ತೀರ್ಥಹಳ್ಳಿ: ಪ್ರೊ.ಎ. ವೈದ್ಯನಾಥನ್ ವರದಿಯ ಸಮಗ್ರ ಅಧ್ಯಯನ ಸಹಕಾರಿಗಳಿಗೆ ಅತ್ಯಂತ ಅಗತ್ಯವಾಗಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅಭಿಪ್ರಾಯಪಟ್ಟರು..
ಪಟ್ಟಣದಲ್ಲಿ ಬುಧವಾರ ವೈದ್ಯನಾಥನ್ ವರದಿ ಶಿಫಾರಸ್ಸುಗಳ ಅನುಷ್ಠಾನ ಕುರಿತಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವೈದ್ಯನಾಥನ್ ವರದಿಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ತಡೆಯಲಾಗಿದೆ. ಪಕ್ಷಾತೀತವಾಗಿ ಸಹಕಾರಿ ಕ್ಷೇತ್ರ ಬೆಳೆಯಬೇಕು ಎಂಬ ಉದ್ದೇಶ ಅದರಲ್ಲಿ ಅಡಗಿದೆ. ಸಹಕಾರಿಗಳಿಗೆ ಸಹಕಾರಿ ನಿಯಮಗಳ ಅರಿವಿರಬೇಕು. ಪ್ರತಿ ತಿಂಗಳು ಈ ಕುರಿತು ಚರ್ಚೆ ನಡೆಸಬೇಕು ಎಂದರು.
ವೈದ್ಯನಾಥನ್ ವರದಿ ಜಾರಿಗೆ ಬಂದು ಒಂದು ವರ್ಷವಾಗುತ್ತಿದೆ. ವರದಿ ಜಾರಿಯ ನಂತರ ಏನೇನು ಬೆಳವಣಿಗೆ ಆಗಿದೆ ಎಂಬುದನ್ನು ಅವಲೋಕನ ಮಾಡಬೇಕಿದೆ. ನಷ್ಟದಲ್ಲಿರುವ ಸಹಕಾರಿ ಸಂಘಗಳ ನಷ್ಟ ಹೋಗಲಾಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವು ಪಡೆಯುವ ಕೆಲಸ ಆರಂಭವಾಗಿದೆ. ಕಟ್ಟು ನಿಟ್ಟಿನ ನಿಯಮದ ನಂತರ ಹಣ ಬಿಡುಗಡೆ ಮಾಡುವ ಭರವಸೆಯನ್ನು ಸರ್ಕಾರ ನೀಡಿದೆ. ಏಪ್ರಿಲ್ ತಿಂಗಳಿನಿಂದ ರಾಜ್ಯಾದ್ಯಂತ ಹೊಸ ಲೆಕ್ಕ ಬರೆವ ಪದ್ಧತಿ ಆರಂಭಗೊಳ್ಳಲಿದೆ ಎಂದು ಮಂಜುನಾಥಗೌಡ ಹೇಳಿದರು.
ಸಹಕಾರಿ ಕ್ಷೇತ್ರಕ್ಕೆ ಪಕ್ಷ ಪಂಗಡ ತೊಡಕಾಗಬಾರದು. ಎಲ್ಲರ ಸಹಕಾರ ಮುಖ್ಯ ಎಂಬುದನ್ನು ಸಹಕಾರಿಗಳು ಅರಿಯಬೇಕು. ಕಳೆದ 10 ವರ್ಷಗಳಿಂದ ಈಚೆಗೆ ತೀರ್ಥಹಳ್ಳಿಯಲ್ಲಿ ವಿಜಯದೇವ್ ನೇತೃತ್ವದಲ್ಲಿ ಆರಂಭಗೊಂಡ ಸಹ್ಯಾದ್ರಿ ಸಂಸ್ಥೆ ಸಧೃಡವಾಗಿ ಬೆಳೆದಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಹೋದರೆ ಅಲ್ಲಿನ ಅನುಭವ ಅನೇಕ ಸಂಸ್ಥೆಗಳ ಹುಟ್ಟಿಗೆ ಕಾರಣವಾಗುತ್ತದೆ. ತೀರ್ಥಹಳ್ಳಿಯಲ್ಲಿ ಅಂತಹ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ ಎಂದು ನುಡಿದರು.
ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷ ಎಚ್.ಎನ್. ವಿಜಯದೇವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಾಗರಾಜ ಶೆಟ್ಟಿ, ಕ್ಯಾಮ್ಕೊ ನಿರ್ದೇಶಕ ಮಹಾಭಲ ಭಟ್ ಹಾಗೂ ಸಂಪನ್ಮೂಲ ವ್ಯಕ್ತಿ ರಾಮಸ್ವಾಮಿ ಉಪಸ್ಥಿತರಿದ್ದರು. ತಲವಡಗ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.