ADVERTISEMENT

ಶಿಕಾರಿಪುರ ತಾಲ್ಲೂಕುಮಟ್ಟದ ಯುವಜನ ಮೇಳ ಮುಕ್ತಾಯ.ಸೋಲು-ಗೆಲುವು ಸಮವಾಗಿ ಸ್ವೀಕರಿಸಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 5:45 IST
Last Updated 7 ಮಾರ್ಚ್ 2011, 5:45 IST
ಶಿಕಾರಿಪುರ ತಾಲ್ಲೂಕುಮಟ್ಟದ ಯುವಜನ ಮೇಳ ಮುಕ್ತಾಯ.ಸೋಲು-ಗೆಲುವು ಸಮವಾಗಿ ಸ್ವೀಕರಿಸಿ
ಶಿಕಾರಿಪುರ ತಾಲ್ಲೂಕುಮಟ್ಟದ ಯುವಜನ ಮೇಳ ಮುಕ್ತಾಯ.ಸೋಲು-ಗೆಲುವು ಸಮವಾಗಿ ಸ್ವೀಕರಿಸಿ   

ಶಿಕಾರಿಪುರ: ನಾಡಿಗೆ ಬೆಳಕನ್ನು ಕೊಡುವುದಕ್ಕಾಗಿ ಕತ್ತಲೆಯ ಜೀವನ ನಡೆಸುತ್ತಿದ್ದ ಎರೆಕೊಪ್ಪ ಗ್ರಾಮದಲ್ಲಿ ಯುವಜನ ಮೇಳ ಯಶಸ್ವಿಯಾಗಿ ನಡೆಸಿರುವುದು ಹೆಮ್ಮೆಯ ವಿಷಯ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಈಸೂರು ಬಸವರಾಜ್ ಹೇಳಿದರು.ತಾಲ್ಲೂಕಿನ ಯರೇಕೊಪ್ಪ ಗ್ರಾಮದಲ್ಲಿ ಭಾನುವಾರ ನಡೆದ ತಾಲ್ಲೂಕುಮಟ್ಟದ ಯುವಜನ ಮೇಳದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖ್ಯರಸ್ತೆಯಿಂದ ನಾಲ್ಕು ಕಿಲೋ ಮೀಟರ್ ದೂರವಿರುವ ಕುಗ್ರಾಮದಲ್ಲಿ ಯುವಜನ ಮೇಳ ನಡೆಸುವುದು ಸುಲಭದ ಕೆಲಸವಲ್ಲ. ಇಲ್ಲಿನ ಬಸವೇಶ್ವರ ಯುವಕ ಸಂಘದ ಸದಸ್ಯರು ಸ್ವಯಂಪ್ರೇರಣೆಯಿಂದ ಯುವಜನ ಮೇಳ ನಡೆಸಲು ಮುಂದಾಗಿ ಯಶಸ್ವಿಯಾಗಿ ನಡೆಸಿರುವುದು ಇಲ್ಲಿನ ಜನರ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಆಧುನಿಕ ಯುಗದ ಪ್ರಭಾವದಿಂದಾಗಿ ಯುವಕ, ಯುವತಿ ಮಂಡಳಿಗಳು ಸಾಂಸ್ಕೃತಿಕ ಮೇಳದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿಲ್ಲ. ಇದಲ್ಲದೇ ಸರ್ಕಾರವೂ ಯುವಜನ ಮೇಳಗಳಿಗೆ ಹೆಚ್ಚಿನ ಅನುದಾನವನ್ನೂ ನೀಡುತ್ತಿಲ್ಲ. ಇಂತಹ ಸ್ಥಿತಿಯ ಬದಲಾವಣೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ನೀಡಬೇಕಿದೆ ಎಂದರು.ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಹನುಮಂತಪ್ಪ ಮಾತನಾಡಿ, ಗ್ರಾಮೀಣ ಕ್ರೀಡೆಗಳ ಉಳಿವಿಗಾಗಿ ಯುವಜನ ಮೇಳಗಳು ನಡೆಯುವುದು ಅಗತ್ಯವಾಗಿದೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ತಂಡಗಳು ಸೋಲು-ಗೆಲುವಿನ ಬಗ್ಗೆ ಚಿಂತಿಸದೇ ಸಮಾನ ಮನಸ್ಸಿನೊಂದಿಗೆ ಪಾಲ್ಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಅರಶಿಣಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀರೇಂದ್ರ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಹನುಮಂತಪ್ಪ, ತಾ.ಪಂ. ಸದಸ್ಯೆ ಕರಿಬಸಮ್ಮ, ದೇವಸ್ಥಾನ ಸಮಿತಿಯ ಜಗದೀಶ್, ಬಸವರಾಜಪ್ಪಗೌಡ್ರು, ಯುವಜನ ಕ್ರೀಡಾ ಅಧಿಕಾರಿ ಎ.ಜಿ. ಗಣೇಶಪ್ಪ ಇತರರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ರೇಣುಕೇಶ್ ಪ್ರಾರ್ಥಿಸಿದರು. ಹನೀಫ್ ಸ್ವಾಗತಿಸಿದರು. ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.