ADVERTISEMENT

ಶಾಲೆಗೆ ಮರುದಾಖಲಾದ ಮಕ್ಕಳು ಕೇವಲ 30

ವಿಜಯಕುಮಾರ್‌ ಎಸ್.ವಿ
Published 14 ಜುಲೈ 2017, 6:08 IST
Last Updated 14 ಜುಲೈ 2017, 6:08 IST
ಶಿವಮೊಗ್ಗದ ಸರ್ಕಾರಿ ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳು (ಸಾಂದರ್ಭಿಕ ಚಿತ್ರ).
ಶಿವಮೊಗ್ಗದ ಸರ್ಕಾರಿ ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳು (ಸಾಂದರ್ಭಿಕ ಚಿತ್ರ).   

ಶಿವಮೊಗ್ಗ: ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಾಕಷ್ಟು ಬೆವರು ಹರಿಸಿದರೂ, ದಾಖಲಾದ ಮಕ್ಕಳ ಸಂಖ್ಯೆ ಕೇವಲ 30!
ವಿಶೇಷ ದಾಖಲಾತಿ ಆಂದೋಲನದ ಅಡಿ ಮಕ್ಕಳನ್ನು ಶಾಲೆಗೆ ಕರೆತರುವ  ಅಭಿಯಾನಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಿಕ್ಷಣ ಇಲಾಖೆ ನಿರ್ದೇಶನದಂತೆ ಮೇ 29ರಿಂದ ಜೂನ್ 30ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇಲಾಖೆ ಬಿಡುಗಡೆ ಮಾಡಿದ ಅಂಕಿ–ಸಂಖ್ಯೆಯ ಪ್ರಕಾರ ಜಿಲ್ಲೆಯಲ್ಲಿ 301 ಮಕ್ಕಳು ಶಾಲೆಯಿಂದ ಹೊರಗುಳಿದಿ ದ್ದಾರೆ. 33 ದಿನ ನಡೆದ ಈ ಆಂದೋಲನದ ಪರಿಣಾಮ ಮರುದಾಖಲಾದ ಮಕ್ಕಳ ಸಂಖ್ಯೆ ಶೇ 10 ಮಾತ್ರ.

ಪ್ರಸಕ್ತ ಸಾಲಿನ ಮೇ ಹಾಗೂ ಜೂನ್ ತಿಂಗಳಿನಲ್ಲಿ ಐದೂವರೆ ವರ್ಷದಿಂದ 14 ವರ್ಷದ ಒಳಗಿನ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವ ಕಾರ್ಯಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಚಾಲನೆ ನೀಡಿತ್ತು.

ADVERTISEMENT

ಭದ್ರಾವತಿ ಮರು ದಾಖಲಾತಿ ಶೂನ್ಯ: ಹೊಸನಗರ ತಾಲ್ಲೂಕು 2, ಸಾಗರ ತಾಲ್ಲೂಕು 4, ಶಿಕಾರಿಪುರ ತಾಲ್ಲೂಕು 8, ಸೊರಬ ತಾಲ್ಲೂಕು 3, ತೀರ್ಥಹಳ್ಳಿ ತಾಲ್ಲೂಕು 6 ಹಾಗೂ ಶಿವಮೊಗ್ಗ ತಾಲ್ಲೂಕಿನಲ್ಲಿ 7 ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಭದ್ರಾವತಿಯಲ್ಲಿ 66 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದರೂ ಒಂದು ಮಗುವನ್ನೂ ಮರು ದಾಖಲು ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ಪೋಷಕರ ನಿರಾಸಕ್ತಿ: ಮಕ್ಕಳನ್ನು ಶಾಲೆಗೆ ಸೇರಿಸಲು ಹಲವು ಭಾಗಗಳಲ್ಲಿ ಸೂಕ್ತ ಆಂದೋಲನ ರೂಪಿಸಿಲ್ಲ. ಕೆಲವು ಭಾಗಗಳಲ್ಲಿ ಪೋಷಕರೂ ಆಸಕ್ತಿ ತೋರಿಲ್ಲ.
ಕೂಲಿ ಕಾರ್ಮಿಕರು ಹಾಗೂ ವಲಸಿಗರ ಮಕ್ಕಳಲ್ಲಿ ಶಿಕ್ಷಣ ಜಾಗೃತಿಯ ಕೊರತೆ ಕಾಡುತ್ತಿದೆ. ಪೋಷಕರು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗೆ ‘ಏಕೆ ಕಳುಹಿಸಬೇಕು..? ಅದರಿಂದ ಏನು ಪ್ರಯೋಜನ..?’ ಎಂಬ ಧೋರಣೆ ಅವರಲ್ಲಿದೆ. ವಲಸೆ ಕಾರ್ಮಿಕರಿಗೆ ದಿನದ ದುಡಿಮೆಯೇ ಮುಖ್ಯ. ಮಕ್ಕಳನ್ನು ಯಾವುದಾದರೂ ಕೆಲಸಕ್ಕೆ ಕಳುಹಿಸುತ್ತಾರೆ. ಇಲ್ಲದಿದ್ದರೆ ಮನೆಗೆಲಸಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದು ಶಿಕ್ಷಣ ಇಲಾಖೆ ಅಧಿಕಾರಿಗಳ ಸಮಜಾಯಿಷಿ.

