ADVERTISEMENT

ಶಿಕಾರಿಪುರ: ಮೊಸಳೆ ಸೆರೆಗೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 6:10 IST
Last Updated 8 ಏಪ್ರಿಲ್ 2013, 6:10 IST

ಶಿಕಾರಿಪುರ: ಹಳ್ಳದ ನೀರಿನಲ್ಲಿ ಮೊಸಳೆ ಕಾಣಿಸಿಕೊಂಡಿದ್ದರಿಂದ ಕೆಲ ಸಮಯ ಮೊಸಳೆ ನೋಡಲು ಜನರು ಕುತೂಹಲದಿಂದ ಜಮಾಯಿಸಿದ್ದರು.

ಪಟ್ಟಣದ ಕೋಟೆ ಪ್ರದೇಶದ (ಇಂಡಿಪೆಂಡೆಟ್ ಪಿಯು ಕಾಲೇಜು) ಹಿಂಭಾಗದ ಹಳ್ಳದಲ್ಲಿ ಭಾನುವಾರ ಮೊಸಳೆ ಪ್ರತ್ಯಕ್ಷವಾಗಿದ್ದು, ಮೊಸಳೆ ನೋಡಲು ಜನ ಜಮಾಯಿಸಿದ್ದರು.

ಹಲವು ದಿನಗಳಿಂದ ಮೊಸಳೆ ಕಾಣಿಸಿ ಕೊಳ್ಳುತ್ತಿದೆ ಎಂಬ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಬೆಳಿಗ್ಗೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ ವೇಳೆ ಮೊಸಳೆ ಪ್ರತ್ಯಕ್ಷವಾಗಿರಲಿಲ್ಲ.

ಸಂಜೆ 4.30ಕ್ಕೆ  ಬಿಸಿಲು ಕಾಯಿಸಲು ಕೆಲ ಸಮಯ ಹಳ್ಳ ಪಕ್ಕದ ದಡದಲ್ಲಿ ಮೊಸಳೆ ಆಗಮಿಸಿತು. ಮೊಸಳೆ ಹಿಡಿಯಲು ಬೆಸ್ತರು ದೋಣಿ ಸಮೇತ ಬಲೆಯನ್ನು ಹಾಕಲು ತಯಾರಿ ನಡೆಸುತ್ತಿದ್ದಂತೆ ಜನಸಮೂಹ ಹೆಚ್ಚಾಯಿತು. ಜನಸಮೂಹ ಸೇರುತ್ತಿದ್ದಂತೆ ಮೊಸಳೆ ನೀರಿಗೆ ಇಳಿಯಿತು.

ಸುಮಾರು ದಿನಗಳಿಂದ ಈ ನೀರಿನಲ್ಲಿ ಮೊಸಳೆ ಇದ್ದು, ನಾವು ಸಾಕುತ್ತಿರುವ ಮೀನುಗಳೇ ಮೊಸಳೆಗೆ ಆಹಾರವಾಗಿವೆ ಎಂದು ಈ ಹಳ್ಳದಲ್ಲಿ ಮೀನುಸಾಕಣೆ ಮಾಡುತ್ತಿರುವ ಗುತ್ತಿಗೆದಾರ ಹುಲ್ಮಾರ್ ರಾಮು ಹೇಳಿದರು.

ಕಾರ್ಯಾಚರಣೆ ವೇಳೆ ಮೊಸಳೆ ದೊರೆಯದ ಕಾರಣ ಸ್ಥಳದಿಂದ ಸಂಜೆ ನಿರ್ಗಮಿಸಿದರು. ಜೆ.ಎಸ್. ಮಂಜು, ಮಾಜಿ ರಾಘು, ನಂಜುಡಿ, ಡೈರಿ ಮನು, ವಿಠಲ, ಮಂಜು, ಶ್ಯಾಮ, ಬೆಸ್ತರಾದ ನಟರಾಜ, ಗೋಪಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.