ADVERTISEMENT

ಶಿಕಾರಿಪುರ: ಅಪ್ಪ- ಮಗನ ಭಾಗವಹಿಸುವಿಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಮೇ 2012, 5:15 IST
Last Updated 12 ಮೇ 2012, 5:15 IST

ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ರಾಘವೇಂದ್ರ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು; ಭಾಗವಹಿಸಿದರೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯ ಶಾಂತವೀರಪ್ಪಗೌಡ ಹೇಳಿದರು.

ಪಟ್ಟಣದ ಬಸ್‌ನಿಲ್ದಾಣದಲ್ಲಿ ಶುಕ್ರವಾರ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಮತ್ತು ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯಿಂದ ದೇಣಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿರುವುದನ್ನು ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಯಡಿಯೂರಪ್ಪ ಕರ್ನಾಟಕ ಒಂದರಲ್ಲೇ ಆಸ್ತಿ ಮಾಡಿಲ್ಲ, ಅಕ್ಕಪಕ್ಕದ ರಾಜ್ಯದಲ್ಲಿ ಹಾಗೂ ಹೊರದೇಶದಲ್ಲಿ ಆಸ್ತಿ ಮಾಡಿದ್ದಾರೆ. ಈ ದೇಶದಲ್ಲಿ ಇಂತಹ ಒಬ್ಬ ಭ್ರಷ್ಟ ವ್ಯಕ್ತಿ ಹಾಗೂ ಭ್ರಷ್ಟ ಕುಟುಂಬ ಇರಲು ಸಾಧ್ಯವಿಲ್ಲ. ಶಿಕಾರಿಪುರ ಸುತ್ತಮುತ್ತಲಿನ ಊರುಗಳಲ್ಲಿ ಅಕ್ರಮ ಆಸ್ತಿಯನ್ನು ಮಾಡುವುದರಲ್ಲಿಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ  ಇಬ್ಬರೂ ನಿರತರಾಗಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಯಾರಿಗೂ ಹೆದರದೇ ಇವರು ಮಾಡಿರುವ ಅಕ್ರಮ ಆಸ್ತಿಗಳ ಬಗ್ಗೆ ಸಿಬಿಐಗೆ ತನಿಖೆ ಮಾಡುವಂತೆ ಲಿಖಿತ ದೂರನ್ನು ನೀಡಬೇಕೆಂದು ಕರೆ ನೀಡಿದರು.

ನೈತಿಕ ಹೊಣೆ ಹೊತ್ತು ಸಂಸತ್ ಸದಸ್ಯ ಸ್ಥಾನಕ್ಕೆ ಬಿ.ವೈ. ರಾಘವೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ದುಡ್ಡಿದ್ದರೆ ದೇಶದ ಕಾನೂನನ್ನು ಖರೀದಿ ಮಾಡಬಹುದು ಎಂದು ತಿಳಿದುಕೊಂಡಿದ್ದ ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ಒಳ್ಳೆಯ ಬುದ್ದಿಯನ್ನು ಕಲಿಸಿದೆ. ಶಿಕಾರಿಪುರ ತಾಲ್ಲೂಕಿನಲ್ಲಿ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಸಂತತಿಯನ್ನು ಶಾಂತವೀರಪ್ಪಗೌಡ ನೇತತ್ವದಲ್ಲಿ ನಾಶಮಾಡುತ್ತೇವೆ ಎಂದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಪ್ಪನಹಳ್ಳಿ ಬಸವರಾಜ್ ಮಾತನಾಡಿ, ಯಡಿಯೂರಪ್ಪ ಅವರ ಹಿಟ್ಲರ್ ಆಡಳಿತಕ್ಕೆ ಸುಪ್ರೀಂಕೋರ್ಟ್ ಒಳ್ಳೆಯ ತೀರ್ಪು ನೀಡಿದೆ ಎಂದರು.

ಬಗರ್‌ಹುಕುಂ ಹೋರಾಟದ ಮೂಲಕ ಶಾಸಕರಾದ ಯಡಿಯೂರಪ್ಪ ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಹಕ್ಕನ್ನು ನೀಡುವಲ್ಲಿ ವಿಫಲರಾಗಿದ್ದಾರೆ ಎಂದರು.

ಸುಬ್ರಹ್ಮಣ್ಯ ರೇವಣ್‌ಕರ್, ಪುರಸಭೆ ಸದಸ್ಯ ಪಾರಿವಾಳ ಶಿವರಾಮ್, ಪುರಸಭೆ ಮಾಜಿ ಉಪಾಧ್ಯಕ್ಷ ರಮೇಶ್, ಹಳ್ಳೂರು ಪರಮೇಶಪ್ಪ, ಗಬ್ಬೂರು ನಾಗರಾಜಪ್ಪ, ಭಂಡಾರಿ ಮಾಲತೇಶ್, ಎಚ್.ಎಸ್. ರಾಘವೇಂದ್ರ, ಬಡಗಿ ಪಾಲಾಕ್ಷಪ್ಪ, ಎಸ್.ವಿ.ಕೆ. ಮೂರ್ತಿ, ಪಿಂಟು ಸಾಹೇಬ್ರು, ಸಿಂಚು, ಬಸವರಾಜ್, ಸಂಕ್ರಿ ರುದ್ರೇಶ್, ಬಡಗಿ ಪ್ರದೀಪ್, ವದರೋರ್ ಹರೀಶ್, ಬೆಣ್ಣೆ ಜಗದೀಶ್ ಉಪಸ್ಥಿತರಿದ್ದರು.

