ಶಿವಮೊಗ್ಗ: ಇದು ಯೋಗಾ–ಯೋಗವೇ ಸರಿ. ಸಹಪಾಠಿಗಳಿಬ್ಬರಿಗೂ ಒಂದೇ ಪ್ರಶಸ್ತಿ ನಾಲ್ಕು ವರ್ಷ ಹಿಂದೆ–ಮುಂದೆ ಸಿಕ್ಕಿದೆ. ಇವರಿಬ್ಬರೂ ಅಕ್ಕ–ಪಕ್ಕದ ಊರಿನವರು; ಇಬ್ಬರೂ ಸಂಬಂಧಿಕರು ಎನ್ನುವುದು ಅಪರೂಪದಲ್ಲಿ ಅಪರೂಪ.
ರಾಜ್ಯ ಸರ್ಕಾರ ಗಮಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ‘ಕುಮಾರವ್ಯಾಸ ಪ್ರಶಸ್ತಿ’ ಈ ಬಾರಿ ಶಿವಮೊಗ್ಗ ನಗರ ಸಮೀಪದ ಗಮಕ ವ್ಯಾಖ್ಯಾನಕಾರ ಮತ್ತೂರಿನ ಮಾರ್ಕಂಡೇಯ ಅವಧಾನಿ ಅವರಿಗೆ ಲಭಿಸಿದೆ. ನಾಲ್ಕು ವರ್ಷದ ಹಿಂದೆ ಮಾರ್ಕಂಡೇಯ ಅವಧಾನಿ ಅವರ ಸಹಪಾಠಿಯಾಗಿರುವ ಪಕ್ಕದ ಹಳ್ಳಿ ಹೊಸಹಳ್ಳಿಯ ವಾಚನಕಾರ ಎಚ್.ಆರ್.ಕೇಶವಮೂರ್ತಿ ಅವರಿಗೆ ಸರ್ಕಾರದ ಮೊಟ್ಟ–ಮೊದಲ ‘ಕುಮಾರವ್ಯಾಸ ಪ್ರಶಸ್ತಿ’ ಲಭಿಸಿತ್ತು.
ಎಚ್.ಆರ್.ಕೇಶವಮೂರ್ತಿ–ಮಾರ್ಕಂಡೇಯ ಅವಧಾನಿಗಳು ಜೋಡಿಹಕ್ಕಿಗಳಂತೆ. ಗಮಕ ವಾಚನ–ವ್ಯಾಖ್ಯಾನದ ಮೂಲಕ ಪಸರಿಸಿದ ಕಂಪು ಕನ್ನಡ ನಾಡಿನ ತುಂಬೆಲ್ಲಾ ಹಬ್ಬಿದೆ. ಲಕ್ಷ್ಮೀಶನ ‘ಜೈಮಿನಿ ಭಾರತ’ ಇವರಿಬ್ಬರ ಬಾಯಲ್ಲಿ ಅದೆಷ್ಟು ಸಲ ಜಲಧಾರೆಯಂತೆ ಹರಿದಿದೆಯೋ ಲೆಕ್ಕ ಇಲ್ಲ.
ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಸೋಮವಾರ ಹೊಸಹಳ್ಳಿಗೆ ಹೋದಾಗ, ಸಂಜೆಯ ಗಮಕ ವಾಚನಕ್ಕೆ ಮಾರ್ಕಂಡೇಯ ಅವಧಾನಿ –ಎಚ್.ಆರ್.ಕೇಶವಮೂರ್ತಿ ಸಿದ್ಧ ರಾಗುತ್ತಿದ್ದರು. ಮಧ್ಯೆ–ಮಧ್ಯೆ ಗ್ರಾಮಸ್ಥರು ಬಂದು ಅಭಿನಂದನೆ ಹೇಳಿ, ಕಾಲಿಗೆ ಎರಗುತ್ತಿದ್ದರು. ಹೊಸಹಳ್ಳಿಯಲ್ಲಿ ಜೋಡಿ ಯಾಗಿಯೇ ಅವರಿಬ್ಬರೂ ಮಾತಿಗೆ ಸಿಕ್ಕರು.