‘ಈ ಹಿಂದೆಯೂ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಗುರುತಿಸಿದ್ದ ಹಲವು ಮಕ್ಕಳು ಕೆಲವು ದಿನಗಳು ಕಳೆದ ನಂತರ ವಲಸೆ ಹೋಗಿರುತ್ತಾರೆ. ಮತ್ತೆ ಅವರನ್ನು ಹುಡುಕುವುದು ಸಾಹಸದ ಕೆಲಸ. ಸಮಾಜದ ಎಲ್ಲಾ ಮಕ್ಕಳು ವಿದ್ಯಾ ವಂತರಾಗಬೇಕು, ಸುಶಿಕ್ಷಿತರಾಗಬೇಕು ಎನ್ನುವ ಮನೋಸ್ಥಿತಿ ಎಲ್ಲಾ ಪೋಷಕರಲ್ಲಿಯೂ ಮೂಡಬೇಕು. ಈಗಾಗಲೇ ಇಲಾಖೆಯಿಂದ ಟೆಂಟ್ ಶಾಲೆ ಆರಂಭಿಸಲಾಗಿದೆ. ಅಲ್ಲಿ ಕೂಲಿಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಗಣಪತಿ ಮಾಹಿತಿ ನೀಡಿದರು.

ಪೋಷಕರಿಗೆ ವಿಶೇಷ ಜಾಗೃತಿ: ಕಳೆದ ತಿಂಗಳು ನಡೆದ ‘ಶಾಲೆ ಕಡೆ, ನನ್ನ ನಡೆ ಆಂದೋಲನ’ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕರ್ತರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಜಿಲ್ಲೆಯ ಪ್ರತಿ ಹೋಬಳಿ ಕೇಂದ್ರಗಳಿಗೂ ಭೇಟಿ ನೀಡಿ, ಮಕ್ಕಳ ದಾಖಲಾತಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದರು. ಕರಪತ್ರ, ಬೀದಿನಾಟಕ, ಜನಪದಗೀತೆ ಮೂಲಕ ಪ್ರಚಾರ ಮಾಡಲಾಗಿತ್ತು. ಕೌಟುಂಬಿಕ ಕಾರಣಗಳಿಗಾಗಿ ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಪೋಷಕರಿಗೆ ಎಚ್ಚರಿಕೆ ನೀಡುವ ಕೆಲಸವನ್ನೂ ಮಾಡಲಾಗಿತ್ತು.

* * 

ಉಳಿದ 271 ಮಕ್ಕಳನ್ನೂ ಶೀಘ್ರ ಕರೆತರಲು ಎಸ್‌ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು, ಆಯಾ ಊರಿನ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪ್ರಯತ್ನ ಮುಂದುವರಿದಿದೆ.
ಗಣಪತಿ
ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.