ADVERTISEMENT

`ಸಂಸ್ಕೃತಿ ಬದಲಿಸಿದ್ದು ಸುಬ್ಬಣ್ಣ ಸಾಧನೆ'

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 9:44 IST
Last Updated 17 ಜುಲೈ 2013, 9:44 IST

ಸಾಗರ: ತಮ್ಮ ವಿಶಿಷ್ಟ ಕ್ರಿಯಾಶೀಲತೆಯ ಮೂಲಕ ಒಂದು ಪ್ರದೇಶದ ಸಂಸ್ಕೃತಿಯನ್ನೆ ಬದಲಿಸಿದ್ದು ಕೆ.ವಿ.ಸುಬ್ಬಣ್ಣ ಅವರ ಮಹತ್ವದ ಸಾಧನೆಯಾಗಿದೆ ಎಂದು ಸುಬ್ಬಣ್ಣ ಅವರ ಒಡನಾಡಿ ತೀರ್ಥಹಳ್ಳಿಯ ಗಂಗಾಧರ್ ಹೇಳಿದರು.

ಇಲ್ಲಿಗೆ ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆ.ವಿ.ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಹಿಡಿದ ಕೆಲಸವನ್ನು ಆದಷ್ಟು ಶೀಘ್ರವಾಗಿ ಮತ್ತು ಅಚ್ಚುಕಟ್ಟಾಗಿ ಮುಗಿಸಬೇಕು ಎಂಬ ತುಡಿತವನ್ನು ಸುಬ್ಬಣ್ಣ ಅವರಲ್ಲಿ ಸದಾ ಕಾಣಬಹುದಿತ್ತು ಎಂದರು.

`ಹೆಗ್ಗೋಡು ಹಾಗೂ ನೀನಾಸಂನ ಪ್ರತಿ ಚಟುವಟಿಕೆಗಳ ಹಿಂದೆ ಸುಬ್ಬಣ್ಣ ಅವರ ಇರುವಿಕೆಯನ್ನ ಗುರುತಿಸಬಹುದು. ಭೌತಿಕವಾಗಿ ಅವರು ನಮ್ಮ ಜೊತೆ ಇಲ್ಲದೆ ಇದ್ದರೂ ನೀನಾಸಂನ ಮೂಲಕ ಇಂದಿಗೂ ಜೀವಂತವಾಗಿದ್ದಾರೆ' ಎಂದು ಅವರು  ಹೇಳಿದರು.

`ಬದುಕಿನ ಸಣ್ಣಪುಟ್ಟ ಸಂಗತಿಗಳನ್ನು ಅಲಕ್ಷಿಸದೇ ಸೂಕ್ಷ್ಮವಾಗಿ ವಿಶ್ಲೇಷಿಸುವ ಗುಣವನ್ನು ಸುಬ್ಬಣ್ಣ ಹೊಂದಿದ್ದರು. ಅವರ ಈ ದೃಷ್ಟಿಕೋನವೇ ರಂಗ ಭೂಮಿ, ಸಾಹಿತ್ಯ ಸೇರಿದಂತೆ ಹಲವು ರಚನಾತ್ಮಕ ಚಟುವಟಿಕೆಗಳಿಗೆ ದಾರಿಯಾಯಿತು' ಎಂದು ಅಭಿಪ್ರಾಯಪಟ್ಟರು.

ಲೇಖಕ ಡಾ.ಎಂ.ಎಸ್.ಶ್ರೀರಾಮ್ ಮಾತನಾಡಿ ನಿಷ್ಠುರತೆ, ವಿನಯ, ವಿಶಿಷ್ಟ ಒಳನೋಟ, ಅಂತಕರಣವನ್ನು ತಟ್ಟುವ ಅನುಭವ ದ್ರವ್ಯ ಸುಬ್ಬಣ್ಣ ಅವರ ಕೃತಿ ಹಾಗೂ ಚಿಂತನೆಗಳನ್ನು ಜೀವಂತ ವಾಗಿಟ್ಟಿವೆ ಎಂದು ಹೇಳಿದರು.

ನೀನಾಸಂನ ಎಚ್.ವಿ.ಚಂದ್ರಶೇಖರ್, ಕೆ.ವಿ.ಅಕ್ಷರ, ಟಿ.ಪಿ.ಅಶೋಕ್, ಲೇಖಕ ಡಿ.ಎಸ್.ನಾಗಭೂಷಣ್, ಕವಯತ್ರಿ ಸವಿತಾ ನಾಗಭೂಷಣ್, ರಂಗಕರ್ಮಿ ಪ್ರಕಾಶ್ ಬೆಳವಾಡಿ, ರೈತ ಮುಖಂಡ ಕಡಿದಾಳು ಶಾಮಣ್ಣ, ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಹಾಜರಿದ್ದರು .

ಪ್ರೇಮ ಪತ್ರ ಸ್ಪರ್ಧೆ ಮತ್ತು ಸುಬ್ಬಣ್ಣ

ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಡೆದ ಹಲವು ಸ್ವಾರಸ್ಯಕರ ಘಟನೆಗಳನ್ನು ಸುಬ್ಬಣ್ಣ ಅವರ ಒಡನಾಡಿ ಗಂಗಾಧರ್ ನೆನಪಿಸಿಕೊಂಡರು.

ಪ್ರತಿ ವರ್ಷ ಹಾಸ್ಟೆಲ್ ದಿನಾಚರಣೆ ಅಂಗವಾಗಿ ಏರ್ಪಡಿಸುತ್ತಿದ್ದ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಕೆ.ವಿ.ಸುಬ್ಬಣ್ಣ ಅವರಿಗೆ ಪ್ರಥಮ ಬಹುಮಾನ ಬರುತ್ತಿತ್ತಂತೆ. ಒಂದು ವರ್ಷ ಇದನ್ನು ಗಮನಿಸಿದ ಯು.ಆರ್.ಅನಂತಮೂರ್ತಿ , ಯಾವುದಾದರೂ ಹುಡುಗಿ ಈ ಪ್ರೇಮ ಪತ್ರ ಓದಿ ಸುಬ್ಬಣ್ಣ ಅವರನ್ನು ಪ್ರೀತಿಸಿದರೆ ಮಾತ್ರ ನೀವು ಬಹುಮಾನ ನೀಡಿದ್ದು ಸಾರ್ಥಕ ಎಂದು ಪ್ರತಿಕ್ರಿಯಿಸಿದ್ದರಂತೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.