‘ಪ್ರಶಸ್ತಿ ಘೋಷಣೆಯಾಗಿದ್ದು ಖುಷಿಯಾಗಿದೆ. ಅಪಾತ್ರರಿಗೆ ಪ್ರಶಸ್ತಿ ಕೊಟ್ಟುಬಿಟ್ಟರೇನೋ ಅನ್ನಿಸುತ್ತಿದೆ’ ಎಂದು ವಿನಯದಿಂದಲೇ ಹೇಳಿದರು ಮಾರ್ಕಂಡೇಯ ಅವಧಾನಿಗಳು.
‘ಸ್ನಾನ ಮಾಡಿದ ಒದ್ದೆ ಬಟ್ಟೆಯಲ್ಲಿ ಕುಳಿತು ಯಾವುದೇ ಫಲಾಪೇಕ್ಷೆ ಇಲ್ಲದೆ ಕುಮಾರವ್ಯಾಸ ಕಾವ್ಯ ರಚಿಸಿದ. ಆತನ ಕಾವ್ಯವನ್ನು ಈ ಹಿಂದೆ ಓದಿದ ರಾಮಾಶಾಸ್ತ್ರಿ, ಲಕ್ಷ್ಮೀಶ್ವರ ಶಾಸ್ತ್ರಿಗಳನ್ನು ಜನ ಆಗ ಗುರುತಿಸಲಿಲ್ಲ. ಈಗ ನಾವು ಪ್ರಶಸ್ತಿ ಹೆಸರಿನಲ್ಲಿ ಹಣ, ಕೀರ್ತಿ ಪಡೆಯುತ್ತಿದ್ದೇವೆ. ಕುಮಾರವ್ಯಾಸನ ಅನುಗ್ರಹ, ಶಾಸ್ತ್ರಿಗಳ ಅನುಭವದ ಮಾರ್ಗದಿಂದಾಗಿ ನಮಗೆ ಪ್ರಶಸ್ತಿ ಬಂದಿದೆ’ ಎಂದು ಅವರು ಸ್ಮರಿಸಿದರು.
ಗಮಕ ಎನ್ನುವುದು ಕಲೆಗಾಗಿ ಕಲೆ, ಹೊಟ್ಟೆಪಾಡಿಗೆ ಅಲ್ಲವಾದ್ದರಿಂದ ಈ ಕ್ಷೇತ್ರಕ್ಕೆ ಯುವಜನಾಂಗವನ್ನು ಕರೆದು ತರುವುದು ಕಷ್ಟದ ಕೆಲಸ. ಆದರೂ ಪ್ರಯತ್ನ ಬಿಟ್ಟಿಲ್ಲ. ಕೆಲವರು ಬರುತ್ತಿದ್ದಾರೆ; ಆದರೆ, ಉತ್ಸಾಹ ಕಾಣುತ್ತಿಲ್ಲ. ಇದಕ್ಕೆ ಈಗಿನ ವಿದ್ಯಾಭ್ಯಾಸವೇ ಕಾರಣ’ ಎನ್ನುತ್ತಾರೆ ಅವಧಾನಿಗಳು.
ಟಿ.ವಿ. ಬಂದ ಮೇಲೆ ಜನ ಸಂಗೀತ, ರಾಗಗಳನ್ನು ಅಲ್ಲಿಯೇ ಕೇಳುತ್ತಾರೆ; ಅಷ್ಟಕ್ಕೂ ತೃಪ್ತರಾಗುತ್ತಾರೆ. ಗಮಕ ವಾಚನ–ವ್ಯಾಖ್ಯಾನ ಕೇಳುವುದರಿಂದ ಸಿಗುವ ಸುಖದ ಅನುಭವ ಜನರಿಲ್ಲ. ಅದು ಪರಿಚಯವಾಗುವ ಕೆಲಸ ಆಗಬೇಕು’ ಎಂದು ಸಲಹೆ ನೀಡುತ್ತಾರೆ ಅವರು.
ಶಾಲೆಯ ಪಠ್ಯಪುಸ್ತಕದಲ್ಲಿ ಗಮಕ ಕಲೆಯನ್ನು ಅಳವಡಿಸಬೇಕು.
