ADVERTISEMENT

ಸಮಾನತೆ ಮನಃಸ್ಥಿತಿ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 6:20 IST
Last Updated 9 ಮಾರ್ಚ್ 2012, 6:20 IST

ಭದ್ರಾವತಿ: ಇಂದಿನ ದಿನದಲ್ಲಿ ಪುರುಷನಿಗೆ ಸ್ತ್ರೀ ಸಮಾನಳು ಎಂದು ಹೇಳುವ ಅಗತ್ಯವಿಲ್ಲ. ಅದಕ್ಕೆ ಬದಲಾಗಿ ಸಮಾನತೆ ಕಾಣುವ ಮನಃಸ್ಥಿತಿ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ನ್ಯಾಯಾಧೀಶ ಗಿರೀಶ್ ಕೆ. ಭಟ್ ಕರೆ ನೀಡಿದರು.

ಇಲ್ಲಿನ ಬಸವೇಶ್ವರ ಸಭಾ ಭವನದಲ್ಲಿ ಗುರುವಾರ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ವಕೀಲರ ಸಂಘದ ಅಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳಾ ರಕ್ಷಣೆಗಾಗಿ ಹಲವು ಕಾಯ್ದೆ, ಕಾನೂನುಗಳು ಜಾರಿಯಲ್ಲಿವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೊದಲು ಅವುಗಳ ಸಂಪೂರ್ಣ ಜ್ಞಾನ ಸಂಪಾದನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಿ ಎಂದು ಮನವಿ ಮಾಡಿದರು.

ನ್ಯಾಯಾಧೀಶರಾದ ದ್ರಾಕ್ಷಾಯಣಿ ಮಾತನಾಡಿ, ಕಾನೂನುಗಳು ಇವೆ ಎಂದು ಭಾವಿಸಿ ಅವುಗಳ ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ. ಹಾಗೆ ಮಾಡಿದಲ್ಲಿ ನೈಜ ಹಕ್ಕುದಾರರು ಸಹ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ನ್ಯಾಯಾಧೀಶರಾದ ಶಾಂತವೀರ ಎಸ್. ಶಿವಪ್ಪ, ವಕೀಲರ ಸಂಘದ ಅಧ್ಯಕ್ಷ ಎ.ಬಿ. ನಂಜಪ್ಪ, ತಾ.ಪಂ. ಅಧ್ಯಕ್ಷ ಹಾಲಪ್ಪ, ಉಪಾಧ್ಯಕ್ಷ ಶಾಂತಕುಮಾರ್, ಭುವನೇಶ್, ಮಂಜಪ್ಪ, ಚಂದ್ರಪ್ಪ, ಸೋಮಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.