ADVERTISEMENT

ಸಾರ್ವಜನಿಕ ಹಿತ ಕಾಪಾಡುವ ಕಾಮಗಾರಿಗೆ ಆದ್ಯತೆ ಇರಲಿ: ಕಿಮ್ಮನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 9:31 IST
Last Updated 20 ಅಕ್ಟೋಬರ್ 2017, 9:31 IST

ತೀರ್ಥಹಳ್ಳಿ: ವೋಟ್‌ ಬ್ಯಾಂಕ್‌ ರಾಜಕಾರಣವನ್ನು ಮುಖ್ಯವಾಗಿಸಿಕೊಳ್ಳದೇ ಮೌಲ್ಯಯುತ ರಾಜಕಾರಣ ಮಾಡಿದರೆ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶಾಸಕ ಕಿಮ್ಮನೆ ರತ್ನಾಕರ ಹೇಳಿದರು. ತಾಲ್ಲೂಕಿನ ಮಂಡಗದ್ದೆ ಸಿಂಗನಬಿದರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಚೆಗೆ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಹಿತವನ್ನು ಕಾಪಾಡುವ ಕಾಮಗಾರಿಗೆ ಅನುದಾನವನ್ನು ನೀಡುವಾಗ ತಾರತಮ್ಯ ತೋರಿದರೆ ಅಧಿಕಾರಕ್ಕೆ ಅರ್ಥವಿರಲಾರದು ಎಂದು ಕಿಮ್ಮನೆ ಹೇಳಿದರು.
ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಯಾವುದೇ ಕೆಟ್ಟ ರಾಜಕಾರಣಕ್ಕೆ ಅವಕಾಶ ನೀಡಿಲ್ಲ. ರಾಜಕೀಯ ಮೀರಿದ ಅಭಿವೃದ್ಧಿಯ ದೃಷ್ಟಿಕೋನ ಜನಪ್ರತಿನಿಧಿಗಳಿಗೆ ಇರಬೇಕು ಎಂದರು.

ಸಿಂಗನಬಿದರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಳಲೆ ಗ್ರಾಮದ ಕೀಗಡಿ ಸಂಪರ್ಕ ರಸ್ತೆ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದು, ₨ 4 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ADVERTISEMENT

ಮಂಡಗದ್ದೆಯಲ್ಲಿ ನೀರಾವರಿ ನಿಗಮ ವಿಶೇಷ ಘಟಕ ಯೋಜನೆ ಅಡಿಯಲ್ಲಿ ನಿರ್ಮಿಸಿದ ₨ 30 ಲಕ್ಷ ವೆಚ್ಚದ ಸಮುದಾಯ ಭವನ ಕಟ್ಟಡವನ್ನು ಶಾಸಕ ಕಿಮ್ಮನೆ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಕಾಸರವಳ್ಳಿ ಶ್ರೀನಿವಾಸ್‌, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನವಮಣಿ, ಸದಸ್ಯ ಬೇಗುವಳ್ಳಿ ಕವಿರಾಜ್‌, ಎಪಿಎಂಸಿ ಅಧ್ಯಕ್ಷ ಕೇಳೂರು ಮಿತ್ರ, ಮಂಡಗದ್ದೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಧುಶೆಟ್ಟಿ, ಸದಸ್ಯ ಕೆ.ಎನ್‌.ಮಹೇಶ್‌ಗೌಡ, ಮುಖಂಡರಾದ ಮುಡುಬ ರಾಘವೇಂದ್ರ, ನ್ಯಾಷನಲ್‌ ಸಮೂಹ ಸಂಸ್ಥೆ ಮುಖ್ಯಸ್ಥ ಅಬ್ದುಲ್‌ ರೆಹೆಮಾನ್‌ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.