ADVERTISEMENT

ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಜನರು

ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ; ಶಿಕಾರಿಪುರದ ಮದಗದ ಕೆರೆಗೆ ಪೂಜೆ ಸಲ್ಲಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 11:19 IST
Last Updated 16 ಜನವರಿ 2016, 11:19 IST
ಶಿಕಾರಿಪುರ ತಾಲ್ಲೂಕಿನ ಗಡಿ ಭಾಗದಲ್ಲಿ ಇರುವ ಹಾಗೂ ಜನಪದ ಹಿನ್ನೆಲೆ ಹೊಂದಿರುವ ಮದಗದ ಕೆರೆ ದಡದಲ್ಲಿ ಶುಕ್ರವಾರ ಸಂಕ್ರಾಂತಿ ಹಬ್ಬ ಆಚರಿಸಲು ಜಮಾಯಿಸಿದ್ದ ಜನಸಮೂಹ
ಶಿಕಾರಿಪುರ ತಾಲ್ಲೂಕಿನ ಗಡಿ ಭಾಗದಲ್ಲಿ ಇರುವ ಹಾಗೂ ಜನಪದ ಹಿನ್ನೆಲೆ ಹೊಂದಿರುವ ಮದಗದ ಕೆರೆ ದಡದಲ್ಲಿ ಶುಕ್ರವಾರ ಸಂಕ್ರಾಂತಿ ಹಬ್ಬ ಆಚರಿಸಲು ಜಮಾಯಿಸಿದ್ದ ಜನಸಮೂಹ   

ಶಿವಮೊಗ್ಗ: ಸೂರ್ಯ ತನ್ನ ಪಥ ಬದಲಿಸಿದ ಕ್ಷಣ, ಗ್ರಾಮೀಣ ಭಾಗದ ಸುಗ್ಗಿಯ ಹಬ್ಬ ಸಂಕ್ರಾಂತಿಯನ್ನು ಶುಕ್ರವಾರ ಜಿಲ್ಲೆಯ ಎಲ್ಲೆಡೆ ಜನರು ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆ ಹಾಗೂ ಸಂಜೆ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಹಿಳೆಯರು ಬಣ್ಣದ ಸೂರೆಯುಟ್ಟು ಮನೆ, ಅಂಗಳದಲ್ಲಿ ಚಿತ್ತಾರದ ರಂಗೋಲಿ ಬಿಡಿಸಿ, ಸಂಭ್ರಮಿಸಿದರು. ನಗರ, ಪಟ್ಟಣಗಳಲ್ಲಿ ಸಂಜೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ, ನಂತರ ಮನೆ ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು–ಬೆಲ್ಲದ ಅಚ್ಚು ಹಂಚಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಗ್ರಾಮೀಣ ಪ್ರದೇಶಗಳಲ್ಲಿ ಹಸು–ಕರಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದವಸ, ಧಾನ್ಯದ ರಾಶಿಯ ಜತೆಗೆ, ಕೃಷಿ ಪರಿಕರಗಳನ್ನೂ ಪೂಜಿಸುವ ಮೂಲಕ ಸುಗ್ಗಿಯ ಹಬ್ಬ ಆಚರಿಸಿದರು. ಕೆಲವೆಡೆ ಕಿಚ್ಚು ಹಾಯಿಸುವ ಮೂಲಕ ಮಾಗಿಯ ಚಳಿಯಲ್ಲೂ ಮೈ ಬೆಚ್ಚಾಗಾಗಿಸಿಕೊಂಡರು.

ಚುಮುಚುಮು ಚಳಿಯ
ನಡುವೆ ಸಂಭ್ರಮಿಸುವ ಈ ಹಬ್ಬದಲ್ಲಿ ಎಳ್ಳು, ಬೆಲ್ಲ, ಕಬ್ಬು, ತರಕಾರಿ ಬೆಲೆ ಗಗನಕ್ಕೇರಿದ್ದ ಪರಿಣಾಮ ಖರೀದಿ ವೇಳೆ ಸಾಕಷ್ಟು ಚೌಕಾಸಿ ನಡೆಸುತ್ತಿದ್ದ ದೃಶ್ಯ ಕಂಡುಬಂತು.

ಕೆರೆಗೆ ಪೂಜೆ
ಶಿಕಾರಿಪುರ:
ಜನಪದ ಹಿನ್ನಲೆ ಹೊಂದಿದ ಮದಗದ ಕೆರೆ ಹಾಗೂ ಕೆಂಚಮ್ಮ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಶುಕ್ರವಾರ ತಾಲ್ಲೂಕಿನ ಜನತೆ ಸಂಭ್ರಮದಿಂದ ಆಚರಿಸಿದರು. ತಾಲ್ಲೂಕಿನ ಗಡಿ ಭಾಗದ ಕವಾಸಪುರ ಗ್ರಾಮ ಸಮೀಪವಿರುವ ಮದಗದ ಕೆರೆಗೆ ಶಿಕಾರಿಪುರ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಬಹುತೇಕ ಜನರು ಕುಟುಂಬ ಸದಸ್ಯರ ಜತೆ ಟ್ರ್ಯಾಕ್ಟರ್, ಎತ್ತಿನಬಂಡಿ, ದ್ವಿಚಕ್ರ ವಾಹನ, ಬಸ್ ಸೇರಿದಂತೆ ಹಲವು ವಾಹನಗಳ ಮೂಲಕ ಭೇಟಿ ನೀಡಿ ಮದಗದ ಕೆರೆಯಲ್ಲಿ ಸ್ನಾನ ಮಾಡಿ ಕೆಂಚಮ್ಮ ದೇವಿ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸಿದರು.

ಮಹಿಳೆಯರು ತಮ್ಮ ಕುಟುಂಬ ಸದಸ್ಯರ ಜತೆ ಕೆರೆ ದಡದಲ್ಲಿ ಕುಂಭಕ್ಕೆ ಕುಪ್ಪಸ ಬಟ್ಟೆ ತೊಡಿಸಿ ಹಾಗೂ ಹೊಳಿಗೆ ಸೇರಿದಂತೆ ವಿವಿಧ ತಿನಿಸುಗಳ ನೈವೆದ್ಯ ಇಟ್ಟು ಕೆರೆಗೆ ಪೂಜೆ ಸಲ್ಲಿಸಿಸುತ್ತಿದ್ದ ಹಾಗೂ ಯುವಕ, ಯುವತಿಯರು ಹಾಗೂ ಪುಟಾಣಿ ಮಕ್ಕಳು ತೆಪ್ಪಗಳಲ್ಲಿ ಕುಳಿತು ಕೆರೆಯಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡುಬಂದಿತು.

ಶಿಕಾರಿಪುರ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕು ಎರಡು ಗಡಿ ಭಾಗಕ್ಕೆ ಈ ಮದಗದ ಕೆರೆ ಹೊಂದಿಕೊಂಡಿರುವ ಹಿನ್ನೆಲೆ, ಪ್ರತಿ ವರ್ಷ ಸಂಕ್ರಾಂತಿ ದಿನ ಹಾವೇರಿ ಜಿಲ್ಲೆ ಜನತೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಕೆರೆ ಹಾಗೂ ಕೆಂಚಮ್ಮ ದೇವಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಹಲವು ವರ್ಷಗಳಿಂದ ಆಚರಣೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.