ಕಣಿವೆ ಮಾರಮ್ಮ ಜಾತ್ರೆ
ಭದ್ರಾವತಿ:
ಇಲ್ಲಿನ ಕಡದಕಟ್ಟೆ ಗ್ರಾಮ ದೇವತೆ ಕಣಿವೆ ಮಾರಮ್ಮ ಜಾತ್ರೆಯು ಮೇ 14ರಿಂದ 17ರ ತನಕ ನಡೆಯಲಿದೆ.

ಮೇ 14ರಂದು ಧ್ವಜಾರೋಹಣ, ಹೆಬ್ಬಂಡಿ ಗ್ರಾಮದಿಂದ ಮಧುವಣಗಿತ್ತಿ ಕರೆ ತರುವ ಕಾರ್ಯ, ಮೇ 15ರಂದು ಗಂಗಾಪೂಜೆ, ಹುಚ್ಚಾಯ ಥೇರಿನ ಬಲಿಪೂಜೆ, ದುರ್ಗಾಹೋಮ, ಧಾರೆ ಮೂಹೂರ್ತ, ರಾಜಬೀದಿ ಉತ್ಸವ, ನಂತರ, ರಥೋತ್ಸವ ನಡೆಯಲಿದೆ.

16ರಂದು ಮಧ್ಯಾಹ್ನ 12ಕ್ಕೆ ಬೇವಿನಸೀರೆ, 17ಕ್ಕೆ ಓಕುಳಿ, ಹೂವಿನ ಅಲಂಕಾರದೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಜಾತ್ರಾ ಮಹೋತ್ಸವ ಪ್ರಕಟಣೆ ತಿಳಿಸಿದೆ.
 

ಶಿವಮೊಗ್ಗ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ

ಶಿವಮೊಗ್ಗ: ಸುಪ್ರೀಂಕೋರ್ಟ್ ಸಿಇಸಿ ವರದಿ ಅನ್ವಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಬಗ್ಗೆ ಶಿವಮೊಗ್ಗ ನಗರದಲ್ಲಿ ಶುಕ್ರವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಯಡಿಯೂರಪ್ಪ ಅಭಿಮಾನಿಗಳು ತಲ್ಲಣಗೊಂಡಿದ್ದರೆ, ವಿರೋಧಿಗಳು ಹರ್ಷ ಪಟ್ಟರು. ಸಾರ್ವಜನಿಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

`ಜಿಲ್ಲೆಯ ಅಭಿವೃದ್ಧಿಗೆ ಹೊಸ ನೋಟ ಒದಗಿಸಿದ ಯಡಿಯೂರಪ್ಪ ಅವರಿಗೆ ಈ ರೀತಿ ಆಗಿರುವುದು ಅನ್ಯಾಯ. ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆಂಬ ಆಸೆ ಇತ್ತು. ಆಗಿದ್ದರೆ ಶಿವಮೊಗ್ಗ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು~ ಎಂಬ ನುಡಿ ಯಡಿಯೂರಪ್ಪ ಅವರ ಅಭಿಮಾನಿಯದ್ದು.

`ಅವರಿಗೆ ಮೊದಲಿನಿಂದಲೂ ಸಂಕಷ್ಟಗಳ ಸರಮಾಲೆಯೇ ಸುತ್ತಿಕೊಂಡು ಬಂತು. ಅವುಗಳನ್ನೆಲ್ಲ ಶ್ರಮಪಟ್ಟು ಬಿಡಿಸಿಕೊಂಡು ಬಂದಿದ್ದಾರೆ. ಈಗಲೂ ಆರೋಪ ಮುಕ್ತರಾಗಿ ಹೊರಬರುತ್ತಾರೆ~ ಎನ್ನುತ್ತಾರೆ ಅಭಿಮಾನಿ ರಾಜಶೇಖರ್.

`ಕೇರಳಕ್ಕೆ ಹೋಗಿ ಈಚೆಗೆ ್ಙ 2 ಕೋಟಿ ವೆಚ್ಚದಲ್ಲಿ ವಾಜಪೇಯಿ ಯಾಗ ಮಾಡಿಸಿದರೂ ಪ್ರಯೋಜನವಾಗಲಿಲ್ಲ. ಸತ್ಯ ಯಾವಾಗಲೂ ಸ್ಪಷ್ಟ. ಅದನ್ನು ಬದಲಿಸಲು ಸಾಧ್ಯವಿಲ್ಲ. ಅವರು ಮಾಡಿದ ಪಾಪ, ಅವರೇ ಅನುಭವಿಸಬೇಕು~ ಎನ್ನುವುದು ವಿರೋಧ ಪಕ್ಷದ ಕಾರ್ಯಕರ್ತರೊಬ್ಬರ ಅನಿಸಿಕೆ.

`ಶಿವಮೊಗ್ಗದಲ್ಲಿ ಸಾಮಾನ್ಯ ನಾಗರಿಕ ಬದುಕಲು ಸಾಧ್ಯ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುಬಾರಿ ಬಾಡಿಗೆ, ಯಥೇಚ್ಚ ಬಿಸಿಲು, ಉಸಿರು ಕಟ್ಟಿಸುವ ದೂಳು, ವಾಹನ ದಟ್ಟಣೆ. ಇಂತಹ ಅಭಿವೃದ್ಧಿ ಶಿವಮೊಗ್ಗಕ್ಕೆ ಬೇಕೇ?~ ಎಂಬ ಪ್ರಶ್ನೆ ಯಡಿಯೂರಪ್ಪ ವಿರೋಧಿಗಳದ್ದು. ಆದರೆ, ಸಾರ್ವಜನಿಕರು ಯಡಿಯೂರಪ್ಪ ಅವರ ಈಗಿನ ಸ್ಥಿತಿ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.