ADVERTISEMENT

ಸಾಕಿದಾನೆ ಕೊಂದ ಕಾಡಾನೆಗಳು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2013, 19:59 IST
Last Updated 17 ಫೆಬ್ರುವರಿ 2013, 19:59 IST
ಶಿವಮೊಗ್ಗ ತಾಲ್ಲೂಕಿನ ಸಕ್ರೆಬೈಲು ಅರಣ್ಯ ಪ್ರದೇಶದಲ್ಲಿ ಶನಿವಾರ ಆನೆ ಬಿಡಾರದ ಆನೆ ರಾಜೇಂದ್ರ ಮೃತಪಟ್ಟಿರುವುದು.
ಶಿವಮೊಗ್ಗ ತಾಲ್ಲೂಕಿನ ಸಕ್ರೆಬೈಲು ಅರಣ್ಯ ಪ್ರದೇಶದಲ್ಲಿ ಶನಿವಾರ ಆನೆ ಬಿಡಾರದ ಆನೆ ರಾಜೇಂದ್ರ ಮೃತಪಟ್ಟಿರುವುದು.   

ಶಿವಮೊಗ್ಗ: ಕಾಡಾನೆಗಳು ಮಾರಣಾಂತಿಕವಾಗಿ ದಾಳಿ ಮಾಡಿದ ಕಾರಣ ಸಾಕಾನೆಯೊಂದು ಮೃತಪಟ್ಟ ಘಟನೆ ತಾಲ್ಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಪ್ರತಿ ದಿನದ ಅಭ್ಯಾಸದಂತೆ ಶನಿವಾರ ಸಂಜೆ ಹಸಿರು ತಿನ್ನಲು ಬಿಡಾರದ ಆನೆಗಳನ್ನು ಕಾಡಿಗೆ ಬಿಡಲಾಗಿತ್ತು. ಆದರೆ, ಸುಮಾರು 33 ವರ್ಷದ ಆನೆ ರಾಜೇಂದ್ರ ರಾತ್ರಿ ಬಿಡಾರಕ್ಕೆ ಹಿಂತಿರುಗದ ಕಾರಣ ಭಾನುವಾರ ಬೆಳಿಗ್ಗೆ ಸಿಬ್ಬಂದಿ ಅರಣ್ಯದಲ್ಲಿ ಶೋಧನೆ ನಡೆಸಿದರು. ಜೇನುಕಲ್ಲುಸರ ಬಳಿ ರಾಜೇಂದ್ರ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಕಾಡಾನೆಯೊಂದಿಗೆ ಕಾಳಗ ನಡೆಸುವಾಗ ರಾಜೇಂದ್ರ ಆನೆಗೆ ತಲೆ ಮತ್ತು ಹಿಂಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಆನೆಗಳ ಕಿತ್ತಾಟದಲ್ಲಿ ನಿಯಂತ್ರಣ ಕಳೆದುಕೊಂಡು ಸುಮಾರು ನೂರು ಅಡಿ ಎತ್ತರದ ಗುಡ್ಡದಂತಹ ಜಾಗದಿಂದ ರಾಜೇಂದ್ರ ಕೆಳಕ್ಕೆ ಉರುಳಿ ಬಿದ್ದಿದೆ. ಬಿದ್ದ ರಭಸಕ್ಕೆ ಕುತ್ತಿಗೆಯ ಮೂಳೆ ಮುರಿದ ಕಾರಣ ಮೃತಪಟ್ಟಿದೆ ಎಂದು ಮಾಹಿತಿ ನೀಡಿದರು.

ಕೊಲ್ಲೂರು ದೇವಾಲಯ ಮೂಲದ ರಾಜೇಂದ್ರನನ್ನು ಪಳಗಿಸುವ ಉದ್ದೇಶದಿಂದ ಒಂದು ವರ್ಷದ ಅವಧಿಗೆ 2006ರಲ್ಲಿ ಸಕ್ರೆಬೈಲು ಆನೆ ಬಿಡಾರಕ್ಕೆ ಬಿಡಲಾಗಿತ್ತು. ಆದರೆ, ನಂತರ ದೇವಾಲಯದವರು ಅರಣ್ಯ ಇಲಾಖೆಗೆ ರಾಜೇಂದ್ರನನ್ನು ಹಸ್ತಾಂತರಿಸಿದ್ದರು.

ಸಕ್ರೆಬೈಲಿಗೆ 3 ಆನೆಗಳು
ಸಕ್ರೆಬೈಲು ಆನೆ ಬಿಡಾರಕ್ಕೆ ಕಾಕನಕೋಟೆ ಅರಣ್ಯ ಪ್ರದೇಶದಿಂದ ಮೂರು ಆನೆಗಳನ್ನು ಶೀಘ್ರದಲ್ಲಿ ತರಿಸಲಾಗುತ್ತಿದ್ದು, ಬಿಡಾರದಲ್ಲಿ ಆನೆಗಳ ಸಂಖ್ಯೆ 19 ಆಗಲಿದೆ ಎಂದು ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ರವಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.