ADVERTISEMENT

ಸಾಗರಕ್ಕೆ ಕಾಲಿಟ್ಟ ಭೂಸ್ವಾಧೀನದ ಮತ್ತೊಂದು ಭೂತ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2011, 7:15 IST
Last Updated 3 ನವೆಂಬರ್ 2011, 7:15 IST
ಸಾಗರಕ್ಕೆ ಕಾಲಿಟ್ಟ ಭೂಸ್ವಾಧೀನದ ಮತ್ತೊಂದು ಭೂತ
ಸಾಗರಕ್ಕೆ ಕಾಲಿಟ್ಟ ಭೂಸ್ವಾಧೀನದ ಮತ್ತೊಂದು ಭೂತ   

ಸಾಗರ: ತಾಲ್ಲೂಕಿನ ಕುಗ್ವೆ ಗ್ರಾಮದಲ್ಲಿ ವಸತಿ ಉದ್ದೇಶಕ್ಕಾಗಿ ಗೃಹಮಂಡಳಿ 101 ಎಕರೆ ಕೃಷಿಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿ ಈಗ ಆ ನಿರ್ಧಾರವನ್ನು ಕೈಬಿಟ್ಟಿದೆ ಎಂಬ ಸುದ್ದಿಯ ಬೆನ್ನಲ್ಲೇ ತಾಲ್ಲೂಕಿಗೆ ಮತ್ತೊಂದು ಭೂಸ್ವಾಧೀನದ `ಭೂತ~ ಕಾಡಲು ಆರಂಭಿಸಿದೆ.

ತಾಲ್ಲೂಕಿನ ಕಸಬಾ ಹೋಬಳಿ ಮಡಸೂರು (ಮಜರೆ ಉಪ್ಪಳ್ಳಿ) ಗ್ರಾಮದಲ್ಲಿ `ಮಲೆನಾಡು ಅಭಿವೃದ್ಧಿ ಗಿಡ್ಡತಳಿ ಕೇಂದ್ರ~ ಸ್ಥಾಪನೆಗೆ  ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ 246.20 ಎಕರೆ ಕಂದಾಯ ಭೂಮಿಯನ್ನು ಮಂಜೂರು ಮಾಡುವಂತೆ 2011ರ ಏಪ್ರಿಲ್ 27 ರಂದು ಜಿಲ್ಲಾಡಳಿತವನ್ನು ಕೇಳಿತ್ತು.

ಜಿಲ್ಲಾಧಿಕಾರಿ ಶಿಫಾರಸಿನ ಮೇರೆಗೆ ಇಲ್ಲಿನ ಉಪ ವಿಭಾಗಾಧಿಕಾರಿ 2011ರ ಸೆಪ್ಟೆಂಬರ್ 28ರಂದು 246.20 ಎಕರೆ ಭೂಮಿ ಮಂಜೂರು ಮಾಡಬಹುದು ಎಂದು ಶಿಫಾರಸು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸದರಿ ಭೂಮಿಯ ಮಾರುಕಟ್ಟೆ ದರದ ಶೇ. 50ರಷ್ಟು ಮೊತ್ತವನ್ನು ಸರ್ಕಾರಕ್ಕೆ ವಿವಿ ಪಾವತಿ ಮಾಡಬೇಕು ಎಂದು ಅವರು ಷರತ್ತು ವಿಧಿಸಿದ್ದಾರೆ.

ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಲು ಮುಂದಾಗಿರುವ ಭೂಮಿಯಲ್ಲಿ ಹಕ್ಕುಪತ್ರ ಪಡೆದ ರೈತರು, ದರಖಾಸ್ತಿನಲ್ಲಿ ಮಂಜೂರಾತಿ ಪಡೆದ ಕೃಷಿಕರು, ಬಗರ್‌ಹುಕುಂ ಸಾಗುವಳಿದಾರರು ಇದ್ದಾರೆ. ಅಲ್ಲದೇ, ಈ ಪ್ರದೇಶ ಸೊಪ್ಪಿನ ಬೆಟ್ಟ, ಗೋಮಾಳ ಹಾಗೂ ಗ್ರಾ.ಪಂ. ಊರಿನವರಿಗೆ ನಿವೇಶನ ವಿತರಿಸಲು ಕಾಯ್ದಿರಿಸಿಕೊಂಡಿರುವ ಊರೊಟ್ಟಿನ ಜಾಗ, ಕಾಡು ಬೆಳೆಸಲು ಉಳಿಸಿಕೊಂಡಿರುವ ಪ್ರದೇಶವೂ ಸೇರಿದೆ. ಇದಲ್ಲದೆ 70 ಮನೆಗಳು ಇಲ್ಲಿವೆ.

ಉದ್ದೇಶಿತ ಮಲೆನಾಡು ಅಭಿವೃದ್ಧಿ ಗಿಡ್ಡತಳಿ ಕೇಂದ್ರ ಸ್ಥಾಪನೆಯಾದಲ್ಲಿ ಸುಮಾರು 100 ರೈತ ಕುಟುಂಬಗಳು ತಮ್ಮ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಇದನ್ನು ಪರಿಗಣಿಸದೆ ಉಪ ವಿಭಾಗಾಧಿಕಾರಿ ಹೊರಡಿಸಿರುವ ಆದೇಶದ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನಗೊಂಡಿದ್ದು, ಬೀದಿಗಿಳಿದು ಹೋರಾಡಲು ಹಾಗೂ ಕಾನೂನು ಸಮರ ನಡೆಸಲು ಸಜ್ಜಾಗಿದ್ದಾರೆ.

