ADVERTISEMENT

ಶ್ರೀರಂಗರಿಂದ ರಂಗ ಶಿಕ್ಷಣಕ್ಕೆ ಸ್ಪಷ್ಟ ರೂಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:00 IST
Last Updated 8 ಫೆಬ್ರುವರಿ 2012, 8:00 IST

ಸಾಗರ: ರಂಗ ಶಿಕ್ಷಣದ ಸ್ವರೂಪವನ್ನು ಸ್ಪಷ್ಟಗೊಳಿಸಿ ಅದಕ್ಕೊಂದು ದಿಕ್ಕು ತೋರಿಸಿದ ಹೆಗ್ಗಳಿಕೆ ನಾಟಕಕಾರ ಶ್ರೀರಂಗರಿಗೆ ಸಲ್ಲುತ್ತದೆ ಎಂದು ಸಾಹಿತಿ ಡಾ.ನಾ. ಡಿಸೋಜ ಹೇಳಿದರು.

ಇಲ್ಲಿನ ಉದಯ ಕಲಾವಿದರು, ಹಂಪಿ ಕನ್ನಡ ವಿವಿಯ ಶ್ರೀರಂಗರ ದತ್ತಿ ನಿಧಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಭಾನುವಾರ ಏರ್ಪಡಿಸಿದ್ದ ನಾಟಕಕಾರ ಶ್ರೀರಂಗರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಆಧುನಿಕತೆ ಹಾಗೂ ಪರಂಪರೆಯ ನಡುವಣ ಸಂಘರ್ಷದ ಫಲವಾಗಿ ಶ್ರೀರಂಗರ ಅನೇಕ ಕೃತಿಗಳು ಹುಟ್ಟಿವೆ. ವೃತ್ತಿ ರಂಗಭೂಮಿ ಸಿನೆಮಾದ ಪೈಪೋಟಿ ಎದುರಿಸಲಾರದೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ಆದಾಗ ಆಧುನಿಕ ವಿಚಾರಗಳ ಮೂಲಕ ಹೊಸ ಬಗೆಯ ರಂಗಭೂಮಿಯನ್ನು ಕಟ್ಟಿ ಬೆಳೆಸಿದ್ದು ಶ್ರೀರಂಗರ ಸಾಧನೆ ಎಂದರು.

ಮುಖ್ಯ ಅತಿಥಿಯಾಗಿದ್ದ ರಂಗಕರ್ಮಿ ಕಾಗೋಡು ಅಣ್ಣಪ್ಪ ಮಾತನಾಡಿ, ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ್ದರೂ ಶ್ರೀರಂಗರು ತಮ್ಮ ನಾಟಕಗಳಲ್ಲಿ ಪ್ರಗತಿಪರ ವಿಚಾರಧಾರೆ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದು ಗಮನಾರ್ಹ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜೆ. ನರಸಿಂಹಮೂರ್ತಿ ಮಾತನಾಡಿದರು.

ಉದಯ ಕಲಾವಿದರು ಸಂಸ್ಥೆಯ ಅಧ್ಯಕ್ಷ ಡಾ.ಗುರುರಾವ್ ಬಾಪಟ್ ಹಾಜರಿದ್ದರು. ಎಂ.ಪಿ. ಲಕ್ಷ್ಮಿನಾರಾಯಣ ಸ್ವಾಗತಿಸಿದರು. ಬಿ.ಆರ್. ವಿಜಯವಾಮನ್ ನಿರೂಪಿಸಿದರು. ಶಿವಮೊಗ್ಗದ ಸಹ್ಯಾದ್ರಿ ರಂಗ ತರಂಗ ತಂಡ ಕಾಂತೇಶ ಕದರ ಮಂಡಲಗಿ ಅವರ ನಿರ್ದೇಶಕನದಲ್ಲಿ ಶ್ರೀರಂಗರ `ಶೋಕ ಚಕ್ರ~ ನಾಟಕವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.