5ರಿಂದ 10ನೇ ತರಗತಿ ಮಕ್ಕಳಿಗೆ ಸಣ್ಣ–ಪುಟ್ಟ ಪದ್ಯಗಳನ್ನು ಪಠ್ಯದಲ್ಲಿ ಇಡಬೇಕು. ದೊಡ್ಡವರಿಗೆ ಒಂದು ಸಂಧಿಭಾಗ ಇಡಬೇಕು. ಅವುಗಳ ಅರ್ಥವನ್ನು ರಾಗವಾಗಿ ಹೇಳಿಕೊಡಬೇಕು ಎನ್ನುತ್ತಾರೆ ಅವರು.
ಹೊಸಹಳ್ಳಿಯಲ್ಲಿ ಗಮಕಭವನ ನಿರ್ಮಿಸಿದ್ದು, ಅಲ್ಲಿ ಗಮಕ ವಾಚನ–ವ್ಯಾಖ್ಯಾನ ನಿರಂತರವಾಗಿ ನಡೆದಿದೆ. ಇದೇ ರೀತಿ ಸರ್ಕಾರ ಜಿಲ್ಲೆಗೊಂದು ಗಮಕ ಭವನ ನಿರ್ಮಿಸಬೇಕು’ ಎಂಬ ಸಲಹೆ ಅವರದ್ದು.
‘ಕುಮಾರವ್ಯಾಸನ ಹೆಸರಿನ ಪ್ರಥಮ ಪ್ರಶಸ್ತಿ ಸ್ವೀಕಾರದ ಸಂದರ್ಭದಲ್ಲಿ ನನ್ನ ಭಾಷಣದಲ್ಲಿ ಕುಮಾರವ್ಯಾಸ ಗದಗಿನ ಕೋಳಿವಾಡದ ಮನೆಯನ್ನು ಸರ್ಕಾರ ಸ್ಮಾರಕ ಮಾಡಬೇಕು ಎಂದು ಹೇಳಿದ್ದೆ. ಆದರೆ, ಇಷ್ಟು ವರ್ಷಗಳಾದರೂ ಅದು ಅಭಿವೃದ್ಧಿ ಕಂಡಿಲ್ಲ. ಕುಮಾರವ್ಯಾಸ ಭಾರತದ ತಾಳೆಗರಿ ಮೊದಲು ಪುಟ 12 ಚೂರಾಗಿದೆ.
ಅದನ್ನು ಸಂರಕ್ಷಿಸುವ ಕ್ರಮದ ಬಗ್ಗೆ ಯಾರೂ ಚಿಂತನೆ ಮಾಡುತ್ತಿಲ್ಲ’ ಎಂದು ಅಲ್ಲಿಯೇ ಇದ್ದ ಎಚ್.ಆರ್. ಕೇಶವಮೂರ್ತಿ ಹೇಳಿದರು.
‘ನನಗಿಂತ ಮೊದಲು ಈತನಿಗೆ ಪ್ರಶಸ್ತಿ ಸಿಗಬೇಕಿತ್ತು. ಆದರೆ, ವಾಚನಕಾರರಿಗೆ ಮೊದಲು ನೀಡಬೇಕೆಂಬ ನಿಯಮದ ಕಾರಣ ನನಗೆ ಸಿಕ್ಕಿತು’ ಎಂದು ಅವರು ವಿನಯದಿಂದ ಹೇಳಿದರು.
‘ನಮ್ಮೂರಿನ ಈ ಇಬ್ಬರು ಗಮಕ ಕಲೆಯನ್ನು ದೇಶ–ವಿದೇಶಕ್ಕೆ ತಲುಪಿಸಿದರು. ಅವರಿಬ್ಬರಿಗೂ ಕುಮಾರವ್ಯಾಸನ ಹೆಸರಿನ ಪ್ರಶಸ್ತಿ ಸಿಕ್ಕಿರುವುದು ಊರಿಗೆ ಹೆಮ್ಮೆ. ಇವರಿಬ್ಬರೂ ನಮ್ಮೂರಿನ ಮುಕುಟ ಮಣಿಗಳು’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥ ಡಾ.ಸತ್ಯನಾರಾಯಣಶಾಸ್ತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.