ADVERTISEMENT

ಸಿಗ್ನಲ್ ಸ್ಥಗಿತ; ಗಂಟೆ ಕಟ್ಟುವರು ಯಾರು...

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 5:15 IST
Last Updated 19 ನವೆಂಬರ್ 2012, 5:15 IST

ಭದ್ರಾವತಿ: ಇಲ್ಲಿನ ಪ್ರಮುಖ ವೃತ್ತದ ಸಿಗ್ನಲ್ ದೀಪಗಳು ತಮ್ಮ ಕಾರ್ಯ ಸ್ಥಗಿತಗೊಂಡು ತಿಂಗಳುಗಳೇ ಉರುಳಿದರು, ಇದರ ಜವಾಬ್ದಾರಿ ಹೊತ್ತವರು ಮಾತ್ರ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸರಿ ಸುಮಾರು ಐದಾರು ವರ್ಷದ ಹಿಂದೆ ರಂಗಪ್ಪ ವೃತ್ತದಲ್ಲಿ ಮೊದಲ ಸಿಗ್ನಲ್ ದೀಪವನ್ನು ಪೊಲೀಸ್ ಇಲಾಖೆ ಸೌರಶಕ್ತಿ ಬಳಕೆ ಮೂಲಕ ಆರಂಭಿಸಿದ್ದು, ನಂತರದ ವರ್ಷದಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಮಾಧವಚಾರ್ ಹಾಗೂ ಅಂಬೇಡ್ಕರ್ ವೃತ್ತದಲ್ಲಿ ಇದರ ವ್ಯವಸ್ಥೆ ಕಲ್ಪಿಸಿತು.

ಅಲ್ಲಿಂದ ಎರಡು ವರ್ಷ ಯಾವುದೇ ಅಡೆತಡೆ ಇಲ್ಲದೇ ತನ್ನ ಶಕ್ತಿ ಪ್ರದರ್ಶಿಸಿದ ಈ ಸಿಗ್ನಲ್ ಕಂಬಗಳು ಕ್ರಮೇಣ, ವಿದ್ಯುತ್ ಸಮಸ್ಯೆ ಹಾಗೂ ಇನ್ನಿತರೆ ಕಾರಣಗಳಿಂದ ಸ್ಥಗಿತವಾಗಿತ್ತು.

ನಂತರದ ದಿನದಲ್ಲಿ ಈ ಕುರಿತಾಗಿ ಒಂದಿಷ್ಟು ತಲೆ ಕೆಡಿಸಿಕೊಂಡ ಪೊಲೀಸ್ ಇಲಾಖೆ ಪುನಃ ನಗರಾಭಿವೃದ್ಧಿ ಪ್ರಾಧಿಕಾರದ ಮೊರೆ ಹೊಕ್ಕಿತ್ತು. ಇದಕ್ಕೆ ಬೆಂಬಲ ನೀಡುವ ರೀತಿಯಲ್ಲಿ ಪ್ರಾಧಿಕಾರ ್ಙ 2ಲಕ್ಷ ವೆಚ್ಚ ಮಾಡಿ ಅದರ ದುರಸ್ತಿ, ಇನ್ನಿತರೆ ಕೆಲಸ ಪೂರೈಸಿ ನಿರ್ವಹಣೆಗಾಗಿ ನಗರಸಭೆಗೆ ಒಪ್ಪಿಸಿತು.

ಈಗ ಇದರ ಉಸ್ತುವರಿ ನಗರಸಭೆ ಅಧೀನಕ್ಕೆ ಒಪ್ಪಟ್ಟಿದ್ದು, ಇದರತ್ತ ದೃಷ್ಟಿಹರಿಸುವ ಕೆಲಸವನ್ನು ಮಾತ್ರ ಸ್ಥಳೀಯಾಡಳಿತ ಮಾಡಿಲ್ಲ. ಇದರ ಪರಿಣಾಮ ಮೆಸ್ಕಾಂ ಉಪ ವಿಭಾಗಕ್ಕೆ ಭರ್ತಿ ಮಾಡಿ ಪಡೆಯಬೇಕಾದ ವಿದ್ಯುತ್ ಸೌಕರ್ಯ ಕೊರತೆ ಕಾರಣ ಸಿಗ್ನಲ್ ದೀಪಗಳು ತಮ್ಮ ಆಸ್ತಿತ್ವ ಕಳೆದುಕೊಂಡಿವೆ.

