿನಗರ, ಹೊಸಮನೆ, ಮೂಲೆಕಟ್ಟೆ... ಇನ್ನಿತರ ವ್ಯಾಪ್ತಿಯಲ್ಲಿ ಇರುವ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ದೇವ ಮಾನವ ಸಂದೇಶ ಬಿಂಬಿಸುವ ಅದ್ದೂರಿಯಾಗಿ ನಡೆಯಿತು.

ನೆರೆದಿದ್ದ ಭಕ್ತ ಸಮೂಹಕ್ಕೆ ಕ್ರಿಸ್ತ ಸಂದೇಶ ಸಾರಿದ ಧರ್ಮಗುರುಗಳು, ಪವಿತ್ರ ಬೈಬಲ್ ಪಠಣ ಮೂಲಕ ಸದ್ವಿಚಾರದ ವಿನಿಮಯ ನಡೆಸಿದರು. ನಂತರ ಬಂದ ಮಂದಿಗೆ ಪ್ರಸಾದ ವಿತರಣೆ ನಡೆಯಿತು.

ನ್ಯೂಟೌನ್ ಅಮಲೋದ್ಭವಿ ಮಾತಾ ದೇವಾಲಯದಲ್ಲಿ ಜರುಗಿದ ಪ್ರಾರ್ಥನಾ ಸಭೆಯಲ್ಲಿ ಫಾ.ಡೆನ್ನಿಸ್ ಮಥಾಯಿಸ್ ಸಂದೇಶ ಸಾರಿದರು. ದೇವಾಲಯ ಹೊರಗೆ ನಿರ್ಮಿಸಿದ್ದ ಆಕರ್ಷಕ ಗೋದಲಿ ನೋಡುಗರ ಮನ ಸೂರೆಗೊಂಡಿತು.    
  
ವಿಶೇಷ ಪೂಜೆ
ಹೊಸನಗರ:  ತಾಲ್ಲೂಕಿನಾದ್ಯಂತ ಚರ್ಚ್‌ಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕ್ರಿಸ್‌ಹಬ್ಬವನ್ನು ಸಂಭ್ರಮ ಹಾಗೂ ಭಕ್ತಿಯಿಂದ ಆಚರಿಸಲಾಗಿದೆ.

ಕ್ರಿಸ್‌ಮಸ್ ಹಬ್ಬದ ಮಧ್ಯರಾತ್ರಿ ಹಾಗೂ ಪ್ರಾತಃ ಕಾಲ ಪಟ್ಟಣದ ಸಂತ ಅಂತೋಣಿ, ಕಬಳೆ, ನಗರ ಹಾಗೂ ಮಾಸ್ತಿಕಟ್ಟೆಯ ಚರ್ಚ್‌ಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಏಸುಕ್ರಿಸ್ತರ ಹುಟ್ಟು ಹಬ್ಬದ ಪ್ರತೀಕವಾಗಿ ಚರ್ಚ್ ಹಾಗೂ ಮನೆಗಳಲ್ಲಿ ವಿಶೇಷವಾಗಿ ನಿರ್ಮಿಸಿದ  ದೀಪಾಲಂಕೃತ ಗೋದಲಿ ಜನಾಕರ್ಷಣೀಯವಾಗಿತ್ತು.

ಶಾಂತಿಗೆ ಪ್ರಾರ್ಥನೆ
ಶಿಕಾರಿಪುರ: ಪಟ್ಟಣದಲ್ಲಿ ಕ್ರಿಸ್‌ಮಸ್ ಆಚರಣೆಯನ್ನು ಕ್ರೈಸ್ತ ಬಾಂಧವರು ಚರ್ಚ್‌ಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಿದರು.

ಮಂಗಳವಾರ ಬೆಳಿಗ್ಗೆ 10ಕ್ಕೆ ಮಕ್ಕಳೊಂದಿಗೆ ಚರ್ಚ್‌ಗಳಿಗೆ ಆಗಮಿಸಿದ ಕ್ರೈಸ್ತ ಬಂಧುಗಳು, ಪ್ರಾರ್ಥನೆ ಹಾಡುವ ಮೂಲಕ ಯೇಸುವಿನ ಸ್ಮರಣೆ ಮಾಡಿ ಜಗತ್ತಿನ ಶಾಂತಿಗಾಗಿ ಕೋರಿದರು.

ಸಿಎಸ್‌ಐ ಜುಬ್ಲಿ ಚರ್ಚ್‌ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಮಾತನಾಡಿದ ಫಾಧರ್ ಮಧುಕರ್ ಮೋಸೆನ್ ಕೋರಾ, ಯೇಸು ಕ್ರಿಸ್ತನ ಕೃಪೆಯಿಂದ ವಿಶ್ವದಲ್ಲಿ ಸಮಾಧಾನ ನೆಲೆಸಿದೆ.ಅದನ್ನು ನೀವೆಲ್ಲಾ ಪಡೆದುಕೊಳ್ಳಬೇಕು ಎಂದರು.

ಸಾಮೂಹಿಕ ಪ್ರಾರ್ಥನೆ ನಂತರ ಕ್ರೈಸ್ತ ಬಾಂಧವರು ಪರಸ್ಪರ ಕೇಕ್ ಹಂಚುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪಟ್ಟಣದಲ್ಲಿರುವ ಯೇಸುವಿನ ಕಿರಿಯ ಪುಷ್ಪಾ ಸಂತ ತೆರೆಸಾ ದೇವಾಲಯ ಹಾಗೂ ಕ್ರಿಶ್ಚಿಯನ್ ಬ್ರದರ್‌ನ್ ಚರ್ಚ್‌ನಲ್ಲೂ ಕೂಡ ಕ್ರೈಸ್ತ ಬಾಂಧವರು ಕ್ರಿಸ್‌ಮಸ್‌ಅನ್ನು ಸಂಭ್ರಮದಿಂದ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.