ರಾಜ್ಯ ಸರ್ಕಾರ ಈ ಭಾಗದಲ್ಲೆ ಮಲೆನಾಡು ಅಭಿವೃದ್ಧಿ ಗಿಡ್ಡತಳಿ ಕೇಂದ್ರ ಸ್ಥಾಪನೆ ಮಾಡಲು ಮುಂದಾಗಿರುವುದಕ್ಕೆ ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ.ಶ್ರೀ. ಆನಂದ್ ಅವರೇ ಕಾರಣ ಎಂದು ಗ್ರಾಮಸ್ಥರು ಭಾವಿಸಿದ್ದಾರೆ. ಆನಂದ್ ಉಪ್ಪಳ್ಳಿ ಗ್ರಾಮದ ಅಳಿಯ ಆಗಿದ್ದು, ಪ್ರಸ್ತಾವಿತ ಕೇಂದ್ರ ಸ್ಥಾಪನೆ ಮಾಡಲು ಉದ್ದೇಶಿಸಿರುವ ಸ್ಥಳದ ಸಮೀಪದಲ್ಲೆ ಅವರ ಕುಟುಂಬಕ್ಕೆ ಸೇರಿದ ಭೂಮಿ ಇದ್ದು, ಕೇಂದ್ರದ ಹೆಸರಿನಲ್ಲಿ ವೈಯುಕ್ತಿಕ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಬಗ್ಗೆ ಆ.ಶ್ರೀ. ಆನಂದ್ ಅವರನ್ನು `ಮಲೆನಾಡು ಅಭಿವೃದ್ಧಿ ಗಿಡ್ಡತಳಿ ಕೇಂದ್ರವನ್ನು ಮಲೆನಾಡಿನಲ್ಲೇ ಸ್ಥಾಪಿಸಬೇಕು. ಬೇರೆ ಕಡೆ ಸಾಧ್ಯವಿಲ್ಲ. ಆದರೆ,ಇದಕ್ಕಾಗಿ ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯಿಂದ ರೈತರಿಗೆ ಲಿಖಿತ ಭರವಸೆ ಕೊಡಿಸುತ್ತೇನೆ~ ಎಂದರು.

ಉಪ ವಿಭಾಗಾಧಿಕಾರಿ ಮಾಡಿರುವ ಆದೇಶದಲ್ಲಿ ಈಗಾಗಲೇ ರೈತರ ಹಿಡುವಳಿಯಲ್ಲಿರುವ ಪ್ರದೇಶವನ್ನು ಉದ್ದೇಶಿತ ಯೋಜನೆ ನಿರ್ಮಾಣದ ಕುರಿತು ಭೂಸ್ವಾಧೀನ ಪ್ರಕ್ರಿಯೆ ಮೂಲಕ ವಶಪಡಿಸಿಕೊಳ್ಳಬಹುದು. ಸರ್ಕಾರದ ಅನುಮೋದನೆ ಪಡೆದ ನಂತರ ಈ ಬಗ್ಗೆ ಪ್ರತ್ಯೇಕ ಕ್ರಮ ಕೈಗೊಳ್ಳುತ್ತಿರುವ ಕಾರಣ ಆನಂದ್ ಅವರ ಮಾತನ್ನು ರೈತರು ನಂಬುವ ಸ್ಥಿತಿಯಲ್ಲಿ ಇಲ್ಲ. 
 
ರೈತರು ಗ್ರಾಮದ ಭೂಮಿ ಉಳಿಸಿ ಎಂಬ ಹೋರಾಟ ಸಮಿತಿಯನ್ನು ರಚಿಸಿಕೊಂಡಿದ್ದು ನ. 3ರಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ಹಲವು ಯೋಜನೆಗಳಿಗಾಗಿ ಈಗಾಗಲೇ ಸಾಕಷ್ಟು ಭೂಮಿ ಕಳೆದುಕೊಂಡಿರುವ ಈ ತಾಲ್ಲೂಕಿನ ರೈತರು ಮತ್ತೆ ತಮ್ಮ ಭೂಮಿಯನ್ನು ಕಳೆದುಕೊಳ್ಳಲು ಸಿದ್ದರಿಲ್ಲ.

ಭೂಮಿಯ ಹಕ್ಕಿಗಾಗಿ ಐತಿಹಾಸಿಕ ಸತ್ಯಾಗ್ರಹವೇ ನಡೆದ ಈ ಊರಿನಲ್ಲಿ ಇರುವ ಭೂಮಿಯನ್ನು ಉಳಿಸಿಕೊಳ್ಳಲು ರೈತರು ಸರ್ಕಾರದ ವಿರುದ್ಧವೇ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಎಂ. ರಾಘವೇಂದ್ರ

ಶಿಫಾರಸು
ತಾಲ್ಲೂಕಿನ ಮಡಸೂರು (ಮಜರೆ ಉಪ್ಪಳ್ಳಿ) ಗ್ರಾಮದಲ್ಲಿನ 246.20 ಎಕರೆ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮಲೆನಾಡು ಅಭಿವೃದ್ಧಿ ಗಿಡ್ಡತಳಿ ಕೇಂದ್ರ ಸ್ಥಾಪನೆ ಮಾಡಬಾರದು ಎಂದು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು 2011ರ ಮೇ 26ರಂದೇ ತಹಶೀಲ್ದಾರ್‌ಗೆ ಪತ್ರ ಬರೆದಿದ್ದಾರೆ.  ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ADVERTISEMENT

ಉಪ ವಿಭಾಗಾಧಿಕಾರಿ ಈ ಪತ್ರಕ್ಕೆ ಯಾವುದೇ ಬೆಲೆಯನ್ನೂ ನೀಡದೆ ಭೂಮಿಯನ್ನು ಮಂಜೂರು ಮಾಡಲು ಶಿಫಾರಸು ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.