ಇಲಾಖೆ ಪತ್ರ ಬರೆದಿದೆ: ಈ ದೀಪಗಳ ಸಮರ್ಪಕ ಸೇವೆಯ ನಿರ್ವಹಣೆ ಮಾಡಬೇಕಾದ ಪೊಲೀಸ್ ಇಲಾಖೆ ಹಲವು ಪತ್ರಗಳನ್ನು ನಗರಸಭೆಗೆ ಬರೆದಿದ್ದರೂ ಸಹ ಯಾವುದೇ ಸಮರ್ಪಕ ಉತ್ತರ ದೊರೆತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಆರಂಭದಲ್ಲಿ ಇಲಾಖೆ ಸ್ಥಾಪಿಸಿದ ವ್ಯವಸ್ಥೆಗೆ ಜತೆಯಾಗಿ ನಿಂತ `ಸೂಡಾ~ ಹೆಚ್ಚಿನ ಸಹಕಾರ ನೀಡಿ ಅದರ ವಿಸ್ತರಣೆಗೂ ಸಹಕಾರ ನೀಡಿದೆ. ಜತೆಗೆ, ಇತ್ತೀಚೆಗೆ ಅದರ ರಿಪೇರಿ ಕಾರ್ಯಕ್ಕೂ ನೆರವು ನೀಡಿದೆ. ಅದನ್ನು ಮುಂದುವರಿಸುವ ಹೊಣೆಗಾರಿಕೆ ಹೊರಬೇಕಾದ ನಗರಸಭೆ ಇದರಿಂದ ದೂರ ಸರಿದಿದೆ ಎಂಬ ಅಭಿಪ್ರಾಯ ಇಲಾಖೆಯದು.

ಪ್ರಯತ್ನ ನಡೆದಿದೆ: ಸಿಗ್ನಲ್ ದೀಪಗಳ ಉಸ್ತುವಾರಿ, ನಿರ್ವಹಣೆ ನಗರಸಭೆ ಅಧೀನಕ್ಕೆ ಬಂದಿದೆ. ಆದರೆ, ಅದಕ್ಕೆ ವಿದ್ಯುತ್ ಸಂಪರ್ಕ ಕೊಡಿಸುವ ಸಂಬಂಧ ಕೆಲವು ತೊಡಕಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿ.
ವಾರ್ಷಿಕ ನಿರ್ವಹಣಾ ವೆಚ್ಚವೇ ಹೆಚ್ಚು ಬರುತ್ತದೆ. ಇದಕ್ಕೆ ಬೇಕಾದ ಸಂಪನ್ಮೂಲ ಕ್ರೋಡೀಕರಣ ನಮಗೆ ಹೊರೆ ಎಂದು ಸಬೂಬು ಹೇಳುವ ಅಧಿಕಾರಿಗಳು, ಮುಂದಿನ ದಿನದಲ್ಲಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವ ಭರವಸೆ ಮಾತನ್ನಾಡುತ್ತಾರೆ.

ಒಟ್ಟಿನಲ್ಲಿ ಹಲವು ಲಕ್ಷಗಳ ವೆಚ್ಚದಲ್ಲಿ ಮಾಡಲಾದ ಯೋಜನೆಯೊಂದು ಜನರ ಉಪಯೋಗಕ್ಕೆ ಬಾರದೆ ಮೂಲೆ ಸೇರಿದ್ದು, ಇದರ ಹೊಣೆ ಹೊತ್ತಿರುವ ಸ್ಥಳೀಯಾಡಳಿತ ಮಾತ್ರ ಜಾಣತನದ ಹೆಜ್ಜೆ ಇಟ್ಟಿದೆ. ಈಗ ಈ ವ್ಯವಸ್ಥೆಗೆ `ಗಂಟೆ ಕಟ್ಟುವರು ಯಾರು...~ ಎಂಬುದೇ ಚರ್ಚೆಯ ವಿಷಯ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.